ಲೋಕಸಭಾ ಚುನಾವಣೆ 2019: ಮೊದಲ ಹಂತದ ಮತದಾನ ಆರಂಭ

Update: 2019-04-11 03:26 GMT

ಹೊಸದಿಲ್ಲಿ, ಎ. 11: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೇ ಅತಿದೊಡ್ಡ ಚುನಾವಣೆಗೆ ಭಾರತ ಸಜ್ಜಾಗಿದ್ದು, 543 ಕ್ಷೇತ್ರಗಳ ಪೈಕಿ 91 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ಆರಂಭವಾಗಿದೆ. 18 ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾನ ಅರಂಭವಾಗಿದ್ದು, ಇದರೊಂದಿಗೆ ಆರು ವಾರಗಳ ಚುನಾವಣಾ ಪ್ರಕ್ರಿಯೆಗೆ ಚಾಲನೆ ದೊರಕಿದೆ.

ಒಟ್ಟು 142 ದಶಲಕ್ಷ ಮತದಾರರು ಇಂದು ಮತ ಚಲಾಯಿಸಲಿದ್ದು, 1,70,664 ಮತಗಟ್ಟೆಗಳನ್ನು ಸಜ್ಜುಗೊಳಿಸಲಾಗಿದೆ.

ಒಟ್ಟು 1279 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ. ಲೋಕಸಭಾ ಚುನಾವಣೆಯ ಜತೆಗೆ ಆಂಧ್ರಪ್ರದೇಶ ಮತ್ತು ಸಿಕ್ಕಿಂ ಮತದಾರರು ಹೊಸ ವಿಧಾನಸಭೆಗಾಗಿಯೂ ಮತದಾನ ಮಾಡುವರು. ಜತೆಗೆ ಕರಾವಳಿ ರಾಜ್ಯ ಒಡಿಶಾದ ಭಾಗಶಃ ಮತದಾರರು ಕೂಡಾ ತಮ್ಮ ಹಕ್ಕು ಚಲಾಯಿಸಲಿದ್ದಾರೆ.

ಮೇ 23ರಂದು ಮತಗಳ ಎಣಿಕೆ ನಡೆಯಲಿದೆ.

"ಹದಿನೇಳನೇ ಲೋಕಸಭೆಗೆ ನಡೆಯುವ ಏಳು ಹಂತಗಳ ಮತದಾನ ಆರಂಭವಾಗಿದೆ. ಭಾರತದ ಜನತೆ ಯಾವುದೇ ಭಯ ಇಲ್ಲದೇ ಮತ ಚಲಾಯಿಸಿ, ಪ್ರಜಾಪ್ರಭುತ್ವದ ಅಡಿಪಾಯವನ್ನು ಮತ್ತಷ್ಟು ಭದ್ರಪಡಿಸಬೇಕು" ಎಂದು ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರಾ ಮನವಿ ಮಾಡಿದ್ದಾರೆ.

2014ರಲ್ಲಿ ವಿಭಜನೆಯಾದ ಆಂಧ್ರಪ್ರದೇಶದ 25 ಲೋಕಸಭಾ ಸ್ಥಾನಗಳು ಮತ್ತು 175 ವಿಧಾನಸಭಾ ಕ್ಷೇತ್ರಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಯಲಿದೆ. ವಿಧಾನಸಭೆಗೆ 2118 ಅಭ್ಯರ್ಥಿಗಳು ಮತ್ತು ಲೋಕಸಭೆಗೆ 319 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 39 ದಶಲಕ್ಷ ಮತದಾರರು ಇವರ ಭವಿಷ್ಯ ನಿರ್ಧರಿಸುವರು.

ತೆಲುಗುದೇಶಂ ಮುಖಂಡ ಹಾಗೂ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಕುಪ್ಪಂ ಕ್ಷೇತ್ರದಿಂದ ಮರು ಆಯ್ಕೆ ಬಯಸಿದ್ದು, ಅವರ ಪುತ್ರ ನರಾ ಲೋಕೇಶ್, ಮಂಗಲಗಿರಿಯಿಂದ ಚೊಚ್ಚಲ ಚುನಾವಣೆ ಎದುರಿಸುತ್ತಿದ್ದಾರೆ. ಮುಖ್ಯ ಎದುರಾಳಿ ವೈಎಸ್‌ಆರ್ ಕಾಂಗ್ರೆಸ್ ಮುಖಂಡ ವೈ.ಎಸ್.ಜಗನ್ಮೋಹನ ರೆಡ್ಡಿ, ಪುಲ್ವಿಂದುಲಾ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದಾರೆ. ಪಕ್ಕದ ತೆಲಂಗಾಣ ರಾಜ್ಯದ 17 ಕ್ಷೇತ್ರಗಳಿಗೂ ಮತದಾನ ಆರಂಭವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News