ಚುನಾವಣೆಯಲ್ಲಿ ಸ್ಪರ್ಧಿಸಲು ಕ್ರಿಮಿನಲ್ ಮೊಕದ್ದಮೆಗಳು ಅರ್ಹತೆಯೇ?

Update: 2019-04-06 06:09 GMT

ಕಳೆದ ನಾಲ್ಕು ವರ್ಷಗಳಲ್ಲಿ ದೇಶಾದ್ಯಂತ ಹಿಂಸಾಚಾರ, ದೌರ್ಜನ್ಯಗಳ ಪ್ರಕರಣಗಳು ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿವೆ. ಎಲ್ಲಕ್ಕಿಂತ ಮುಖ್ಯವಾಗಿ ಮಹಿಳೆಯರ ಮೇಲಿನ ಬರ್ಬರ ದೌರ್ಜನ್ಯಗಳಿಗೆ ದೇಶ ಸಾಕ್ಷಿಯಾಯಿತು. ಅಭಿವೃದ್ಧಿ ಮತ್ತು ಹಿಂಸೆ ಜೊತೆ ಜೊತೆಯಾಗಿ ಸಾಗುವುದಕ್ಕೆ ಸಾಧ್ಯವಿಲ್ಲ. ಆದುದರಿಂದಲೇ ಈ ಬಾರಿಯ ಚುನಾವಣೆಯ ಪ್ರಣಾಳಿಕೆಯಲ್ಲಿ ಅಭಿವೃದ್ಧಿಯ ಕುರಿತಂತೆ ಮಾತನಾಡುವವರು, ಕ್ರಿಮಿನಲ್‌ಗಳಿಗೆ ಕಡಿವಾಣ ಹಾಕುವ ಕುರಿತ ಭರವಸೆಗಳನ್ನು ಪ್ರಣಾಳಿಕೆಯಲ್ಲಿ ನೀಡಬೇಕಾಗಿದೆ. ದುರದೃಷ್ಟವಶಾತ್ ಈ ದೇಶದಲ್ಲಿ ಕ್ರಿಮಿನಲ್‌ಗಳ ವಿರುದ್ಧ ಮಾತನಾಡುವ ರಾಜಕಾರಣಿಗಳ ಸಂಖ್ಯೆ ತೀರಾ ಕಡಿಮೆ. ಯಾಕೆಂದರೆ, ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವವರಿದ್ದಾರೆ. ಇದು ಕೇವಲ ಬಿಜೆಪಿಯಂತಹ ಪಕ್ಷಗಳಿಗೆ ಮಾತ್ರ ಸೀಮಿತವಾಗಿ ಉಳಿದಿಲ್ಲ. ಕ್ರಿಮಿನಲ್ ಹಿನ್ನೆಲೆಯಿರುವ ಮಂದಿಗಳಿಗೆ ಟಿಕೆಟ್ ನೀಡುವಲ್ಲಿ ಎಲ್ಲ ಪಕ್ಷಗಳೂ ಪೈಪೋಟಿ ನಡೆಸುತ್ತಿವೆ.

ಯಾಕೆಂದರೆ ಎಲ್ಲ ಪಕ್ಷಗಳೂ ಅಧಿಕಾರ ಹಿಡಿಯುವ ಗುರಿಯತ್ತ ಗಮನ ಹರಿಸಿವೆಯೇ ಹೊರತು, ಅದಕ್ಕಾಗಿ ತುಳಿಯ ಬೇಕಾದ ದಾರಿಯ ಕುರಿತಂತೆ ಅಲ್ಲ. ಈ ಸಲದ ಲೋಕಸಭಾ ಚುನಾವಣೆಯಲ್ಲಿ ಮಹಿಳೆಯರ ವಿರುದ್ಧ ಅಪರಾಧಗಳನ್ನು ಎಸಗಿದ ಆರೋಪಗಳನ್ನು ಎದುರಿಸುತ್ತಿರುವ ಹಲವಾರು ಮಂದಿಗೆ ಪ್ರಮುಖ ರಾಜಕೀಯ ಪಕ್ಷಗಳು ಟಿಕೆಟ್ ನೀಡಿವೆ. ಅದರಲ್ಲಿ ಮಹಿಳೆಯರನ್ನು ಮಾತೆಯರೆಂದು ಕರೆಯುವ ಬಿಜೆಪಿ ಮುಂಚೂಣಿಯಲ್ಲಿದ್ದು, 54 ಮಂದಿಗೆ ಟಕೆಟ್ ನೀಡಿದೆ. ವರದಿಯೊಂದರ ಪ್ರಕಾರ, ಸಮೀಕ್ಷೆಯಲ್ಲಿ ಪಾಲ್ಗೊಂಡ 1,642 (34 ಶೇ.) ಮಂದಿ ಎಂಪಿಗಳು ಹಾಗೂ ಈಗಾಗಲೇ ಶಾಸಕರಾಗಿರುವ ಪೈಕಿ 52 ಮಂದಿ,ಮಹಿಳೆಯರ ವಿರುದ್ಧ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳ ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆ. ಬಿಜೆಪಿಯ ಆನಂತರದ ಸ್ಥಾನದಲ್ಲಿ ಬಿಎಸ್ಪಿಯಿದ್ದು, ಆ ಪಕ್ಷವು ಮಹಿಳೆಯರ ವಿರುದ್ಧ ಅಪರಾಧಗಳನ್ನು ಎಸಗಿದ 37 ಆರೋಪಿಗಳಿಗೆ ಟಿಕೆಟ್ ನೀಡಿದೆ. ಶೋಷಿತ ಸಮುದಾಯದ ಪರವಾಗಿ ಮಾತನಾಡುವ, ಮಹಿಳೆಯ ನೇತೃತ್ವವಿರುವ ಬಿಎಸ್ಪಿ ಎರಡನೆ ಸ್ಥಾನದಲ್ಲಿ ಗುರುತಿಸಿಕೊಂಡಿರುವುದು ನಿಜಕ್ಕೂ ದುರದೃಷ್ಟಕರ.

ಕಾಂಗ್ರೆಸ್ ಮೂರನೇ ಸ್ಥಾನದಲ್ಲಿದ್ದು, ಆ ಪಕ್ಷದಿಂದ ಲೋಕಸಭೆ/ ರಾಜ್ಯಸಭೆ ಹಾಗೂ ವಿಧಾನಸಭಾ ಚುನಾವಣೆಗಳಿಗೆ ಸ್ಪರ್ಧಿಸಿದ್ದಾರೆ. ಚುನಾವಣೆಯಲ್ಲಿ ಗೆಲ್ಲಬೇಕಾದರೆ ಹಣ ಮಾತ್ರವಲ್ಲ, ಕ್ರಿಮಿನಲ್ ಹಿನ್ನೆಲೆಯ ಅಗತ್ಯವೂ ಇದೆ ಎನ್ನುವುದನ್ನು ಪಕ್ಷಗಳು ಬಲವಾಗಿ ನಂಬಿಕೊಂಡಿರುವ ಪರಿಣಾಮವಾಗಿ ಸಂಸತ್ ಪ್ರವೇಶಿಸುವ ಕ್ರಿಮಿನಲ್ ಆರೋಪಿಗಳ ಸಂಖ್ಯೆ ಹೆಚ್ಚುತ್ತಿದೆ. ಪರಿಣಾಮವಾಗಿ ದೇಶವೂ ಕ್ರಿಮಿನಲ್‌ಗಳ ರಾಜ್ಯವಾಗುತ್ತಿದೆ. ಚುನಾವಣಾ ಆಯೋಗವು ತನ್ನ ಸಾಂವಿಧಾನಿಕ ಜವಾಬ್ದಾರಿಯ ನೆಲೆಯಲ್ಲಿ, ಸ್ಪರ್ಧಾಕಣದಲ್ಲಿರುವ ಎಲ್ಲಾ ಅಭ್ಯರ್ಥಿಗಳು ತಮ್ಮ ಕ್ರಿಮಿನಲ್ ಇತಿಹಾಸ, ಶೈಕ್ಷಣಿಕ ಅರ್ಹತೆ, ವೈಯಕ್ತಿಕ ಹಣಕಾಸು ವಿವರಗಳು ಸೇರಿದಂತೆ ತಮ್ಮ ವೈಯಕ್ತಿಕ ಹಿನ್ನೆಲೆಯನ್ನು ಸಾರ್ವಜನಿಕರಿಗೆ ಬಹಿರಂಗಪಡಿಸುವುದನ್ನು ಯಾವತ್ತೋ ಕಡ್ಡಾಯಗೊಳಿಸಬೇಕಿತ್ತು.

ಆದರೆ ಸುಪ್ರೀಂಕೋರ್ಟ್ ಅದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸುವ ತನಕ ಚುನಾವಣಾ ಆಯೋಗವು ಆ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಎಲ್ಲ ರಾಜಕೀಯ ಪಕ್ಷಗಳ ಒಮ್ಮತ ಪ್ರಭಾವದಿಂದಾಗಿ ಆಯೋಗ ಈ ಕುರಿತಂತೆ ಮೃದು ನಿಲುವು ತಳೆದಿತ್ತು. ಅಭ್ಯರ್ಥಿಯ ವೈಯಕ್ತಿಕ ಹಿನ್ನೆಲೆಯನ್ನು ಮುಚ್ಚಿಡುವುದು, ಪ್ರಜಾಪ್ರಭುತ್ವದ ಹಿತಾಸಕ್ತಿಯ ದೃಷ್ಟಿಯಿಂದ ಅತ್ಯಂತ ಅಪಾಯಕಾರಿ. ಮತದಾರರ ಪ್ರಯೋಜನಕ್ಕಾಗಿ ಇಂತಹ ಮಾಹಿತಿಗಳನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕೆಂದು ದಿಲ್ಲಿ ಹೈಕೋರ್ಟ್ ಚುನಾವಣಾ ಆಯೋಗಕ್ಕೆ ಆದೇಶಿಸಿತ್ತು.ಆದರೆ ಭಾರತ ಸರಕಾರವು ಹೈಕೋರ್ಟ್‌ನ ಈ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತು. ಅಭ್ಯರ್ಥಿಗಳ ವೈಯಕ್ತಿಕ ಮಾಹಿತಿಯನ್ನು ಪಡೆಯುವುದಕ್ಕೆ ಚುನಾವಣಾ ಆಯೋಗಕ್ಕಾಗಲಿ ಅಥವಾ ಹೈಕೋರ್ಟ್‌ಗಾಗಲಿ ಯಾವುದೇ ಅಧಿಕಾರವಿಲ್ಲವೆಂದು ಅದು ವಾದಿಸಿತು

ಈ ಸಂದರ್ಭದಲ್ಲಿ ಐತಿಹಾಸಿಕ ತೀರ್ಪು ನೀಡಿದ ಸುಪ್ರೀಂಕೋರ್ಟ್, ಚುನಾವಣೆಯ ಸಮಗ್ರ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹಾಗೂ ಪರಿಶುದ್ಧತೆಯನ್ನು ಕಾಪಾಡುವುದಕ್ಕಾಗಿ ಚುನಾವಣಾ ಆಯೋಗವು ಸೂಕ್ತ ನಿರ್ದೇಶನಗಳನ್ನು ಜಾರಿಗೊಳಿಸಬಹುದೆಂದು ತಿಳಿಸಿತು. ಸಾರ್ವಜನಿಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ವ್ಯಕ್ತಿಗಳ ಬಗ್ಗೆ ತಿಳಿದುಕೊಳ್ಳಲು ಪೌರರಿಗೆ ಹಕ್ಕಿದೆಯೆಂದು ಅದು ಪ್ರತಿಪಾದಿಸಿತು. ‘ಜಾಗೃತ ನಾಗರಿಕ’ರಿಂದಲೇ ಪ್ರಜಾಪ್ರಭುತ್ವವು ಯಶಸ್ವಿಯಾಗಲು ಸಾಧ್ಯವೆಂದು ಅಭಿಪ್ರಾಯಿಸಿದ ನ್ಯಾಯಾಲಯ, ಅಭ್ಯರ್ಥಿಯಿಂದ ತಪ್ಪುಮಾಹಿತಿ ನೀಡುವಿಕೆ ಅಥವಾ ಮಾಹಿತಿಯನ್ನು ನೀಡದಿರುವಿಕೆಯು ಪ್ರಜಾಪ್ರಭುತ್ವವನ್ನು ಒಂದು ಪ್ರಹಸನವಾಗಿ ಮಾಡುವಂತಹ ‘ಏಕರೂಪದ ನಾಗರಿಕತ್ವ’ಕ್ಕೆ ದಾರಿ ಮಾಡಿಕೊಡಲಿದೆ ಎಂದು ಎಚ್ಚರಿಕೆ ನೀಡಿತ್ತು.

ಅಭ್ಯರ್ಥಿಯ ವಿರುದ್ಧದ ಕ್ರಿಮಿನಲ್ ಆರೋಪಗಳು, ಆತ/ಆಕೆ ಅನುಭವಿಸಿರುವ ಶಿಕ್ಷೆಯ ಪ್ರಮಾಣ, ಇನ್ನೂ ವಿಚಾರಣೆಗೆ ಬಾಕಿಯುಳಿದಿರುವ ಪ್ರಕರಣಗಳು, ಅಭ್ಯರ್ಥಿ ಹಾಗೂ ಆತನ/ಆಕೆಯ ಬಾಳಸಂಗಾತಿಗೆ ಸೇರಿದ ಎಲ್ಲಾ ಸೊತ್ತುಗಳು ಮತ್ತು ಆಸ್ತಿ ವಿವರಗಳು, ಅವರ ಎಲ್ಲಾ ಬಾಧ್ಯತೆಗಳು ಮತ್ತು ಶೈಕ್ಷಣಿಕ ಅರ್ಹತೆಯನ್ನು ಕಡ್ಡಾಯವಾಗಿ ಬಹಿರಂಗಪಡಿಸಲು ಆದೇಶವನ್ನು ಹೊರಡಿಸಬೇಕೆಂದು ಸುಪ್ರೀಂಕೋರ್ಟ್ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿತು.

ನ್ಯಾಯಾಲಯದ ಈ ವಿವೇಕಯುತವಾದ ತೀರ್ಪು, 2002ರ ಡಿಸೆಂಬರ್‌ನಲ್ಲಿ ಆಗಿನ ಆಡಳಿತಾರೂಢ ರಾಜಕಾರಣಿಗಳಿಗೆ ಸಹಜವಾಗಿಯೇ ಅಪಥ್ಯವೆನಿಸಿತು. ಇದಕ್ಕಾಗಿ, ಪ್ರಧಾನಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರವು ಜನತಾ ಪ್ರಾತಿನಿಧ್ಯ ಕಾಯ್ದೆಗೆ ತಿದ್ದುಪಡಿ ತಂದಿತು. ಈ ಕಾಯ್ದೆಯ ಪ್ರಕಾರ ಆರೋಪಿಯು, ವಿಚಾರಣೆಗೆ ಬಾಕಿಯಿರುವಪ್ರಕರಣದಲ್ಲಿ ಯಾವುದೇ ದಂಡನೀಯ ಅಪರಾಧಕ್ಕಾಗಿ ಎರಡು ಅಥವಾ ಅದಕ್ಕಿಂತ ಅಧಿಕ ವರ್ಷದ ಜೈಲು ಶಿಕ್ಷೆ ಅನುಭವಿಸಿದ್ದರೆ, ಮಾತ್ರವೇ ಆತ ಮಾಹಿತಿಯನ್ನು ಒದಗಿಸಬೇಕಾಗುತ್ತದೆ.ಆದರೆ, ಸೆಕ್ಷನ್ 33ಬಿ ಪ್ರಕಾರ ಯಾವುದೇ ಅಭ್ಯರ್ಥಿಯು ಆತನ/ ಆಕೆಯ ಶೈಕ್ಷಣಿಕ ಅರ್ಹತೆ ಹಾಗೂ ಆಸ್ತಿಪಾಸ್ತಿ, ಸಂಪತ್ತಿನ ವಿವರಗಳನ್ನು ಬಹಿರಂಗಪಡಿಸುವ ಅಗತ್ಯವಿಲ್ಲವೆಂದು ಜನತಾ ಪ್ರಾತಿನಿಧ್ಯ ಕಾಯ್ದೆಯು ಪ್ರತಿಪಾದಿಸಿತ್ತು.

ಬಿಜೆಪಿ ಅಥವಾ ಕಾಂಗ್ರೆಸ್ ಆಗಲಿ, ಎಡ ಅಥವಾ ಮಧ್ಯಮವಾದಿ ಪಕ್ಷಗಳಾಗಲಿ, ಅಭ್ಯರ್ಥಿಗಳ ಮಾಹಿತಿಗಳನ್ನು ಪಡೆದುಕೊಳ್ಳುವ ಹಕ್ಕನ್ನು ಪ್ರಜೆಗಳಿಗೆ ನೀಡುವುದನ್ನು ಅವು ವಿರೋಧಿಸುತ್ತಿವೆ. ಇದು ರಾಜಕೀಯ ಪಕ್ಷಗಳ ನೈಜ ಮುಖವಾಗಿದೆ. ಆದರೆ 2003ರಲ್ಲಿ ಪಿಯುಸಿಎಲ್ ಮತ್ತಿತರರು, ಸುಪ್ರೀಂಕೋರ್ಟ್ ಮೆಟ್ಟಲೇರಿ ಜನತಾಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 33ಬಿಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿತು. ಈ ಬಗ್ಗೆ ತೀರ್ಪು ನೀಡಿದ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿ ಪಿ. ವೆಂಕಟರಾಮನ್ ನೇತೃತ್ವದ ನ್ಯಾಯಪೀಠವು, ಈ ಬಗ್ಗೆ ಮಹತ್ವದ ತೀರ್ಪು ನೀಡಿ, ತಿದ್ದುಪಡಿಗೊಳಿಸಲ್ಪಟ್ಟ ಜನತಾಪ್ರಾತಿನಿಧ್ಯ ಕಾಯ್ದೆ ಅಸಮರ್ಪಕ ಹಾಗೂ ಅಪೂರ್ಣವಾಗಿದೆಯೆಂದು ಪ್ರತಿಪಾದಿಸಿತು.

ಸುಪ್ರೀಂಕೋರ್ಟ್‌ನ ಈ ಆದೇಶದಿಂದಾಗಿ ಇಂದು ಪ್ರತಿಯೊಬ್ಬ ಅಭ್ಯರ್ಥಿಯು, ಚುನಾವಣೆಗೆ ಸ್ಪರ್ಧಿಸುವಾಗ ಸಲ್ಲಿಸುವ ಅಫಿದಾವಿತ್‌ನಲ್ಲಿ ತನ್ನ ವೈಯಕ್ತಿಕ ಹಿನ್ನೆಲೆಯ ಬಗ್ಗೆ ವಿವರಗಳನ್ನು ನೀಡಬೇಕಾಗುತ್ತದೆ. ಇದೀಗ ಪ್ರತಿಯೊಬ್ಬ ಮತದಾರನಿಗೂ, ಮತದಾನ ಮಾಡುವ ಮುನ್ನ ಕಣದಲ್ಲಿರುವ ಅಭ್ಯರ್ಥಿಯು ಕ್ರಿಮಿನಲ್ ಅಥವಾ ದಿವಾಳಿ/ ಭ್ರಷ್ಟಾಚಾರಿಯೇ ಅಥವಾ ಅವಿದ್ಯಾವಂತನೇ ಎಂಬುದನ್ನು ತಿಳಿದುಕೊಂಡೇ ಆತ/ಆಕೆಗೆ ಮತ ಚಲಾಯಿಸಬೇಕೇ ಅಥವಾ ಬೇಡವೇ ಎಂಬ ತೀರ್ಮಾನಕ್ಕೆ ಬರಲು ಸಾಧ್ಯವಾಗುತ್ತದೆ. ಇದರಲ್ಲೇ ಪ್ರಜಾಪ್ರಭುತ್ವದ ಯಶಸ್ಸು ಕೂಡಾ ಅಡಗಿದೆ. ಆದರೆ ಇಷ್ಟೆಲ್ಲ ಪ್ರಯತ್ನಗಳ ಬಳಿಕವೂ ತಮ್ಮ ಕ್ರಿಮಿನಲ್ ಹಿನ್ನೆಲೆಯನ್ನು ಮುಚ್ಚಿಡುವ ಪ್ರಯತ್ನವನ್ನು ಅಭ್ಯರ್ಥಿಗಳು ಮಾಡುತ್ತಿದ್ದಾರೆ. ಚುನಾವಣಾ ಆಯೋಗವೂ ಈ ಬಗ್ಗೆ ಮೃದುವಾಗಿದೆ. ಇದು ನ್ಯಾಯಾಲಯದ ಗಮನಕ್ಕೂ ಬಂದಿದ್ದು, ಚುನಾವಣಾ ಆಯೋಗವನ್ನು ಎಚ್ಚರಿಸಿರುವುದು ಶ್ಲಾಘನೀಯ. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಎಲ್ಲ ಅಭ್ಯರ್ಥಿಗಳ ಹಿನ್ನೆಲೆಯನ್ನು ಗಮನಿಸಿ, ಆ ಕುರಿತಂತೆ ಆಯಾ ಪಕ್ಷಗಳ ನಾಯಕರಲ್ಲಿ ಸ್ಪಷ್ಟೀಕರಣವನ್ನು ಕೇಳುವುದು ಪ್ರತಿಯೊಬ್ಬ ಮತದಾರನ ಕರ್ತವ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News