ಯಡಿಯೂರಪ್ಪಗೆ ಆಪರೇಷನ್ ಆದರೆ ಹಿಂದೂ ರಕ್ತವನ್ನೇ ಕೊಡಿ ಎಂದು ಕೇಳುತ್ತಾರಾ?: ಸಿದ್ದರಾಮಯ್ಯ ಪ್ರಶ್ನೆ

Update: 2019-04-05 14:48 GMT

ಬೆಂಗಳೂರು, ಎ.5: ಪ್ರಧಾನಿ ನರೇಂದ್ರ ಮೋದಿ ತಮ್ಮ ಐದು ವರ್ಷಗಳ ಆಡಳಿತಾವಧಿಯಲ್ಲಿ ಏನು ಸಾಧನೆ ಮಾಡಿದ್ದಾರೆ ಎಂಬುದರ ಬಗ್ಗೆ ದೇಶಕ್ಕೆ ಲೆಕ್ಕ ಕೊಡಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದರು.

ಶುಕ್ರವಾರ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಸುಬ್ರಹ್ಮಣ್ಯ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರು ನೆನಪಿನಲ್ಲಿಟ್ಟುಕೊಳ್ಳುವಂತಹ ಒಂದೇ ಒಂದು ಕೆಲಸವನ್ನು ನರೇಂದ್ರ ಮೋದಿ ಈವರೆಗೆ ಮಾಡಿಲ್ಲ ಎಂದು ಟೀಕಿಸಿದರು. ನರೇಂದ್ರ ಮೋದಿ ಹಾಗೂ ನಮಗೂ ವೈಯಕ್ತಿಕ ದ್ವೇಷ ಇಲ್ಲ. ರಾಜಕೀಯವಾಗಿ ಮಾತ್ರ ನಾವು ವಿರೋಧಿಗಳು. ಅಭಿವೃದ್ಧಿ ಬಗ್ಗೆ ಅವರು ಎಲ್ಲೂ ಮಾತನಾಡಲ್ಲ. ಐದು ವರ್ಷ ನಾನು ಕೂಡ ಮುಖ್ಯಮಂತ್ರಿ ಆಗಿದ್ದೆ. ಏನು ಮಾಡಿದ್ದೆ, ಏನು ಹೇಳಿದ್ದೆ ಎಂಬುದನ್ನು ಜನರ ಎದುರು ಹೇಳಲು ನಾನು ಸಿದ್ಧ ಎಂದು ಅವರು ಹೇಳಿದರು.

ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡುತ್ತೇನೆ ಎಂದು ಮೋದಿ ಹೇಳಿದ್ದರು. ಆದರೆ, ಇರುವ ಉದ್ಯೋಗಗಳನ್ನು ಕಿತ್ತು ಕೊಳ್ಳುತ್ತಿದ್ದಾರೆ. ಸಣ್ಣ ಕೈಗಾರಿಕೆಗಳನ್ನು ಮುಚ್ಚಲಾಗುತ್ತಿದೆ. ಬಿಎಸ್ಸೆನ್ನೆಲ್‌ನಲ್ಲಿ 54 ಸಾವಿರ ಉದ್ಯೋಗಿಗಳನ್ನು ತೆಗೆಯುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಯವರು ಸ್ವಾರ್ಥಕ್ಕಾಗಿ ಹಿಂದುತ್ವ ಉಪಯೋಗಿಸಿಕೊಳ್ಳುತ್ತಿದ್ದಾರೆ. ಹಿಂದು ಪದವನ್ನು ಇವರು ಗುತ್ತಿಗೆ ತೆಗೆದುಕೊಂಡಿದ್ದಾರಾ? ಸದಾನಂದಗೌಡರಿಗೆ ರೈಲ್ವೆ ಮಂತ್ರಿ ಸ್ಥಾನವನ್ನು ಯಾಕೆ ಕಿತ್ತುಕೊಂಡರು ಅಂತ ಕೇಳಿದರೆ ಅದಕ್ಕೂ ನಗ್ತಾರೆ. ಸಮರ್ಥರಾಗಿದ್ದರೆ ಕಿತ್ತು ಹಾಕುತ್ತಿದ್ರಾ? ಅಸಮರ್ಥರಾಗಿದ್ದಕ್ಕೆ ಕಿತ್ತಾಕಿದ್ದು ಎಂದು ಅವರು ಟೀಕಿಸಿದರು.

ನಾವು ರೈತರ ಸಾಲ ಮನ್ನಾ ಮಾಡಿದ್ದೇವೆ. ನರೇಂದ್ರ ಮೋದಿಗೆ ಏನು ರೋಗ ಬಂದಿದೆ. ಬಡ ರೈತರ ಸಾಲ ಮನ್ನಾ ಮಾಡೋದು ಬಿಟ್ಟು ಬೃಹತ್ ಉದ್ಯಮಿಗಳಾದ ಅಂಬಾನಿ, ಅದಾನಿಗಳ ಸಾಲ ಮನ್ನಾ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಕಿಡಿಗಾರಿದರು. ಬಿಜೆಪಿಯವರು ಹಿಂದುತ್ವ ಇಟ್ಟುಕೊಂಡು ಚುನಾವಣೆ ಮಾಡುತ್ತಾರೆ. ಹಿಂದೂ-ಮುಸ್ಲಿಂ ಅಂತ ಭೇದ ಭಾವ ಮಾಡುತ್ತಾರೆ. ಯಡಿಯೂರಪ್ಪಗೆ ಒಂದು ವೇಳೆ ಆಪರೇಷನ್ ಆಗಿ ರಕ್ತ ಬೇಕು ಅಂದರೆ, ಹಿಂದೂ ರಕ್ತನೇ ಕೊಡಿ ಅಂತ ಕೇಳುತ್ತಾರಾ? ಮುಸ್ಲಿಮರ ರಕ್ತ ಕೊಟ್ಟರೆ ಒಳಗೆ ಹೋಗಲ್ವಾ ಎಂದು ಅವರು ಪ್ರಶ್ನಿಸಿದರು.

ಜಾತಿ-ಧರ್ಮದಿಂದ ಜನರನ್ನು ಒಡೆಯುವವರು ಸಮಾಜದ ಘಾತಕರು. ನಾನೇನು ಹಿಂದೂ ಅಲ್ವಾ? ಹಿಂದೂ ಧರ್ಮದಲ್ಲಿ ಬಡವರು, ದಲಿತರು ಇದ್ದಾರೆ. ಅವರಿಗೆ ಬಿಜೆಪಿ ಕೊಡುಗೆ ಏನು? ನನ್ನ ಅವಧಿಯಲ್ಲಿ ನಾನು ಉಚಿತವಾಗಿ ಅನ್ನಭಾಗ್ಯ ಯೋಜನೆ ಜಾರಿ ಮಾಡಿದೆ. ಅದರಲ್ಲಿ ಸಮಾಜದ ಎಲ್ಲ ವರ್ಗಗಳಿಗೂ ಅನುಕೂಲವಾಯಿತು ಎಂದು ಸಿದ್ದರಾಮಯ್ಯ ಹೇಳಿದರು.

ಬಿಜೆಪಿಯವರಿಗೆ ಸ್ವಂತಿಕೆಯಿಲ್ಲ. ಆದುದರಿಂದ, ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿಗಳು, ನರೇಂದ್ರಮೋದಿಯ ಮುಖವಾಡ ಹಾಕಿಕೊಂಡು ಜನರ ಮುಂದೆ ಬರುತ್ತಿದ್ದಾರೆ ಎಂದು ಸಿದ್ದರಾಮಯ್ಯ ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News