ಪ್ರಚೋದನಕಾರಿ ಹೇಳಿಕೆ ಆರೋಪ: ಕಾಂಗ್ರೆಸ್ ಮುಖಂಡನ ವಿರುದ್ಧ ಬಿಜೆಪಿ ದೂರು

Update: 2019-04-05 16:38 GMT

ಬೆಂಗಳೂರು, ಎ.5: ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ, ಬಿಬಿಎಂಪಿ ನಾಮನಿರ್ದೇಶಿತ ಸದಸ್ಯರಾಗಿದ್ದ ಎಚ್.ಎಸ್.ಅಮಾನುಲ್ಲಾ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದಗೌಡ ನೇತೃತ್ವದ ನಿಯೋಗ ಮುಖ್ಯ ಚುನಾವಣಾಧಿಕಾರಿಗೆ ಶುಕ್ರವಾರ ದೂರು ನೀಡಿದೆ.

ಕೆ.ಆರ್.ಪುರ ವ್ಯಾಪ್ತಿಯ ರಿಯಲ್ ಎಸ್ಟೇಟ್ ಉದ್ಯಮಿ ಎಂ.ಎಲ್.ಡಿ.ಸಿ. ಮುನಿರಾಜು ಕಚೇರಿಯಲ್ಲಿ ನಡೆದ ಈ ಗುಪ್ತ ಸಭೆಯಲ್ಲಿ ಅಮಾನುಲ್ಲಾ ನೀಡಿರುವ ಹೇಳಿಕೆಯು ಜೀವಹಾನಿ, ಮಾಡುವುದರೊಂದಿಗೆ ಬೇರೆ ಬೇರೆ ಧರ್ಮಗಳ ನಡುವೆ ಕಿಚ್ಚು ಹಚ್ಚುವ ಯೋಜನೆಯಿದೆ. ಮುಕ್ತ ಮತ್ತು ನ್ಯಾಯ ಸಮ್ಮತ ಮತದಾನಕ್ಕೆ ಅಡ್ಡಿ ಮಾಡಿದಂತಾಗಿದೆ. ಮತದಾರರು ಮುಕ್ತವಾಗಿ ನಿರ್ಣಯ ತೆಗೆದುಕೊಳ್ಳುವುದಕ್ಕೆ ಅಡ್ಡಿಯಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ರಕ್ಷಣೆ ಇಲ್ಲದೇ, ಜನ ಮತಗಟ್ಟೆಗೆ ಬರುವುದಕ್ಕೂ ಮೊದಲೇ ಭಯ ಹುಟ್ಟಿಸಿದ್ದಾರೆ. ಇದು ಸ್ವತಂತ್ರವಾಗಿ ಮತ ಚಲಾಯಿಸುವ ಸಂವಿಧಾನಿಕ ಹಕ್ಕಿಗೆ ಅಡ್ಡಿಪಡಿಸಿದಂತಾಗಿದೆ ಎಂದು ಬಿಜೆಪಿ ದೂರಿನಲ್ಲಿ ಉಲ್ಲೇಖಿಸಿದೆ.

ಈ ಎಲ್ಲ ಕಾರಣಗಳಿಂದ ಸಭೆಯಲ್ಲಿ ಪಾಲ್ಗೊಂಡಿದ್ದ ಅಮಾನುಲ್ಲಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುನೇಗೌಡ, ಬಿಬಿಎಂಪಿ ಮಾಜಿ ಸದಸ್ಯ ಸುಗುಮಾರ್, ಕಲೀಮ್ ಉಲ್ಲಾ, ಲೋಕೇಶ್, ಮುಖಂಡರಾದ ಎಂ.ಎಲ್.ಡಿ.ಸಿ.ಮುನಿರಾಜು, ಕೃಷ್ಣಮೂರ್ತಿ, ಪ್ರದೀಪ್ ಗೌಡ, ಈಶ್ವರಪ್ಪ, ಪಿ.ಎಫ್.ಬಾಬು, ರವಿ ನಾಯ್ಕೆ, ಬಾಬುರಾಜ್, ಸುಮತಿ ಬಾಯಿ, ಕಸ್ತೂರಮ್ಮ, ಜಯಂತಿ, ನಾಗಮ್ಮ ಹಾಗೂ ಇತರರನ್ನು ಕೂಡಲೆ ಬಂಧಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ಅಲ್ಲದೇ, ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ, ಧಾರ್ಮಿಕ ಭಾವನೆ ಕೆರಳಿಸಿದ, ಮತದಾನದ ಹಕ್ಕು ಕಸಿದ, ಸಂಘಟಿತ ಅಪರಾಧ, ಜೀವಬೆದರಿಕೆ ಹಾಕಿದ, ಈ ಎಲ್ಲ ಅಪರಾಧಗಳಿಗೆ ಸಂಬಂಧಿಸಿದ ಕಾಯ್ದೆಯ ಅನುಸಾರ ಈ ಗುಂಪಿನ ವಿರುದ್ಧ ಕಾನೂನು ರೀತಿ ಪ್ರಕರಣ ದಾಖಲಿಸಿ, ಕ್ರಮ ಜರುಗಿಸುವಂತೆ ಬಿಜೆಪಿ ಮನವಿ ಮಾಡಿದೆ.

ನಿಯೋಗದಲ್ಲಿ ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ಶಾಸಕ ಡಾ.ಸಿ.ಎನ್.ಅಶ್ವಥ್ ನಾರಾಯಣ, ಮಾಜಿ ಶಾಸಕ ಎನ್.ಎಸ್.ನಂದೀಶ್ ರೆಡ್ಡಿ, ಸಹ ವಕ್ತಾರರಾದ ಎಸ್.ಪ್ರಕಾಶ್, ಎ.ಎಚ್.ಆನಂದ್, ಮಾಜಿ ಉಪ ಮೇಯರ್ ಎಸ್.ಹರೀಶ್. ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವಿಡಿಯೋದಲ್ಲಿ ಏನಿದೆ?: ಬಿಜೆಪಿಯವರು ಸುಳ್ಳುಗಾರರು, ಲೋಫರ್‌ಗಳು, ಲಫಂಗಗಳು, ದಲಿತರಿಗೆ ಹೊಡೆಯುತ್ತಿದ್ದಾರೆ, ಮುಸ್ಲಿಮರನ್ನು ಹೊಡೆಯುತ್ತಿದ್ದಾರೆ. ಆ ಕಳ್ಳ ನನ್ನ ಮಕ್ಕಳಿಗೆ ಈ ಸಾರಿ ಏನು ಕೆಲಸ ಕೊಡುತ್ತೇನೆ ನೋಡಿ ನೀವು. ಅದು ಎಷ್ಟು ಕೇಸ್‌ಗಳು ಆದರೂ ಸರಿ, ಎಷ್ಟು ತಲೆಗಳನ್ನು ಒಡೆದರೂ ಸರಿ. ನಮ್ಮನ್ನು ಪಕ್ಷದಿಂದ ಕಿತ್ತು, ಕಾಂಗ್ರೆಸ್‌ನಿಂದ ಬಿಸಾಕಿದರೂ ಸರಿ, ಅವರನ್ನು ಮಾತ್ರ ಈ ಸಾರಿ ಬಿಡುವುದಿಲ್ಲ. ಅವರನ್ನು ಸರ್ವನಾಶ ಮಾಡುವವರೆಗೂ ಬಿಡಲ್ಲ. ವಿಜಿನಾಪುರದಲ್ಲಿ ಬಿಜೆಪಿಯವರು ತಲೆ ಬಗ್ಗಿಸಿಕೊಂಡು ಅವರ ಕೆಲಸ ಮಾಡಿಕೊಳ್ಳಬೇಕೆ ಹೊರತು, ಏನಾದರೂ ಮೆರೆದರೆ ಅವರ ಕಥೆನೇ ಮುಗಿಸುತ್ತೇನೆ.

ಏನಾದರೂ ಆಗಲಿ. ದಲಿತರನ್ನು ಸಾಯಿಸುತ್ತಿದ್ದಾರೆ, ಮುಸ್ಲಿಮರನ್ನು ಸಾಯಿಸುತ್ತಿದ್ದಾರೆ. ಪೆಟ್ರೋಲ್ ಬೆಲೆ ಜಾಸ್ತಿ, ಗ್ಯಾಸ್ ಬೆಲೆ ಜಾಸ್ತಿ. ಎಲ್ಲ ಸುಳ್ಳು. ಎಷ್ಟು ಹೇಳುತ್ತಾನೆ ಆ ಮೋದಿ ಸುಳ್ಳು. ಅವನಿಗೆ ಮಾನ ಮರ್ಯಾದೆ ಇದೆಯೇ ಎಂದು ಅಮಾನುಲ್ಲಾ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News