ಸಂವಿಧಾನ ಗೌರವಿಸುವವರಿಗೆ ಮತ ನೀಡಲು ಡಾ.ಎಲ್.ಹನುಮಂತಯ್ಯ ಮನವಿ

Update: 2019-04-05 13:11 GMT

ಬೆಂಗಳೂರು, ಎ.5: ನಮ್ಮ ಸಂವಿಧಾನ ಉಳಿದರೆ ಮಾತ್ರ ಪ್ರಜಾಪ್ರಭುತ್ವ ಉಳಿಯಲು ಸಾಧ್ಯ. ಹೀಗಾಗಿ ನಾವು ಅಧಿಕಾರಕ್ಕೆ ಬಂದಿರುವುದೆ ಸಂವಿಧಾನವನ್ನು ನಾಶ ಮಾಡುವುದಕ್ಕೆ ಎಂದು ಬಹಿರಂಗ ಹೇಳಿಕೆ ನೀಡುವ ಬಿಜೆಪಿ ಅಭ್ಯರ್ಥಿಗಳಿಗೆ ಮತ ಹಾಕಬೇಕೆ, ಬೇಡವೆ ಎಂಬುದನ್ನು ಮತದಾರರು ನಿರ್ಧರಿಸುತ್ತಾರೆ ಎಂದು ಡಾ.ಎಲ್.ಹನುಮಂತಯ್ಯ ತಿಳಿಸಿದರು.

ಶುಕ್ರವಾರ ಜಯನಗರದ ಖಾಸಗಿ ಹೊಟೇಲ್ ಆಯೋಜಿಸಿದ್ದ ಪ್ರಗತಿಪರ ಸಾಹಿತಿಗಳೊಂದಿಗಿನ ಸಭೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಕಳೆದ ಐದು ವರ್ಷದಲ್ಲಿ ಜಾತ್ಯತೀತ, ಪ್ರಜಾಪ್ರಭುತ್ವ, ಸಂವಿಧಾನದ ಮೌಲ್ಯಗಳ ಮೇಲೆ ವ್ಯವಸ್ಥಿತ ದಾಳಿಗಳು ನಡೆದಿವೆ. ಮತ್ತೆ ಕೇಂದ್ರದಲ್ಲಿ ಬಿಜೆಪಿಯೇ ಅಧಿಕಾರಕ್ಕೆ ಬಂದರೆ ಸಂವಿಧಾನದ ಆಶಯಗಳನ್ನೆ ಇಲ್ಲವಾಗಿಸುವ ಹುನ್ನಾರ ಇದೆ ಆತಂಕ ವ್ಯಕ್ತಪಡಿಸಿದರು.

ದೇಶದಲ್ಲಿ ಜನಪರವಾದ ಸರಕಾರ ಇದ್ದರೆ ಮಾತ್ರ ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸಾಧ್ಯ. ನಮ್ಮ ಜನತೆಗೆ ಮೂಲಭೂತ ಅವಶ್ಯಕತೆಗಳ ಜೊತೆಗೆ ವಾಕ್ ಸ್ವಾತಂತ್ರ, ಧಾರ್ಮಿಕ ಸ್ವಾತಂತ್ರ ಹಾಗೂ ಬಹುತ್ವಗಳನ್ನು ಗೌರವಿಸುವಂತಹ ಸರಕಾರ ಬೇಕಾಗಿದೆ. ಹೀಗಾಗಿ, ಮತದಾರರು ಜಾತ್ಯತೀತ ಪಕ್ಷಗಳಿಗೆ ಮತ ನೀಡುವಂತೆ ಅವರು ಹೇಳಿದರು.

ಲೇಖಕಿ ಕೆ.ಷರೀಫಾ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಗೋಧ್ರಾ ಹತ್ಯಾಕಾಂಡದ ರೂವಾರಿಗಳು. ಈ ಹತ್ಯಾಕಾಂಡದ ಸಾಕ್ಷಗಳನ್ನು ನಾಶ ಮಾಡಿ ದೇಶವನ್ನು ಆಳ್ವಿಕೆ ನಡೆಸುತ್ತಿದ್ದಾರೆ. ಇಂತವರ ಕೈ ಕೆಳಗೆ ನಾವು ಬದುಕಬೇಕೆ ಎಂಬುದನ್ನು ಜನತೆ ಸಮಾಲೋಚಿಸಬೇಕಿದೆ ಎಂದು ಮನವಿ ಮಾಡಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವಿವೇಕಿ, ಮತಾಂಧನ ರೀತಿ ಮಾತನಾಡುತ್ತಾನೆ. ಮಹಿಳೆಯರ ಬಗ್ಗೆ ಯಾವ್ಯಾವ ಮಾತುಗಳನ್ನ ಆಡಿದ್ದಾರೆ ಎನ್ನುವುದು ನಮ್ಮ ಮುಂದೆ ಇದೆ. ಇಂತವರನ್ನು ಆಯ್ಕೆ ಮಾಡಿ ಲೋಕಸಭೆಗೆ ಕಳುಹಿಸಿದರೆ ಕಿಂಚಿತ್ತಾದರು ಪ್ರಯೋಜನವಿದೆಯೇ ಎಂದು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News