ಈ ವಿಶೇಷ ಲೋಕಸಭಾ ಕ್ಷೇತ್ರಕ್ಕೆ 80 ಸಾವಿರ ಭದ್ರತಾ ಸಿಬ್ಬಂದಿ !

Update: 2019-04-11 05:47 GMT

ರಾಯಪುರ: ನಕ್ಸಲೀಯ ಚಟುವಟಿಕೆಗಳಿಂದ ಬಾಧಿತವಾದ ಛತ್ತೀಸ್‌ಗಢದ ಬಸ್ತರ್ ಲೋಕಸಭಾ ಕ್ಷೇತ್ರಕ್ಕೆ ಬಿಗಿ ಭದ್ರತೆಯ ನಡುವೆ ಇಂದು ಮತದಾನ ಆರಂಭವಾಗಿದ್ದು, ಚುನಾವಣೆ ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಯುವಂತೆ ಸಕಲ ಭದ್ರತಾ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಒಟ್ಟು 80 ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ನಕ್ಸಲೀಯರು ಚುನಾವಣೆ ಬಹಿಷ್ಕಾರಕ್ಕೆ ಕರೆ ನೀಡಿದ್ದರೂ ಜನ ಮತಗಟ್ಟೆಗಳಿಗೆ ಉತ್ಸಾಹದಿಂದ ಹೋಗುತ್ತಿದ್ದಾರೆ.

ಇದೇ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ದಂತೇವಾಡ ಜಿಲ್ಲೆಯಲ್ಲಿ ಮಂಗಳವಾರವಷ್ಟೇ ನಕ್ಸಲೀಯರು ದಾಳಿ ನಡೆಸಿದ್ದಾರೆ. ಛತ್ತೀಸ್‌ಗಢದ ಏಕೈಕ ಕ್ಷೇತ್ರದಲ್ಲಿ ಮೊದಲ ಹಂತದಲ್ಲಿ ಮತದಾನ ನಡೆಯುತ್ತಿದೆ. ನಕ್ಸಲ್ ದಾಳಿಯಲ್ಲಿ ಬಿಜೆಪಿ ಶಾಸಕ ಭೀಮಾ ಮಾಂಡವಿ ಮತ್ತು ನಾಲ್ವರು ಪೊಲೀಸರು ಜೀವ ಕಳೆದುಕೊಂಡಿದ್ದರು.

"ಬಸ್ತರ್‌ನಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ" ಎಂದು ಛತ್ತೀಸ್‌ಗಢದ ಮುಖ್ಯ ಚುನಾವಣಾ ಅಧಿಕಾರಿ ಪ್ರಕಟಿಸಿದ್ದಾರೆ. ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಳ್ಳುವ ಈ ಕ್ಷೇತ್ರಕ್ಕೆ ಏಳು ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ದಂತೇವಾಡ, ಕೊಂಟ, ಬಿಜಪುರ ಮತ್ತು ನಾರಾಯಣಪುರದಲ್ಲಿ ಬೆಳಿಗ್ಗೆ 7ಕ್ಕೆ ಆರಂಭವಾದ ಮತದಾನ ಮಧ್ಯಾಹ್ನ 3ರವರೆಗೆ ನಡೆಯಲಿದೆ. ಉಳಿದಂತೆ ಬಸ್ತರ್, ಚಿತ್ರಕೂಟ, ಕೊಂಡಗಾಂವ್ ಮತ್ತು ಜಗದಾಳಪುರದಲ್ಲಿ ಸಂಜೆ 5ರವರೆಗೆ ಮತದಾನ ಇರುತ್ತದೆ.

13.72 ಲಕ್ಷ ಮತದಾರರಿದ್ದು, 1879 ಮತಗಟ್ಟೆಗಳಿವೆ. ಈ ಪೈಕಿ 741 ಅತಿಸೂಕ್ಷ್ಮ ಹಾಗೂ 606 ಸೂಕ್ಷ್ಮ ಮತಗಟ್ಟೆಗಳಾಗಿವೆ. 289 ಮತಗಟ್ಟೆಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದ್ದು, 159 ಅತಿಸೂಕ್ಷ್ಮ ಮತಗಟ್ಟೆಗಳಿಗೆ ಚುನಾವಣಾ ಸಿಬ್ಬಂದಿಯನ್ನು ಹೆಲಿಕಾಪ್ಟರ್‌ನಲ್ಲಿ ಕರೆ ತರಲಾಗಿದೆ. 80 ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ವಿಶೇಷ ಕಣ್ಗಾವಲಿಗಾಗಿ ಡ್ರೋಣ್‌ಗಳನ್ನು ವ್ಯವಸ್ಥೆಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News