ಮೇ ಅಂತ್ಯದಲ್ಲಿ ಮಾವು ಮೇಳ ನಡೆಸಲು ತೀರ್ಮಾನ

Update: 2019-04-09 18:34 GMT

ಬೆಂಗಳೂರು, ಎ.9: ಹವಾಮಾನ ವೈಪರೀತ್ಯದಿಂದ ರೈತರ ಕೈಗೆ ಮಾವು ಬೆಳೆ ಸಮಯಕ್ಕೆ ಸರಿಯಾಗಿ ಸಿಗಲು ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಮೇ ಕೊನೆ ವಾರದಲ್ಲಿ ಮಾವು ಮೇಳ ನಡೆಸಲು ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ತೀರ್ಮಾನಿಸಿದೆ.

ಹಿಂದಿನ ವರ್ಷವೂ ಇದೇ ರೀತಿಯ ವಾತಾವರಣವಿದ್ದರಿಂದ ಮೇ ಕೊನೆಗೆ ಮೇಳವನ್ನು ಆಯೋಜನೆ ಮಾಡಲಾಗಿತ್ತು. ಅದೇ ರೀತಿ ಈ ವರ್ಷವೂ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಹಲವು ಕಡೆಗಳಲ್ಲಿ ಬೆಳೆ ವಿಳಂಬವಾಗುವ ಲಕ್ಷಣ ಕಂಡುಬರುತ್ತಿದೆ. ಪ್ರತಿವರ್ಷ ರಾಜ್ಯದಲ್ಲಿ 10ರಿಂದ 12 ಲಕ್ಷ ಮೆಟ್ರಿಕ್ ಟನ್ ಮಾವು ಬೆಳೆ ನಿರೀಕ್ಷಿಸಲಾಗುತ್ತದೆ. ಆದರೆ, ಕಳೆದ ಎರಡು ವರ್ಷಗಳಿಂದ ಇಳುವರಿ ಕುಸಿತಗೊಂಡಿದ್ದು, 8 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆ ಸಾಧ್ಯವಾಗಿದೆ ಎಂದು ನಿಗಮದ ವ್ಯವಸ್ಥಾಪಕ ಡಾ. ಸಿ.ಜಿ. ನಾಗರಾಜ್ ಹೇಳಿದ್ದಾರೆ.

ಮೇಳದಿಂದ ಯಾರಿಗೆ ಲಾಭ: ಮಾವಿನ ಋತುವಿನಲ್ಲಿ ನಗರದ ಲಾಲ್‌ಬಾಗ್ ಹಾಗೂ ಹಾಪ್‌ಕಾಮ್ಸ್ ಮಳಿಗೆಗಳಲ್ಲಿ ಆಯೋಜನೆ ಮಾಡುವ ಮಾವು ಮೇಳದಿಂದಾಗಿ ಬೆಳೆಗಾರರಿಗೆ ಹೆಚ್ಚು ಲಾಭವಾಗುತ್ತದೆ. ರಾಸಾಯನಿಕ ಮುಕ್ತ ಹಣ್ಣು ಸಿಗುವುದರಿಂದ ನಗರದ ಜನತೆ ಮುಗಿಬೀಳುತ್ತಾರೆ.

2012ರಿಂದ ಆರಂಭವಾದ ಮಾವು ಮೇಳ ಪ್ರತಿವರ್ಷವೂ ವಹಿವಾಟು ಹೆಚ್ಚಳ ಮಾಡಿಕೊಂಡಿದೆ. ಮೊದಲನೇ ಬಾರಿಗೆ 1.56 ಕೋಟಿ ರೂ.ಗಳಷ್ಟು ವಹಿವಾಟು ನಡೆಸಿದ್ದ ಮೇಳವು 2017 ರ ವೇಳೆಗೆ 7.80 ಕೋಟಿ ರೂ.ಗೆ ಮುಟ್ಟಿದೆ. ಈ ಬಾರಿ ಇನ್ನೂ ಅಧಿಕ ವಹಿವಾಟಿನ ಗುರಿಯನ್ನಿಟ್ಟುಕೊಳ್ಳಲಾಗಿದೆ. ಅಲ್ಲದೆ, 15-20 ದಿನಗಳ ಕಾಲ ಮೇಳ ನಡೆಸಲೂ ಯೋಚಿಸಲಾಗುತ್ತಿದೆ.

ಲಾಲ್‌ಬಾಗ್, ಹಾಪ್‌ಕಾಮ್ಸ್‌ಗಳಷ್ಟೇ ಅಲ್ಲದೆ, ಮೆಟ್ರೋ ನಿಲ್ದಾಣ, ರೈಲು ನಿಲ್ದಾಣ, ಬಸ್ ನಿಲ್ದಾಣ ಸೇರಿದಂತೆ ಜನಸೇರುವ ಸ್ಥಳಗಳಲ್ಲಿ ಮಾರಾಟ ಮಾಡಲು ಯೋಚಿಸಿದ್ದು, ಮಾವು ಬೆಳೆಗಾರರಿಗೆ ನೆರವಾಗುವ ದೃಷ್ಟಿಯಿಂದ ಹಲವು ಬಾರಿ ರೈತರೊಂದಿಗೆ ಸಭೆ ನಡೆಸಿ, ಮೇಳವನ್ನು ಆಯೋಜಿಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News