ಎಫ್-16 ವಿಮಾನ ಉರುಳಿಸಿದ ಬಗ್ಗೆ ಸತ್ಯ ಹೇಳಿ: ಭಾರತಕ್ಕೆ ಪಾಕ್ ಸೇನೆ ಕರೆ

Update: 2019-04-05 17:14 GMT

ಇಸ್ಲಾಮಾಬಾದ್, ಎ. 5: ಫೆಬ್ರವರಿಯಲ್ಲಿ ಭಾರತ ಮತ್ತು ಪಾಕಿಸ್ತಾನ ವಾಯುಪಡೆಗಳ ನಡುವೆ ನಡೆದ ಸಂಘರ್ಷದಲ್ಲಿ ಸಂಭವಿಸಿದ ‘ವಾಸ್ತವಿಕ ನಷ್ಟ’ಗಳ ಬಗ್ಗೆ ‘ಸತ್ಯ ಹೇಳುವಂತೆ’ ಪಾಕಿಸ್ತಾನಿ ಸೇನೆ ಶುಕ್ರವಾರ ಭಾರತಕ್ಕೆ ಕರೆ ನೀಡಿದೆ.

ಫೆಬ್ರವರಿ 27ರಂದು ತನ್ನ ಮಿಗ್-21 ಯುದ್ಧ ವಿಮಾನವೊಂದು ಪಾಕಿಸ್ತಾನದ ಎಫ್-16 ವಿಮಾನವೊಂದನ್ನು ಹೊಡೆದುರುಳಿಸಿದೆ ಎಂಬ ಭಾರತದ ಹೇಳಿಕೆಯನ್ನು ಅಮೆರಿಕದ ಪ್ರಮುಖ ಮ್ಯಾಗಝಿನ್ ಒಂದು ಪ್ರಶ್ನಿಸಿದ ಬಳಿಕ ಪಾಕಿಸ್ತಾನಿ ಸೇನೆ ಈ ಹೇಳಿಕೆ ನೀಡಿದೆ.

‘ತಪ್ಪು ಹೇಳಿಕೆ’ಗಳಿಗೆ ಸಂಬಂಧಿಸಿದ ತನ್ನ ತಪ್ಪನ್ನು ಸರಿಪಡಿಸಿಕೊಳ್ಳಲು ಭಾರತಕ್ಕೆ ಇದು ಸಕಾಲ ಎಂದು ಪಾಕಿಸ್ತಾನಿ ಸೇನೆಯ ವಕ್ತಾರ ಮೇಜರ್ ಜನರಲ್ ಅಸಿಫ್ ಗಫೂರ್ ಹೇಳಿದರು.

‘‘ಸತ್ಯ ಯಾವಾಗಲೂ ಉಳಿಯುತ್ತದೆ. ವಾಸ್ತವಿಕ ನಷ್ಟ ಸೇರಿದಂತೆ, ಸುಳ್ಳು ಹೇಳಿಕೆಗಳಿಗೆ ಸಂಬಂಧಿಸಿ ಸತ್ಯ ಹೇಳಲು ಭಾರತಕ್ಕೆ ಇದು ಸಕಾಲ’’ ಎಂದು ಗಫೂರ್ ಹೇಳಿದರು.

ಅಮೆರಿಕದ ಸಿಬ್ಬಂದಿ ಇತ್ತೀಚೆಗೆ ಪಾಕಿಸ್ತಾನದ ಎಫ್-16 ವಿಮಾನಗಳನ್ನು ಲೆಕ್ಕಮಾಡಿದ್ದಾರೆ ಹಾಗೂ ಯಾವುದೇ ವಿಮಾನ ನಾಪತ್ತೆಯಾಗಿರುವುದು ಪತ್ತೆಯಾಗಿಲ್ಲ ಎಂಬುದಾಗಿ ಅಮೆರಿಕದ ‘ಫಾರೀನ್ ಪಾಲಿಸಿ’ ಮ್ಯಾಗಝಿನ್‌ನಲ್ಲಿ ವರದಿಯೊಂದು ಪ್ರಕಟಗೊಂಡ ಬಳಿಕ ಪಾಕಿಸ್ತಾನಿ ಸೇನಾ ವಕ್ತಾರರು ಈ ಹೇಳಿಕೆ ನೀಡಿದ್ದಾರೆ.

ಈ ಬಗ್ಗೆ ಮಾಹಿತಿಯಿರುವ ಅಮೆರಿಕದ ಇಬ್ಬರು ಹಿರಿಯ ರಕ್ಷಣಾ ಅಧಿಕಾರಿಗಳನ್ನು ಉಲ್ಲೇಖಿಸಿ ಪತ್ರಿಕೆ ಈ ವರದಿ ಮಾಡಿದೆ.

‘‘ಅಮೆರಿಕದ ಅಧಿಕಾರಿಗಳ ತನಿಖಾ ವರದಿಯು ಭಾರತೀಯ ವಾಯುಪಡೆ ಅಧಿಕಾರಿಗಳ ಹೇಳಿಕೆಗೆ ವಿರುದ್ಧವಾಗಿದೆ. ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್‌ರ ಮಿಗ್-21 ಬೈಸನ್ ಯುದ್ಧ ವಿಮಾನವನ್ನು ಪಾಕಿಸ್ತಾನಿ ಕ್ಷಿಪಣಿಯೊಂದು ಹೊಡೆದುರುಳಿಸುವ ಮುನ್ನ, ಅವರು ಪಾಕಿಸ್ತಾನದ ಎಫ್-16 ವಿಮಾನವನ್ನು ಹೊಡೆದುರುಳಿಸಿದ್ದರು ಎಂಬುದಾಗಿ ಭಾರತೀಯ ಅಧಿಕಾರಿಗಳು ಹೇಳಿದ್ದಾರೆ’’ ಎಂದು ವರದಿ ಹೇಳಿದೆ.

ಆದರೆ, ಭಾರತವು ತನ್ನ ಎಫ್-16 ವಿಮಾನವನ್ನು ಹೊಡೆದುರುಳಿಸಿದೆ ಎಂಬುದನ್ನು ಪಾಕಿಸ್ತಾನವು ನಿರಂತರವಾಗಿ ನಿರಾಕರಿಸುತ್ತಾ ಬಂದಿತ್ತು.

ಅದೂ ಅಲ್ಲದೆ, ತಾನು ಭಾರತದ ಎರಡು ವಿಮಾನಗಳನ್ನು ಹೊಡೆದುರುಳಿಸಿರುವುದಾಗಿ ಪಾಕಿಸ್ತಾನ ಹೇಳಿಕೊಂಡಿದೆ. ಆದರೆ, ಇದನ್ನು ಭಾರತ ನಿರಾಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News