ಕಾಫಿ ಮಳಿಗೆ, ಹೊಟೇಲ್‌ಗಳಲ್ಲಿ ಧೂಮಪಾನಕ್ಕೆ ಅವಕಾಶ ಬೇಡ: ಬಿಬಿಎಂಪಿ ಎಚ್ಚರಿಕೆ

Update: 2019-04-09 18:35 GMT

ಬೆಂಗಳೂರು, ಎ.9: ಕಾಫಿ ಮಳಿಗೆ, ಹೊಟೇಲ್ ಗಳಲ್ಲಿ ಯಾವುದೇ ಕಾರಣಕ್ಕೂ ಧೂಮಪಾನಕ್ಕೆ ಅವಕಾಶ ನೀಡಬಾರದೆಂದು ಬಿಬಿಎಂಪಿ ಎಚ್ಚರಿಸಿದೆ.

ಮಂಗಳವಾರ ಬಿಬಿಎಂಪಿ ಆರೋಗ್ಯ ಇಲಾಖೆ ಅಧಿಕಾರಿಗಳು ಪಶ್ಚಿಮ ವಲಯದಲ್ಲಿರುವ ಎಂ.ಎಸ್.ರಾಮಯ್ಯ ಆಸ್ಪತ್ರೆ ವ್ಯಾಪ್ತಿಯ ಕಾಫಿ ಅಂಗಡಿಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಮಳಿಗೆಯಲ್ಲಿ ಅನಧಿಕೃತವಾಗಿ ಧೂಮಪಾನ ಮಾಡಲು ಅನುವು, ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡಿರುವುದು ಹಾಗೂ ಕಸ ವಿಂಗಡಣೆ ಮಾಡದಿರುವುದು ಬೆಳಕಿಗೆ ಬಂದಿದ್ದು, ಮಳಿಗೆಗೆ ಬೀಗ ಜಡಿದು 12,800 ರೂ. ದಂಡ ವಿಧಿಸಿ, ಕಾರಣ ನೀಡುವಂತೆ ನೋಟಿಸ್ ಜಾರಿಗೊಳಿಸಿದ್ದಾರೆ.

ರಾಜರಾಜೇಶ್ವರಿನಗರದ ವಿವಿಧ ವಾಣಿಜ್ಯ ಮಳಿಗೆಗಳ ಮೇಲೆ ದಾಳಿ ನಡೆಸಿ ಅನಧಿಕೃತ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದ ಹಾಗೂ ಸ್ವಚ್ಛತೆ ಕಾಪಾಡದ ಮಾಲಕರಿಗೆ ದಂಡ ವಿಧಿಸಲಾಯಿತು. ಅದೇ ರೀತಿ, ವಾರ್ಡ್ 159ರಲ್ಲಿ ಅನಧಿಕೃತ ಪ್ಲಾಸ್ಟಿಕ್ ಜಪ್ತಿ ಮಾಡಿ, 8.7 ಸಾವಿರ ರೂ. ದಂಡ ವಿಧಿಸಲಾಯಿತು. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯಾಧಿಕಾರಿ ಡಾ.ಬಾಲಸುಂದರ್, ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ಹೊಟೇಲ್ ಮತ್ತು ಕಾಫಿ ಮಳಿಗೆಗಳಲ್ಲಿ ಧೂಮಪಾನಕ್ಕೆ ಅವಕಾಶ ನೀಡುವುದಿಲ್ಲ. ಅನಧಿಕೃತ ಪ್ಲಾಸ್ಟಿಕ್ ಬಳಕೆ ಮಾಡಲು ಅವಕಾಶ ನೀಡುವುದಿಲ್ಲ ಎಂದರು.

ಬೆಂಗಳೂರು ವ್ಯಾಪ್ತಿಯಲ್ಲಿ 200ಕ್ಕೂ ಹೆಚ್ಚು ಕಾಫಿ ಡೇ ಮಳಿಗೆಗಳಿದ್ದು, ಅವುಗಳಲ್ಲಿ ಸಂಪೂರ್ಣ ಧೂಮಪಾನ ನಿಷೇಧ ಮಾಡಬೇಕು ಎಂದ ಅವರು, ಯಾವುದೇ ಹೊಟೇಲ್ಗಳಲ್ಲಿ ಧೂಮಪಾನಕ್ಕೆ ಅವಕಾಶ ನೀಡಿದರೆ ಅಂತಹ ಹೊಟೇಲ್ಗಳಿಗೆ ಬೀಗ ಜಡಿಯುವುದರ ಜೊತೆಗೆ ಭಾರೀ ಪ್ರಮಾಣದ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News