ಹೆಚ್ಚುತ್ತಿರುವ ಭಾರತದ ಅಸಹನೆ ಯುದ್ಧ ಪರಿಸ್ಥಿತಿಗೆ ಕಾರಣವಾಗಬಹುದು: ‘ಸರ್ಜಿಕಲ್ ಸ್ಟ್ರೈಕ್ ಹೀರೋ’ ಹೂಡಾ

Update: 2019-04-08 07:31 GMT

ಹೊಸದಿಲ್ಲಿ, ಎ.8: “ಭಾರತದ ಹೆಚ್ಚುತ್ತಿರುವ ಅಸಹನೆ ಹಾಗೂ ಉಗ್ರ ದಾಳಿಗಳಿಗೆ ಪ್ರತಿಕ್ರಿಯೆ ಈಗಿನ ಸಂಘರ್ಷಮಯ ಪರಿಸ್ಥಿತಿಯನ್ನು ಯುದ್ಧ ಪರಿಸ್ಥಿತಿಗೆ ಏರಿಸಬಹುದು. ಭಾರತ ತನ್ನ ನೆರೆಯ ರಾಷ್ಟ್ರದೊಂದಿಗೆ ಮಾತುಕತೆಗಳನ್ನು ನಿರಾಕರಿಸಬಾರದು'' ಎಂದು 2016ರಲ್ಲಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆದ ಭಾರತೀಯ ಸೇನೆಯ ಸರ್ಜಿಕಲ್ ದಾಳಿಯ ಉಸ್ತುವಾರಿ ವಹಿಸಿದ್ದ ಹಾಗೂ ಈಗ ನಿವೃತ್ತರಾಗಿರುವ ಉತ್ತರ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್  ಆಗಿದ್ದ ಡಿ.ಎಸ್. ಹೂಡಾ ಅಭಿಪ್ರಾಯ ಪಟ್ಟಿದ್ದಾರೆ.

ಭಾರತದ ರಾಷ್ಟ್ರೀಯ ಭದ್ರತಾ ತಂತ್ರಗಾರಿಕೆಯ ಬಗ್ಗೆ ಕಾಂಗ್ರೆಸ್ ಪಕ್ಷಕ್ಕಾಗಿ ಅವರು ಸಿದ್ಧಪಡಿಸಿರುವ ವರದಿಯಲ್ಲಿ ಅವರು ಮೇಲಿನಂತೆ ಹೇಳಿದ್ದಾರೆ.

ಫೆಬ್ರವರಿ 14ರ ಪುಲ್ವಾಮ ಆತ್ಮಾಹುತಿ ದಾಳಿಯ ನಂತರದ ಘಟನಾವಳಿಗಳು ಪಾಕ್ ಪ್ರೇರಿತ ಉಗ್ರವಾದಕ್ಕೆ ಭಾರತದ ಪ್ರತಿಕ್ರಿಯೆಯಲ್ಲಿ ಹೊಸ ಕೆಂಪು ಗೆರೆಗಳನ್ನು ಸ್ಪಷ್ಟವಾಗಿ ತೋರಿಸಿವೆ ಎಂದು ವರದಿಯಲ್ಲಿ ಹೂಡಾ ಹೇಳಿದ್ದಾರೆ.

“ಮಿಲಿಟರಿ ಕಾರ್ಯಾಚರಣೆ ಅಪಾಯವನ್ನು ಹೆಚ್ಚಿಸುತ್ತವೆಯೆಂಬುದರ ಬಗ್ಗೆ ಯಾವುದೇ ಸಂಶಯವಿಲ್ಲದೇ ಇರುವುದರಿಂದ ನಮ್ಮ ಭವಿಷ್ಯದ ಯೋಜನೆಗಳಲ್ಲಿ ಈ ಅಂಶವನ್ನು  ಗಮನದಲ್ಲಿರಿಸಬೇಕು” ಎಂದು ತಮ್ಮ 41 ಪುಟಗಳ ವರದಿಯಲ್ಲಿ ಅವರು ಹೇಳಿದ್ದಾರೆ.

“ಉಗ್ರವಾದವನ್ನು ಬೆಂಬಲಿಸುವುದರಿಂದ ದೂರ ಸರಿಯುವಂತೆ ಪಾಕಿಸ್ತಾನವನ್ನು ಪ್ರೇರೇಪಿಸಲು ಸತತ ಒತ್ತಡ  ಹಾಗೂ ದೀರ್ಘಕಾಲಿಕ ತಂತ್ರಗಾರಿಕೆಯ ಅಗತ್ಯವಿದೆ. ರಾಜತಾಂತ್ರಿಕ ಕ್ರಮ ಹಾಗೂ ಆರ್ಥಿಕವಾಗಿ ದೇಶವನ್ನು ಪ್ರತ್ಯೇಕಿಸುವುದು ಈ ನಿಟ್ಟಿನಲ್ಲಿ ದೊಡ್ಡ ಪಾತ್ರ ವಹಿಸಲಿದೆ” ಎಂದು ಅವರು ತಮ್ಮ ವರದಿಯಲ್ಲಿ ಹೇಳಿದ್ದಾರೆ.

“ಮೂರು ದಶಕಗಳ ಸಂಘರ್ಷಮಯ ಪರಿಸ್ಥಿತಿಯ ನಂತರವೂ ಜಮ್ಮು ಕಾಶ್ಮೀರ ಭಾರತದ ದೊಡ್ಡ ಆಂತರಿಕ ಭದ್ರತಾ ಸವಾಲಾಗಿದೆ.. 2001ರಲ್ಲಿ ರಾಜ್ಯದಲ್ಲಿ 4,500 ಸಾವುಗಳು ಸಂಭವಿಸಿದ ನಂತರ ಹಿಂಸಾಚಾರ ಕಡಿಮೆಯಾಗಿದ್ದರೂ 2012ರಿಂದೀಚಿಗಿನ ಆರು ವರ್ಷಗಳಲ್ಲಿ ಮತ್ತೆ ಹಿಂಸೆ ಹೆಚ್ಚಾಗಿದೆ” ಎಂದು ವರದಿ ತಿಳಿಸಿದೆ.

ಪಾಕಿಸ್ತಾನವು ಉಗ್ರವಾದಕ್ಕೆ ನೀಡುವ ಬೆಂಬಲ ಹಾಗೂ ಕಾಶ್ಮಿರ ಕಣಿವೆಯ ಜನರಲ್ಲಿರುವ ಆಕ್ರೋಶ ಹಾಗೂ ಪ್ರತ್ಯೇಕತೆಯ ಮನೋಭಾವದಿಂದ ಸಮಸ್ಯೆ ಇನ್ನಷ್ಟು ಉಲ್ಬಣಿಸಿದೆ ಎಂದಿರುವ ಹೂಡಾ, ಭಾರತದ  ಸೇನಾ  ಸಲಕರಣೆಗಳು ವಿಂಟೇಜ್ ಅಥವಾ ಹಳೆಯ ಕಾಲದವಾಗಿದ್ದು ವಾಯುಪಡೆಯ ಬಳಿಯಿರುವ ರಕ್ಷಣಾ ಸಾಮಗ್ರಿಗಳೂ ಕಡಿಮೆಯಾಗಿವೆ. ದೇಶದ ರಕ್ಷಣಾ ಪಡೆಗಳು ತಮ್ಮ ಬಳಿಯಿರುವ ಶಸ್ತಾಸ್ತ್ರ ಹಾಗೂ ಇತರ ಸಾಧನಗಳನ್ನು ಆಧುನೀಕರಿಸಬೇಕಿದೆ” ಎಂದಿದ್ದಾರೆ

“ಕಾಂಗ್ರೆಸ್ ಈ ವರದಿಯನ್ನು ತನ್ನ ವೆಬ್ ತಾಣದಲ್ಲಿ ಅಪ್ಲೋಡ್ ಮಾಡಿದ್ದು ರಕ್ಷಣಾ ತಜ್ಞರಿಂದ ಹಾಗೂ ಭಾರತದ ಎಲ್ಲಾ ಸ್ತರದ ನಾಗರಿಕರಿಂದಲೂ ಪ್ರತಿಕ್ರಿಯೆಗಳನ್ನು ಯಾಚಿಸಿದೆ. ರಾಷ್ಟ್ರದ ಭದ್ರತಗೆ ಕುರಿತಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಜನರಿಂದಲೂ ಅಭಿಪ್ರಾಯ ಕ್ರೋಢೀಕರಣ ಇದರ ಉದ್ದೇಶ,'' ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News