ಕಿರಣ್ ಬೇಡಿ ವಿರುದ್ಧ ಕಿಡಿಕಾರಿದ ಮೊಮ್ಮಗಳು: ವೈರಲ್ ವೀಡಿಯೊ

Update: 2019-04-06 08:48 GMT

ಹೊಸದಿಲ್ಲಿ, ಎ. 6: ತನ್ನನ್ನು ತಂದೆಯಿಂದ ಪ್ರತ್ಯೇಕಗೊಳಿಸಲು 'ಪೊಲೀಸ್ ಪ್ರಭಾವ' ದುರ್ಬಳಕೆ ಮಾಡಿದ್ದಾರೆಂದು ಪುದುಚ್ಚೇರಿಯ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿಯ ವಿರುದ್ಧ ಆಕೆಯ ಮೊಮ್ಮಗಳು ಆರೋಪಿಸುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

''ಡಾ. ಕಿರಣ್ ಬೇಡಿಯ, ಅದು ಕೂಡ ಆಕೆಯ ಏಕೈಕ ಮೊಮ್ಮಗಳಾಗಿರಲು ನನಗೆ ನಾಚಿಕೆಯಾಗುತ್ತದೆ'' ಎಂದು ಪುಟ್ಟ ಬಾಲಕಿ ತಾನೇ ತೆಗೆದ ವೀಡಿಯೊ ದಲ್ಲಿ ಹೇಳುತ್ತಿರುವುದು ದಾಖಲಾಗಿದೆ. ''ನಿಮಗೆ (ಕಿರಣ್ ಬೇಡಿ) ಕರೆ ಮಾಡಿ ನನ್ನ ತಾಯಿ ನನ್ನ ತಂದೆಗೆ ಚಪ್ಪಲಿಯಿಂದ ಹೊಡೆಯುತ್ತಿದ್ದಾರೆ ಹಾಗೂ ಅವರ ಮೇಲೆ ಉಗುಳುತ್ತಿದ್ದಾರೆಂದಾಗ, ಅದು ಗಂಡ ಹೆಂಡಿರ ನಡುವೆ ಎಂದು ನೀವು ಹೇಳಿದ್ದೀರಿ. ನಾನಿ (ಅಜ್ಜಿ) ನೀವೇಕೆ ಈಗ ಪೊಲೀಸ್ ಪ್ರಭಾವ ಬಳಸುತ್ತೀರಿ ?,'' ಎಂದು ಬಾಲಕಿ ವೀಡಿಯೊದಲ್ಲಿ ಪ್ರಶ್ನಿಸಿದ್ದಾಳಲ್ಲದೆ ಸತತವಾಗಿ ತಾನು ತಂದೆಯ ಜತೆ ಸುರಕ್ಷಿತ ಹಾಗೂ ಸಂತೋಷದಿಂದಿರುವುದಾಗಿ ಹಾಗೂ ಯಾವುದೇ ಅಪಹರಣ ಪ್ರಕರಣವಿಲ್ಲ ಎಂದು ಹೇಳಿದ್ದಳು.

ಚಿತ್ರ ತಯಾರಕಿ ದೀಪಿಕಾ ಭಾರದ್ವಾಜ್ ಎಂಬವರು ಈ ವೀಡಿಯೊವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದರಲ್ಲದೆ ''ಆಕೆ ತನ್ನ ತಂದೆ ಜತೆ ಖುಷಿಯಾಗಿರುವಾಗ ಹಾಗೂ ಅವರ ಜತೆಗೇ ಇರಲು ಬಯಸಿರುವಾಗ ಮ್ಯಾಡಂ ಬೇಡಿ ಆಕೆಯ ಅಪಹರಣವಾಗಿದೆ ಎನ್ನುತ್ತಿದ್ದಾರೆ. ತಾಯಿಯು ತಂದೆಗೆ ಚಪ್ಪಲಿಯಿಂದ ಹೊಡೆದಿದ್ದಾರೆ, ಉಗುಳಿದ್ದಾರೆ ಎಂದರೂ ಗಂಡ ಹೆಂಡಿರ ವಿಚಾರವೆಂದು ಕಿರಣ್ ಬೇಡಿ ಹೇಳಿರುವುದು ಆಘಾತಕಾರಿ. ಗಂಡನೊಬ್ಬ ತನ್ನ ಪತ್ನಿಗೆ ಈ ರೀತಿ ಮಾಡಿದ್ದರೆ ಆತನ ವಿರುದ್ಧ ಸೆಕ್ಷನ್ 498ಎ ಅನ್ವಯ ಕೇಸ್ ದಾಖಲಿಸುತ್ತಿರಲಿಲ್ಲವೇ,'' ಎಂದು ಆಕೆ ತಮ್ಮ ಟ್ವೀಟ್ ನಲ್ಲಿ ಹೇಳಿದ್ದರು.

ಇನ್ನೊಂದು ಟ್ವೀಟ್ ನಲ್ಲಿ ಆಕೆ ಯು ಟ್ಯೂಬ್ ನಲ್ಲಿ ಪೋಸ್ಟ್ ಮಾಡಲಾಗಿದ್ದ ಮೂಲ ವೀಡಿಯೋದ ಲಿಂಕ್ ಶೇರ್ ಮಾಡಿದ್ದರು. ಅದನ್ನೀಗ ಯುಟ್ಯೂಬ್ ತೆಗೆದು ಹಾಕಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬೇಡಿ ''ಎಲ್ಲಾ ವೀಡಿಯೊಗಳನ್ನೂ ತೆಗೆದು ಹಾಕುವಂತೆ ನ್ಯಾಯಾಲಯ ಆದೇಶಿಸಿದೆ. ಯುಟ್ಯೂಬ್ ಅಧಿಕಾರಿಗಳಿಗೂ ಕ್ರಮ ಕೈಗೊಳ್ಳುವಂತೆ ಹೇಳಲಾಗಿದೆ, ಪ್ರಕರಣ ನ್ಯಾಯಾಲಯದ ಮುಂದಿದೆ'' ಎಂದು ಹೇಳಿದ್ದಾರೆ.

ಈ ನಿರ್ದಿಷ್ಟ ವೀಡಿಯೊವನ್ನು ಟ್ವಿಟ್ಟರ್ ನಲ್ಲಿ ಸಾವಿರಾರು ಮಂದಿ ವೀಕ್ಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News