30 ವರ್ಷಗಳಿಂದ ಬಿಜೆಪಿ ರಾಮ ಮಂದಿರವನ್ನು ಬಳಸುತ್ತಿದೆ: ಯೆಚೂರಿ

Update: 2019-04-08 16:23 GMT

ಹೊಸದಿಲ್ಲಿ, ಎ.8: ಬಿಜೆಪಿ ಪ್ರಣಾಳಿಕೆಯಲ್ಲಿ ರಾಮ ಮಂದಿರವನ್ನು ಉಲ್ಲೇಖಿಸಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ ಎಂದು ತಿಳಿಸಿರುವ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ, ಕೋಮು ಧ್ರುವೀಕರಣವನ್ನು ಹೆಚ್ಚಿಸಲು ಬಿಜೆಪಿ ಕಳೆದ ಮೂವತ್ತು ವರ್ಷಗಳಿಂದ ರಾಮ ಮಂದಿರವನ್ನು ಬಳಸುತ್ತಿದೆ ಎಂದು ಸೋಮವಾರ ಆರೋಪಿಸಿದ್ದಾರೆ.

ಪ್ರಧಾನಿ ಮೋದಿ ಸೋಮವಾರ ಬಿಡುಗಡೆ ಮಾಡಿರುವ ಪಕ್ಷದ ಪ್ರಣಾಳಿಕೆ ಸಂಕಲ್ಪಿತ ಭಾರತ, ಸಶಕ್ತ ಭಾರತದಲ್ಲಿ ರಾಮ ಮಂದಿರ ನಿರ್ಮಾಣ, ಭಯೋತ್ಪಾದನೆ ವಿರುದ್ಧ ಕಠಿಣ ನಿಲುವು ಮತ್ತು ಮೂರು ವರ್ಷಗಳಲ್ಲಿ ರೈತರ ಆದಾಯ ದುಪ್ಪಟ್ಟು ಸೇರಿದಂತೆ ಅನೇಕ ಭರವಸೆಗಳನ್ನು ನೀಡಲಾಗಿದೆ. ಈ ಕುರಿತು ವರದಿಗಾರರ ಜೊತೆ ಮಾತನಾಡಿದ ಯೆಚೂರಿ, “ಇದೊಂದು ಆಶ್ಚರ್ಯವೇ?, ಕಳೆದ ಮೂವತ್ತು ವರ್ಷಗಳಲ್ಲಿ ಅವರ ಪ್ರತಿಯೊಂದು ಜುಮ್ಲಾ ಘೋಷಣೆಗಳಲ್ಲಿ ರಾಮ ಮಂದಿರವನ್ನು ಸೇರಿಸಲಾಗಿದೆ. ಈ ಅಂಶವನ್ನು ನಿರಂತರವಾಗಿ ಪುನರಾವರ್ತಿಸಲಾಗಿದೆ. ಪ್ರತಿ ಚುನಾವಣೆಯಲ್ಲೂ ಅವರು ಅದನ್ನು ಮುಂದುವರಿಸಿದ್ದಾರೆ. ಅವರ ಇಡೀ ಸಿದ್ಧಾಂತವೇ ಕೋಮು ಧ್ರುವೀಕರಣ ಹೆಚ್ಚಿಸುವುದು. ಹೀಗೆ ಮಾಡಿದರೆ ಮತಗಳನ್ನು ಬಾಚಿಕೊಳ್ಳಬಹುದು ಎನ್ನುವುದು ಅವರ ಅನಿಸಿಕೆ. ಆದರೆ ಅವರು ಹಾಗೆಂದು ತಪ್ಪು ತಿಳಿದುಕೊಂಡಿದ್ದಾರೆ” ಎಂದು ತಿಳಿಸಿದ್ದಾರೆ.

ಅವರ ಒಂದೇ ಗುರಿ ಹಿಂದುತ್ವ ಮತಗಳನ್ನು ಕ್ರೋಢೀಕರಿಸುವುದು. ಆದರೆ ಈ ಬಾರಿ ಅವರು ಸಂಪೂರ್ಣವಾಗಿ ವಿಫಲವಾಗಲಿದ್ದಾರೆ. ಸದ್ಯ ಬಿಜೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆ ಹೊಸ ಸುಳ್ಳು ಭರವಸೆಗಳ ಕಂತೆಯಾಗಿದೆ ಎಂದು ಸೀತಾರಾಮ ಯೆಚೂರಿ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News