ಪರೀಕ್ಷೆ ಬರೆಯಲು ಈ ಯುವತಿ ಕುದುರೆ ಮೇಲೆ ಹೋಗಿದ್ದೇಕೆ ಗೊತ್ತೇ?

Update: 2019-04-10 03:55 GMT

ತ್ರಿಶ್ಶೂರ್, ಎ.10: ಶಾಲಾ ಸಮವಸ್ತ್ರ ಧರಿಸಿದ ಯುವತಿಯೊಬ್ಬಳು ಕುದುರೆ ಸವಾರಿ ಮಾಡುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪರೀಕ್ಷೆಗೆ ತೆರಳಲು ತಾನು ಏಕೆ ಕುದುರೆಯನ್ನು ಆಯ್ಕೆ ಮಾಡಿಕೊಂಡೆ ಎನ್ನುವುದನ್ನು ಯುವತಿ ಬಹಿರಂಗಪಡಿಸಿದ್ದಾಳೆ.

"ನಾನು ಪ್ರತಿದಿನ ಕುದುರೆ ಮೇಲೆ ಹೋಗುವುದಿಲ್ಲ. ಕೇವಲ ಕೆಲ ವಿಶೇಷ ದಿನಗಳಲ್ಲಿ ಅಥವಾ ಬೋರ್ ಆದಾಗ ಮಾತ್ರ ಹೋಗುತ್ತೇನೆ; ಕೆಲವೊಮ್ಮೆ ಪರೀಕ್ಷೆಯ ದಿನಗಳಲ್ಲೂ ಶಾಲೆಗೆ ಕುದುರೆ ಸವಾರಿ ಮಾಡಿಕೊಂಡು ಹೋಗುತ್ತೇನೆ. ನಾನು ಕುದುರೆ ಸವಾರಿ ಮಾಡಿಕೊಂಡು ಹೋಗಿದ್ದಕ್ಕೆ ಏನು ವಿಶೇಷ ಕಾರಣ ಎಂದು ಕೇಳಿದರೆ, ಅದು ನನ್ನ 10ನೇ ತರಗತಿ ಪರೀಕ್ಷೆಯ ಕೊನೆಯ ದಿನ" ಎಂದು ಕೃಷ್ಣಾ ಬಹಿರಂಗಪಡಿಸಿದ್ದಾಳೆ.

ಅಗಲ ಕಿರಿದಾದ ಪಟ್ಟಣ ರಸ್ತೆಯಲ್ಲಿ ಧೈರ್ಯದಿಂದ ಯುವತಿ ವೇಗವಾಗಿ ಕುದುರೆ ಸವಾರಿ ಮಾಡಿಕೊಂಡು ಹೋಗುತ್ತಿರುವ ವೀಡಿಯೊವನ್ನು ಉದ್ಯಮಿ ಆನಂದ್ ಮಹೀಂದ್ರಾ ಕೂಡಾ ಮೆಚ್ಚಿಕೊಂಡಿದ್ದರು. ಕೆಲ ವರ್ಷಗಳ ತರಬೇತಿ ಬಳಿಕ ಏಳನೇ ತರಗತಿಯಲ್ಲೇ ಕುದುರೆ ಸವಾರಿ ಮಾಡಲು ಆರಂಭಿಸಿದ್ದಾಗಿ ಕೃಷ್ಣಾ ಹೇಳಿದ್ದಾಳೆ.

"ನನ್ನ ಸ್ನೇಹಿತರೊಬ್ಬರು ಕುದುರೆ ಸವಾರಿ ಸುಲಭವಲ್ಲ ಎಂದು ಹೇಳಿದಳು; ಬಾಲಕಿಗಂತೂ ಕುದುರೆ ಸವಾರಿ ಸಾಧ್ಯವೇ ಇಲ್ಲ. ಝಾನ್ಸಿ ರಾಣಿಯಂಥ ವೀರವನಿತೆಯರಿಗೆ ಮಾತ್ರ ಸಾಧ್ಯ ಎಂದರು. ಆದ್ದರಿಂದ ಸಾಮಾನ್ಯ ಹುಡುಗಿಯೊಬ್ಬಳು ಏಕೆ ಕುದುರೆ ಸವಾರಿ ಮಾಡಬಾರದು ಎಂದು ಯೋಚಿಸಿ ಅದನ್ನು ಕಲಿತೆ" ಎಂದು ಕೃಷ್ಣಾ ವಿವರಿಸಿದಳು. ಈಕೆ ಸವಾರಿ ಮಾಡುವ ಕುದುರೆ ತಂದೆಯಿಂದ ಉಡುಗೊರೆಯಾಗಿ ಬಂದದ್ದು. ಈ ಪುಟ್ಟ ಬಿಳಿ ಕುದುರೆಯನ್ನು ಕೃಷ್ಣಾ ಸುಲಭವಾಗಿ ನಿಯಂತ್ರಿಸಬಲ್ಲಳು.

"ಕೃಷ್ಣಾ ಬಹಳಷ್ಟು ಮಂದಿಗೆ ಸ್ಫೂರ್ತಿ. ಆಕೆ ಮತ್ತು ಕುದುರೆಯ ಫೋಟೊವನ್ನು ನನ್ನ ಮೊಬೈಲ್ ಸ್ಕ್ರೀನ್‌ಸೇವರ್ ಆಗಿ ಬಳಸಿಕೊಳ್ಳಲು ಬಯಸಿದ್ದೇನೆ" ಎಂದು ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News