ಬಿಪ್ಯಾಕ್‌ನಲ್ಲಿ ಬೆಂಗಳೂರಿನ ನಾಗರಿಕರೊಂದಿಗೆ ಕೃಷ್ಣ ಭೈರೇಗೌಡ ಸಂವಾದ

Update: 2019-04-09 18:33 GMT

ಬೆಂಗಳೂರು, ಎ.9: ಬೆಂಗಳೂರು ಪೊಲಿಟಿಕಲ್ ಆ್ಯಕ್ಷನ್ ಕಮಿಟಿ ಆಯೋಜಿಸಿದ್ದ ‘ಲೋಕಸಭಾ ಚುನಾವಣಾ ಅಭ್ಯರ್ಥಿಗಳೊಂದಿಗೆ ಮತದಾರರ ಭೇಟಿ’ ಕಾರ್ಯಕ್ರಮದಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಕೃಷ್ಣಭೈರೇಗೌಡ ಭಾಗವಹಿಸಿ, ನಗರದ ಹಲವು ಸಮಸ್ಯೆಗಳ ಕುರಿತು ಮಾತುಕತೆ ನಡೆಸಿದರು.

ಮೊದಲಿಗೆ ಕಾರ್ಯಕ್ರಮ ನಿರೂಪಿಸಿದ ನಿವೃತ್ತ ಐಎಎಸ್ ಅಧಿಕಾರಿ ಕೆ.ಜಯರಾಜ್ ಪ್ರಶ್ನೆಗೆ ಉತ್ತರಿಸಿದ ಕೃಷ್ಣಭೈರೇಗೌಡ, ಶಾಸಕ ಮತ್ತು ಸಚಿವನಾಗಿ ನಿರ್ವಹಿಸಿದ ಕೆಲಸ ಕಾರ್ಯಗಳ ಕುರಿತು ಮಾಹಿತಿ ಹಂಚಿಕೊಂಡರು. ಬಳಿಕ ಸಾರ್ವಜನಿಕರು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದರು.

ರಾಜ್ಯ ಸರಕಾರದಲ್ಲಿ ಸಚಿವರಾಗಿದ್ದೂ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವುದೇಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಂಸದನಾಗಿ ಆಯ್ಕೆಯಾಗಿ ಸಂಸತ್ತಿನಲ್ಲಿ ಭಾಗವಹಿಸುವುದು, ದೇಶಕ್ಕಾಗಿ ಕೆಲಸ ಮಾಡುವುದು ಭಾರತೀಯ ಪ್ರಜೆಗೆ ಸಿಗಬಹುದಾದ ಅತ್ಯಂತ ಶ್ರೇಷ್ಠ ಅವಕಾಶ ಎಂದರು. ಜೊತೆಗೆ ಅಲ್ಲಿಗೆ ಹೋಗಿ ಕೆಲಸ ಮಾಡುವುದರಿಂದ ಸಾಕಷ್ಟು ರಾಜಕೀಯ ಅನುಭವ ಸಿಗುತ್ತದೆ. ಈಗಿರುವುದಕ್ಕಿಂತ ಎತ್ತರಕ್ಕೆ ಹೋಗಲು ಸಾಧ್ಯವಿಲ್ಲ ಎಂದು ಭಾವಿಸಬಾರದೇಕೆ. ನಾನು ಸಂಸತ್ತಿಗೆ ಹೋದರೆ ಬೆಂಗಳೂರು ಮತ್ತು ರಾಜ್ಯವನ್ನು ಸಮರ್ಥವಾಗಿ ಪ್ರತಿನಿಧಿಸುತ್ತೇನೆ ಎಂದು ಅವರು ಹೇಳಿದರು. ಐದಾರು ತಿಂಗಳ ಹಿಂದೆ ಅರುಣ್ ಜೇಟ್ಲಿ ಅನಾರೋಗ್ಯಕ್ಕೆ ಒಳಗಾಗಿದ್ದರು. ಈ ವೇಳೆ ಅವರ ಆರೋಗ್ಯ ವಿಚಾರಿಸಲು ಹೋಗಿದ್ದಾಗ, ‘ಕೃಷ್ಣ ನೀವು ಸಂಸತ್ತಿನಲ್ಲಿ ಇರಬೇಕು’ ಎಂದಿದ್ದರೆಂದು ಕೃಷ್ಣ ಭೈರೇಗೌಡ ಹೇಳಿದರು.

ರೈತರ ಸಮಸ್ಯೆಗಳ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯ ಸರಕಾರ ರೈತರ ಸಾಲ ಮನ್ನಾ ಮಾಡಿದೆ. ಆದರೆ, ಸಾಲ ಮನ್ನಾ ಪೂರ್ಣ ಪ್ರಮಾಣದ ಪರಿಹಾರ ಅಲ್ಲ. ರೈತರ ವೆಚ್ಚ ತಗ್ಗಿಸುವ ಮತ್ತು ಆದಾಯ ಹೆಚ್ವಿಸುವ ಹಲವು ಕಾರ್ಯಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದರು.

ಬೆಂಗಳೂರಿನಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ ಘಟನೆಗಳನ್ನು ನಿಯಂತ್ರಣ ಮಾಡುವ ಪ್ರಶ್ನೆಗೆ ಉತ್ತರಿಸಿದ ಅವರು, ಮೀಡಿಯಾಗಳಲ್ಲಿ ಬಂದಿದ್ದೆಲ್ಲವೂ ಪೂರ್ಣ ಸತ್ಯ ಅಲ್ಲ. ಬೆಂಗಳೂರು ಇರುವುದರಲ್ಲೇ ಸುರಕ್ಷಿತ ನಗರ. ನನ್ನ ಪತ್ನಿಯೂ ಐಟಿ ಕನ್ಸಲ್ಟೆಂಟ್ ಆಗಿ ತಡರಾತ್ರಿವರೆಗೂ ಕೆಲಸ ಮಾಡುತ್ತಾರೆ. ನಾವೆಲ್ಲರೂ ಮಹಿಳೆಯರಿಗೆ ಸುರಕ್ಷಿತ ಸಮಾಜ ನಿರ್ಮಿಸಬೇಕು ಎಂದರು.

ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ ಸೇನಾ ಬಲ ತಗ್ಗಿಸಲಿದ್ದಾರೆ ಎಂಬ ವದಂತಿಗೆ ಸ್ಪಷ್ಟನೆ ನೀಡಿದ ಅವರು, ಅಂತಹ ಯಾವುದೇ ಆಲೋಚನೆ ನಮ್ಮ ಮುಂದಿಲ್ಲ. ನಾವು ಸದಾ ಸೇನೆಗೆ ಬೆಂಬಲ ನೀಡಿದ್ದೇವೆ. ಈಗಲೂ ಅವರ ಪರ ನಿಂತಿದ್ದೇವೆ. ಜೊತೆಗೆ ಸೇನೆಗೆ ಅಗತ್ಯ ಇರುವ ಹಣಕಾಸು ನೆರವು ಹೆಚ್ಚಿಸುವುದು ನಮ್ಮ ಪ್ರಣಾಳಿಕೆಯಲ್ಲಿದೆ ಎಂದರು.

ಆದಾಯ ಇಲ್ಲ ಅಥವಾ ಹೆಚ್ಚಿನ ಅನುಕೂಲ ಇಲ್ಲ ಎಂಬ ಕಾರಣಕ್ಕೆ ಕೇಂದ್ರ ಸರಕಾರದ ಉದ್ದಿಮೆ ಅಥವಾ ಸಂಸ್ಥೆಗಳನ್ನು ಮುಚ್ಚುವ ಕೇಂದ್ರ ಸರಕಾರದ ಕ್ರಮ ಕುರಿತ ಪ್ರಶ್ನೆಗೆ ಉತ್ತರಿಸಿದ ಕೃಷ್ಣ ಭೈರೇಗೌಡ, ಇಂದು ದೇಶ ಮತ್ತು ಬೆಂಗಳೂರು ಇಷ್ಟು ಬೆಳೆಯಲು ಕೇಂದ್ರದ ಪಿಎಸ್‌ಯುಗಳೇ ಕಾರಣ. ಅವುಗಳನ್ನು ಗೌರವಿಸಬೇಕೇ ಹೊರತು ಅಗೌರವಿಸಬಾರದು ಎಂದರು.

ದಿವ್ಯಾಂಗ ಚೇತನರ ಸೌಲಭ್ಯ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಹೃದಯಾಂತರಾಳದಿಂದ ದಿವ್ಯಾಂಗರ ಜೊತೆ ಇರುತ್ತೇನೆ. ಇಲ್ಲಸಲ್ಲದ ಆಶ್ವಾಸನೆ ನೀಡುವುದಕ್ಕಿಂತ ಸಾಧ್ಯತೆ ಇರುವ ಎಲ್ಲ ಅನುಕೂಲ ಮಾಡಿಕೊಡಲು ಸಿದ್ಧನಿದ್ದೇನೆ. ದಿವ್ಯಾಂಗರಿರಲಿ, ಯಾರೇ ಇರಲಿ ಪ್ರತಿಯೊಬ್ಬ ಭಾರತೀಯರನ್ನೂ ನಾವು ಸಮಾನವಾಗಿ ಕಾಣಬೇಕಿದೆ ಮತ್ತು ಪ್ರೀತಿಸಬೇಕಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News