ಉತ್ತಮ ಪ್ರಜಾಕೀಯ ಪಕ್ಷದ 2 ನೇ ಹಂತದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

Update: 2019-04-07 18:30 GMT

ಬೆಂಗಳೂರು, ಎ.7: ಉತ್ತಮ ಪ್ರಜಾಕೀಯ ಪಕ್ಷದ ವತಿಯಿಂದ 2ನೇ ಹಂತಕ್ಕೆ 13 ಅಭ್ಯರ್ಥಿಗಳ ಪಟ್ಟಿಯನ್ನು ಯುಪಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಉಪೇಂದ್ರ ಬಿಡುಗಡೆಗೊಳಿಸಿದರು.

ರವಿವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುಪಿ ಪಕ್ಷದ ವತಿಯಿಂದ ಬಳ್ಳಾರಿ ಹೊರತುಪಡಿಸಿ 27 ಲೋಕಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಮೊದಲ ಹಂತದ ಚುನಾವಣೆಗೆ 14 ಅಭ್ಯರ್ಥಿಗಳನ್ನು ಪ್ರಕಟಿಸಲಾಗಿತ್ತು. ಇಂದು 2ನೇ ಹಂತಕ್ಕೆ 13 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಚಿಕ್ಕೋಡಿ ಕ್ಷೇತ್ರದಿಂದ ಪ್ರವೀಣ್ ಕುಮಾರ್ ಬಾಳಿಗಟ್ಟಿ, ಬೆಳಗಾವಿಯಿಂದ ಮಂಜುನಾಥ ರಾಜಪ್ಪನವರ್, ಬಾಗಲಕೋಟೆಯಿಂದ ಎಂ.ಶಶಿಕುಮಾರ್, ಜಯಪು ರದಿಂದ ಗುರುಬಸವಪ್ಪ ಪಿ.ರಭ ಕವಿ, ಕಲಬುರಗಿಯಿಂದ ಮಹೇಶ್ ಲಂಬಾಣಿ, ರಾಯಚೂರಿನಿಂದ ನಿರಂಜನ್ ನಾಯಕ್, ಬೀದರ್‌ನಿಂದ ಅಂಬರೀಷ್ ಕೆಂಚ, ಕೊಪ್ಪಳದಿಂದ ಶರಣಯ್ಯ ಬಂಡೀಮಠ, ಹಾವೇರಿಯಿಂದ ಈಶ್ವರ ಪಾಟೀಲ, ಧಾರವಾಡದಿಂದ ಸಂತೋಷ್ ನಂಡೂರ್, ಉತ್ತರ ಕನ್ನಡದಿಂದ ಸುನೀಲ್ ಪವಾರ್, ದಾವಣಗೆರೆುಂದ ಗಣೇಶ್ ಬಿ.ಎ. ಹಾಗೂ ಶಿವಮೊಗ್ಗದಿಂದ ಆರ್.ವೆಂಕಟೇಶ್, ಸ್ಪರ್ಧಿಸಲಿದ್ದಾರೆ ಎಂದು ಹೇಳಿದರು.

ಉತ್ತಮ ಪ್ರಜಾಕೀಯ ಪಕ್ಷ ಪಾರದರ್ಶಕತೆ, ಹೊಣೆಗಾರಿಕೆ, ಸಂಪರ್ಕ, ಜವಾಬ್ದಾರಿ, ಉದ್ಯೋಗ ಸಷ್ಠಿ, ತಿದ್ದುಪಡಿ, ಬಡ್ತಿ, ಸಾರ್ವಜನಿಕ ಸೇವೆ, ಸೇರಿದಂತೆ ಅನೇಕ ಸಾಮಾಜಿಕ ಕಳಕಳಿಯುಳ್ಳ ಉದ್ದೇಶಗಳನ್ನು ಹೊಂದಿದ್ದು, ದೇಶದ ಸಮಗ್ರ ಅಭಿವೃದ್ಧಿಗೆ ನಿಸ್ವಾರ್ಥತೆಯಿಂದ ಸೇವೆ ಸಲ್ಲಿಸುವುದಾಗಿ ಹೇಳಿದ ಉಪೇಂದ್ರ ಎಪ್ರಿಲ್ 10 ರಿಂದ ಎಲ್ಲ 28 ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಂಡು ಪ್ರಚಾರ ಮಾಡಲಿದ್ದೇನೆ ಎಂದು ತಿಳಿಸಿದರು. ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಸೇವಾ ಮನೋಭಾವ ಹೊಂದಿರ ಬೇಕಾದುದಲ್ಲದೇ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು. ಜನರ ಸಮಸ್ಯೆಗಳನ್ನು ನೇರವಾಗಿ ಅಧ್ಯಯನ ಮಾಡಿ ಅವರ ಸಮಸ್ಯೆಗಳ ಈಡೇರಿಕೆಗೆ ಕಂಕಣಬದ್ಧರಾಗಿ ದುಡಿಯಬೇಕೆಂದು ನೂತನ ಅಭ್ಯರ್ಥಿಗಳಿಗೆ ಕಿವಿಮಾತು ಹೇಳಿದರು.

ರಾಜಕೀಯ ವ್ಯಾಪಾರದಂತಾಗಿದ್ದು ಅದನ್ನು ಬದಲಾಯಿಸುವ ಉದ್ದೇಶದಿಂದ ಉತ್ತಮ ಪ್ರಜಾಕೀಯ ಪಕ್ಷವನ್ನು ಸ್ಥಾಪಿಸಲಾಗಿದೆ.

- ಉಪೇಂದ್ರ, ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News