ಕಾಂಗ್ರೆಸ್ ಪ್ರಣಾಳಿಕೆ ಕುರಿತು ಮೋದಿ ಅಪಪ್ರಚಾರ: ದಿನೇಶ್ ಗುಂಡೂರಾವ್

Update: 2019-04-05 16:26 GMT

ಬೆಂಗಳೂರು, ಎ.5: ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಎಲ್ಲಿಯೂ ಶಸಸ್ತ್ರ ಪಡೆಗಳಿಗೆ ನೀಡಲಾಗಿರುವ ವಿಶೇಷಾಧಿಕಾರವನ್ನು ಹಿಂಪಡೆಯುವುದಾಗಿ ತಿಳಿಸಿಲ್ಲ. ಆದರೂ, ಪ್ರಧಾನಿ ನರೇಂದ್ರಮೋದಿ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

2014ರ ಬಿಜೆಪಿ ಪ್ರಣಾಳಿಕೆಯಲ್ಲಿ ಮಣಿಪುರ ರಾಜ್ಯದಿಂದ ಎಎಫ್‌ಎಸ್‌ಪಿಎ ಕಾನೂನನ್ನು ತೆಗೆಯುತ್ತೇವೆಂದು ಘೋಷಿಸಿದ್ದರು. ಸರಕಾರದ ಹೇಳಿಕೆಯ ಪ್ರಕಾರವೇ 2014 ರಿಂದ 2018ರವರೆಗೆ ಭಯೋತ್ಪಾದನಾ ಕಾರ್ಯಚಟುವಟಿಕೆಯಲ್ಲಿ ರಕ್ಷಣಾ ಸಿಬ್ಬಂದಿಯವರು ಹಿಂದಿಗಿಂತ ಶೇ.93ರಷ್ಟು ಹೆಚ್ಚಾಗಿ ಕೊಲ್ಲಲ್ಪಟ್ಟಿದ್ದಾರೆ ಎಂದು ಅವರು ದೂರಿದ್ದಾರೆ.

ಅಂದು ಹಾಗೆ ಹೇಳಿದ ಅದೇ ಪ್ರಧಾನಮಂತ್ರಿ ಮತ್ತು ಅವರ ಪರಿವಾರದವರು ಈಗ ಕಾಂಗ್ರೆಸ್ ಪಕ್ಷವನ್ನು ದೂರುವುದು ಬಿಟ್ಟರೆ, ಸತ್ಯವನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ಭಾರತದ ಜನತೆ ಎಎಫ್‌ಎಸ್‌ಪಿಎ ಕಾನೂನನ್ನು ಪರಿಶೀಲಿಸಬೇಕು ಮತ್ತು ಬದಲಾಯಿಸಬೇಕು ಎಂಬ ನಿಲುವನ್ನೆ ತಳೆದಿದ್ದಾರೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಮೋದಿಯವರಂತಹ ರಾಜಕಾರಣಿಗಳಿಗೆ ನಾಗರಿಕ ಹಕ್ಕುಗಳ ಬಗ್ಗೆ ಗೌರವವಿರಬೇಕು. ಬಿಜೆಪಿಯ ವಕ್ತಾರರು ನಮ್ಮ ಪ್ರಣಾಳಿಕೆಯನ್ನು ಗಂಭೀರವಾಗಿ ಓದಿ ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಳ್ಳಬೇಕು. ಭಾರತೀಯ ನಾಗರಿಕರು ಕಾಂಗ್ರೆಸ್ ಪಕ್ಷದ ನಿಲುವನ್ನು ಅರಿತಿದ್ದಾರೆ, ಸಮ್ಮತಿ ನೀಡಿದ್ದಾರೆ ಮತ್ತು ಬೆಂಬಲಿಸಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News