ಹೊಸ ಅಧ್ಯಕ್ಷರು ಬಂದ ಬಳಿಕ ಅಸಾಂಜ್ ಸ್ವಾತಂತ್ರಕ್ಕೆ ಕಡಿವಾಣ

Update: 2019-04-12 16:43 GMT

ಕ್ವಿಟೊ (ಇಕ್ವೆಡಾರ್), ಎ. 12: ಇಕ್ವೆಡಾರ್ ದೇಶವು ವಿಕಿಲೀಕ್ಸ್ ಸ್ಥಾಪಕ ಜೂಲಿಯನ್ ಅಸಾಂಜ್‌ಗೆ ತನ್ನ ಲಂಡನ್ ರಾಯಭಾರ ಕಚೇರಿಯಲ್ಲಿ ಏಳು ವರ್ಷಗಳ ಕಾಲ ನೀಡಿದ ಆಶ್ರಯವನ್ನು ಗುರುವಾರ ಹಠಾತ್ ಹಿಂದಕ್ಕೆ ಪಡೆದುಕೊಂಡಿರುವುದು ಜಾಗತಿಕ ವಲಯದಲ್ಲಿ ಅಚ್ಚರಿ ಹುಟ್ಟಿಸಿದೆ.

ಆದರೆ, ಇದಕ್ಕೂ ಮೊದಲು ಅಸಾಂಜ್ ಮತ್ತು ಇಕ್ವೆಡಾರ್ ನಡುವಿನ ಸಂಬಂಧವು ತುಂಬಾ ಸಮಯದಿಂದ ಹಳಸಿತ್ತು. ಅಧ್ಯಕ್ಷ ಲೆನಿನ್ ಮೊರೆನೊ ವಿರುದ್ಧ ಅಸಾಂಜ್ ಭ್ರಷ್ಟಾಚಾರ ಆರೋಪಗಳನ್ನು ರಹಸ್ಯವಾಗಿ ಹರಿಯಬಿಡುತ್ತಿದ್ದಾರೆ ಎಂಬ ಸಂಶಯದ ಹಿನ್ನೆಲೆಯಲ್ಲಿ ಅಪನಂಬಿಕೆ ಬೆಳೆದಿತ್ತು ಎನ್ನಲಾಗಿದೆ.

2012ರಲ್ಲಿ ಇಕ್ವೆಡಾರ್‌ನಲ್ಲಿ ರಫೇಲ್ ಕೊರಿಯ ಅಧ್ಯಕ್ಷರಾಗಿದ್ದಾಗ ಅಸಾಂಜ್ ಆ ದೇಶದ ಲಂಡನ್ ರಾಯಭಾರ ಕಚೇರಿಯಲ್ಲಿ ಆಶ್ರಯ ಪಡೆದಿದ್ದರು. ಅಮೆರಿಕದ ರಹಸ್ಯ ದಾಖಲೆಗಳನ್ನು ಸೋರಿಕೆ ಮಾಡಿರುವುದಕ್ಕಾಗಿ ಕೊರಿಯ, ಅಸಾಂಜ್‌ರನ್ನು ‘ಹೀರೊ’ ಆಗಿ ಪರಿಗಣಿಸಿದ್ದರು.

ಆದರೆ, 2017ರಲ್ಲಿ ಅಧಿಕಾರಕ್ಕೆ ಬಂದ ಮೊರೆನೊಗೆ ಅಸಾಂಜ್ ಬಗ್ಗೆ ವಿಶೇಷ ಭಾವನೆಯೇನೂ ಇರಲಿಲ್ಲ. ಆನ್‌ಲೈನ್ ರಾಜಕೀಯ ಹೇಳಿಕೆಗಳನ್ನು ನೀಡದಂತೆ, ರಾಯಭಾರ ಕಚೇರಿಯ ಹಾಲ್‌ಗಳಲ್ಲಿ ಸ್ಕೇಟ್‌ಬೋರ್ಡ್ ಸವಾರಿ ಮಾಡದಂತೆ ಹಾಗೂ ಸಾಕು ಬೆಕ್ಕಿನ ತ್ಯಾಜ್ಯವನ್ನು ಸ್ವಚ್ಛ ಮಾಡುವಂತೆ ಅಸಾಂಜ್‌ಗೆ ಆದೇಶ ನೀಡಲಾಗಿತ್ತು.

ಮೊರೆನೊ ಅವರ ಸಹೋದರ ವಿದೇಶಗಳಲ್ಲಿ ಕಂಪೆನಿಗಳನ್ನು ಸ್ಥಾಪಿಸಿದ್ದಾರೆ ಹಾಗೂ ಮೊರೆನೊ ವಿಶ್ವಸಂಸ್ಥೆಯ ಘಟಕವೊಂದರಲ್ಲಿ ಪ್ರತಿನಿಧಿಯಾಗಿದ್ದಾಗ ಯುರೋಪ್‌ನಲ್ಲಿ ಅವರ ವಿಲಾಸಿ ಜೀವನಕ್ಕೆ ಅವರ ಕುಟುಂಬ ಹಣ ನೀಡುತ್ತಿತ್ತು ಎಂಬ ಆರೋಪಗಳನ್ನು ಅನಾಮಧೇಯ ವೆಬ್‌ಸೈಟ್ ಒಂದು ಮಾಡಿತ್ತು. ಈ ವೆಬ್‌ಸೈಟ್‌ನ ಹಿಂದೆ ವಿಕಿಲೀಕ್ಸ್ ಇದೆ ಎಂಬುದಾಗಿ ಮೊರೆನೊ ಸರಕಾರ ಆರೋಪಿಸಿದೆ.

ಈ ವರದಿಗಳನ್ನು ವಿಕಿಲೀಕ್ಸ್ ಟ್ವೀಟ್ ಮಾಡಿತ್ತು. ಆದರೆ, ಈ ಸೋರಿಕೆಗಳಿಗೆ ಅಸಾಂಜ್ ಕಾರಣರಲ್ಲ ಎಂಬುದಾಗಿ ‘ರಾಯ್ಟರ್ಸ್’ಗೆ ನೀಡಿದ ಹೇಳಿಕೆಯೊಂದರಲ್ಲಿ ಬಲವಾಗಿ ಪ್ರತಿಪಾದಿಸಿತು.

ಸಿಬ್ಬಂದಿ ಬದಲಾವಣೆ

ಮೊರೆನೊ ಅಧಿಕಾರಕ್ಕೆ ಬಂದ ಬಳಿಕ, ರಾಯಭಾರ ಕಚೇರಿಯಲ್ಲಿನ ಎಲ್ಲ ಸಿಬ್ಬಂದಿಯನ್ನು ಬದಲಾಯಿಸಿದರು. ಮೊದಲಿದ್ದ ಸಿಬ್ಬಂದಿ ಅಸಾಂಜ್ ಜೊತೆ ಸ್ನೇಹದಿಂದ ಇದ್ದರೆ, ನಂತರ ಬಂದ ಸಿಬ್ಬಂದಿ, ಅಸಾಂಜ್‌ರನ್ನು ನೋಡಲು ಬರುವವರೊಂದಿಗೆ ಸ್ನೇಹದಿಂದ ವರ್ತಿಸುತ್ತಿದ್ದರು, ಆದರೆ ಅಸಾಂಜ್ ಜೊತೆ ಕೆಟ್ಟದಾಗಿ ವರ್ತಿಸುತ್ತಿದ್ದರು ಎಂಬುದಾಗಿ ಅವರ ಸ್ನೇಹಿತರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News