ನರೇಂದ್ರ ಮೋದಿ ಇತಿಹಾಸ ಮರೆಯುವುದು ಬೇಡ: ಮಾಜಿ ಸಿಎಂ ಸಿದ್ದರಾಮಯ್ಯ

Update: 2019-04-05 16:02 GMT

ಬೆಂಗಳೂರು, ಎ.5: ದೇಶದ ಸರ್ವಾಂಗೀಣ ಅಭಿವೃದ್ಧಿಗಾಗಿ, ರಕ್ಷಣೆಗಾಗಿ, ಜನಸಾಮಾನ್ಯರ ಕಲ್ಯಾಣಕ್ಕಾಗಿ ಕಾಂಗ್ರೆಸ್ ಸರಕಾರಗಳು ನೀಡಿರುವ ಕೊಡುಗೆ ಅಪಾರವಾದದ್ದು. ಪ್ರಧಾನಿ ನರೇಂದ್ರಮೋದಿ ಇತಿಹಾಸವನ್ನು ಮರೆಯುವುದು ಬೇಡ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಶುಕ್ರವಾರ ನಗರದ ಕೆ.ಆರ್.ಪುರದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಮೈದಾನದಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಭೈರೇಗೌಡ ಪರವಾಗಿ ಆಯೋಜಿಸಿದ್ದ ಬೃಹತ್ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ನರೇಂದ್ರಮೋದಿ ಒಬ್ಬರೇ ಈ ದೇಶ ರಕ್ಷಣೆ ಮಾಡುವವರು, ಬೇರೆ ಯಾರ ಕೈಯಲ್ಲು ದೇಶದ ರಕ್ಷಣೆ ಮಾಡಲು ಸಾಧ್ಯವಿಲ್ಲವೆಂಬ ತಪ್ಪುಮಾಹಿತಿಯನ್ನು ಬಿಜೆಪಿ ನಾಯಕರು ಜನ ಸಾಮಾನ್ಯರಿಗೆ ಕೊಡುತ್ತಿದ್ದಾರೆ. ಪುಲ್ವಾಮಾದಲ್ಲಿ 42 ಜನ ಯೋಧರು ಹುತಾತ್ಮರಾದರು. ದೇಶದ ಯೋಧರ ಬಗ್ಗೆ ನಮಗೆ ಅಪಾರ ಗೌರವವಿದೆ. ನಮ್ಮ ನಮನ ಸಲ್ಲಿಸಬೇಕಾದ್ದು ಸೈನಿಕರಿಗೆ ಹೊರತು, ಬಿಜೆಪಿಯವರಿಗಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಸರ್ಜಿಕಲ್ ಸ್ಟ್ರೈಕ್ ರಾಜಕೀಯವಾಗಿ ಬಳಸಿಕೊಳ್ಳಲು ಮೋದಿ, ಬಿಜೆಪಿ ಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ಸರಕಾರ ಇದ್ದಾಗಲೂ 12 ಸರ್ಜಿಕಲ್ ಸ್ಟ್ರೈಕ್ ಆಗಿದೆ, 4 ಯುದ್ದಗಳಾಗಿವೆ. ನಾಲ್ಕೂ ಬಾರಿಯೂ ಕೂಡ ನಾವು ಯುದ್ಧದಲ್ಲಿ ಎದುರಾಳಿಯನ್ನು ಸೋಲಿಸಿದ್ದೀವಿ. ಇಂದಿರಾಗಾಂಧಿ ಇದ್ದಾಗ ಯುದ್ಧ ಮಾಡಿ ಬಾಂಗ್ಲಾದೇಶ ನಿರ್ಮಾಣ ವಾಯಿತಲ್ಲ. ಅದನ್ನು ಮೋದಿ ಮಾಡಿದ್ದಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಬಿಜೆಪಿಯ ಹಿರಿಯ ನಾಯಕ ಅಟಲ್ ಬಿಹಾರಿ ವಾಜಪೇಯಿ, ಇಂದಿರಾಗಾಂಧಿಯನ್ನು ‘ದುರ್ಗೆ‘ ಎಂದು ಹೇಳಿದ್ದರು. ಮೋದಿಗೆ ಈ ಮಾತನ್ನು ನೆನಪಿಸಲು ಬಯಸುತ್ತೇನೆ. ಇತಿಹಾಸವನ್ನು ಯಾವತ್ತೂ ಮರೆಯಬಾರದು ಮೋದಿಯವರೇ ಎಂದು ಸಿದ್ದರಾಮಯ್ಯ ಹೇಳಿದರು.

ಬಿಜೆಪಿಯವರು ಈಗ ನಮ್ಮ ಮುಖ ನೋಡಬೇಡಿ, ಮೋದಿ ಮುಖ ನೋಡಿ ಮತ ಹಾಕಿ ಎಂದು ಕೇಳುತ್ತಿದ್ದಾರೆ. ಇಲ್ಲಿನ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಕೂಡ ನನ್ನ ಮುಖ ನೋಡಬೇಡಿ, ಮೋದಿ ಮುಖ ನೋಡಿ ಎನ್ನುತ್ತಿದ್ದಾರೆ. ಎಲ್ಲರ ಮುಖವನ್ನೂ ನೋಡಿ ಆಯ್ತು ಎಂದು ಅವರು ವ್ಯಂಗ್ಯವಾಡಿದರು.

ಸದಾನಂದಗೌಡರು ಈಗ ಮುಖಹೀನರಾಗಿದ್ದಾರೆ. ಏಕೆಂದರೆ, ಅವರು ಏನೂ ಕೆಲಸ ಮಾಡಿಲ್ಲ. ಟೀಕೆ ಮಾಡಬೇಕು, ಆದರೆ ಟೀಕೆ ಅರ್ಥಪೂರ್ಣವಾಗಿರಬೇಕು. ನರೇಂದ್ರ ಮೋದಿ ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಹುಟ್ಟಿದವರು. ಅವರೇನು ಸ್ವಾತಂತ್ರ ಹೋರಾಟ ಮಾಡಿದ್ರಾ? ಬಿಜೆಪಿಯವರು ಯಾರೂ ಸ್ವಾತಂತ್ರ್ಯ ಹೋರಾಟ ಮಾಡಿ ದೇಶಕ್ಕಾಗಿ ಬಲಿದಾನ ಆಗಿಲ್ಲ, ದೇಶಕ್ಕೆ ಸ್ವಾತಂತ್ರ್ಯ ಹೋರಾಟ ಮಾಡಿ, ಮನೆ ಮಠ ಕಳೆದುಕೊಂಡವರು ನೂರಾರು ಜನ ಇದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಭೈರೇಗೌಡ ಮಾತನಾಡಿ, ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಯಾರು ಎಂದು ಇಲ್ಲಿನ ಜನರಿಗೆ ಗೊತ್ತಿಲ್ಲ. ಯಾವತ್ತಾದರೂ ಅವರು ಜನರ ಕೈಗೆ ಸಿಕ್ಕಿದ್ದಾರೆಯೇ? ಅಭಿವೃದ್ಧಿ ಕೆಲಸಕ್ಕೆ ಎಂದಾದರೂ ಕಾಣಿಸಿದ್ದಾರಾ? ಯುಪಿಎ ಸರಕಾರವಿದ್ದಾಗ ತುಮಕೂರು, ಹೊಸೂರು, ವಿಮಾನ ನಿಲ್ದಾಣ ರಸ್ತೆಯಲ್ಲಿ ಮೇಲ್ಸೆತುವೆ ನಿರ್ಮಾಣವಾಯಿತು ಎಂದರು. ಆದರೆ, ಸಂಸದ ಸದಾನಂದಗೌಡರು ಈ ಕ್ಷೇತ್ರಕ್ಕೆ ಒಂದೇ ಒಂದು ಮೇಲ್ಸೆತುವೆ ಮಾಡಿಸುವ ಪ್ರಯತ್ನ ಮಾಡಿಲ್ಲ. ಕನಿಷ್ಟ ಅವರಿಗೆ ಇಲ್ಲಿ ಸಂಚಾರ ದಟ್ಟಣೆ ಸಮಸ್ಯೆಯಿದೆ ಅನ್ನೋ ಮಾಹಿತಿಯಾದರೂ ಇದೆಯಾ ಎಂದು ಅವರು ಪ್ರಶ್ನಿಸಿದರು.

ಯಾರು ಎಲ್ಲಿಂದ ಬಂದರೂ ಅನ್ನೋದು ಮುಖ್ಯವಲ್ಲ. ಆದರೆ, ಇಲ್ಲಿಗೆ ಬಂದ ಮೇಲೆ ಏನು ಮಾಡಿದರೂ ಅನ್ನೋದು ಮುಖ್ಯ. ಸದಾನಂದಗೌಡ ತನಗೆ ಮತ ಹಾಕಬೇಡಿ, ಮೋದಿಗೆ ಮತ ಹಾಕಿ ಅಂತಿದ್ದಾರೆ. ಸದಾನಂದಗೌಡ ಇಲ್ಲಿನ ಜನರ ಜೊತೆ ಬೆರೆಯದೇ, ಮಾನಸಿಕ ಹಾಗೂ ದೈಹಿಕವಾಗಿ ಹೊರಗಿನವರಾಗಿಯೇ ಉಳಿದು ಬಿಟ್ಟರು ಎಂದು ಕೃಷ್ಣಭೈರೇಗೌಡ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಬಿ.ಎ.ಬಸವರಾಜ ವಹಿಸಿದ್ದರು. ರಾಜ್ಯಸಭಾ ಸದಸ್ಯ ಕೆ.ಸಿ. ರಾಮಮೂರ್ತಿ, ಶಾಸಕ ಎಸ್.ಟಿ.ಸೋಮಶೇಖರ್, ಐವಾನ್ ನಿಗ್ಲಿ, ಬಿಬಿಎಂಪಿ ಸದಸ್ಯರು ಪಾಲ್ಗೊಂಡಿದ್ದರು.

ಬಿಜೆಪಿಯವರಿಗೆ ಸಾಮಾಜಿಕ ನ್ಯಾಯ, ಸರ್ವಧರ್ಮ ಸಮಾನತೆಯ ಮೇಲೆ ವಿಶ್ವಾಸವಿಲ್ಲ. ಕೇವಲ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟು ಜನರನ್ನು ಕೆರಳಿಸುವುದೇ ಅವರ ಕಾಯಕ. ಬಾಬರಿ ಮಸೀದಿಯನ್ನು ಕೆಡವಿ ಹಾಕಿದರು. ಕಳೆದ ಚುನಾವಣೆಯಲ್ಲಿ ರಾಮಮಂದಿರ ನಿರ್ಮಿಸುತ್ತೇವೆ ಎಂದು ಅಧಿಕಾರಕ್ಕೆ ಬಂದರು. ಆದರೆ, ಇದುವರೆಗೆ ಮಂದಿರ ಕಟ್ಟಿಲ್ಲ. ರಾಮನ ಹೆಸರಿನಲ್ಲಿ ಸಾರ್ವಜನಿಕರಿಂದ ಇಟ್ಟಿಗೆ, ಹಣ ಸಂಗ್ರಹ ಮಾಡಿದರು. ಅದರ ಲೆಕ್ಕವೇ ಇಲ್ಲ.

-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News