ಈಗ ಅಯೋಧ್ಯೆಯಲ್ಲಿ ರಾಮಮಂದಿರ ಬಗ್ಗೆ ಯಾರೂ ಮಾತನಾಡುತ್ತಿಲ್ಲ ಏಕೆ ಗೊತ್ತೇ?

Update: 2019-04-13 05:09 GMT

ಅಯೋಧ್ಯೆ, ಎ.13: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಿಚಾರ ರಾಜಕೀಯ ವಿಷಯವಾದ ಬಳಿಕ ಇದೇ ಮೊದಲ ಬಾರಿಗೆ ರಾಮ ಮಂದಿರ ನಿರ್ಮಾಣ ವಿಚಾರ ಕೇವಲ ಬಿಜೆಪಿ ಪ್ರಣಾಳಿಕೆಗಷ್ಟೇ ಸೀಮಿತವಾಗಿದೆ. 2019ರ ಚುನಾವಣಾ ರ್ಯಾಲಿಗಳಲ್ಲೆಲ್ಲೂ ಈ ವಿಷಯ ಪ್ರಸ್ತಾಪವಾಗುತ್ತಿಲ್ಲ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಇದಕ್ಕೆ ಪ್ರಮುಖ ಕಾರಣವೆಂದರೆ ಅಯೋಧ್ಯೆಯಲ್ಲಿ ಮಂದಿರ ನಿರ್ಮಿಸಬೇಕು ಎಂಬ ಉತ್ಸಾಹ ಸ್ಥಳೀಯರಲ್ಲೇ ಕಂಡುಬರುತ್ತಿಲ್ಲ. ರಾಮನವಮಿ ಹಿಂದಿನ ದಿನ ಕೂಡಾ, "ಮಂದಿರ್ ವಹಿ ಬನಾಯೇಗಾ" ಎಂಬ ಘೋಷಣೆಗಳು ಕೂಡಾ ಬಲಪಂಥೀಯ ಸಂಘಟನೆಗಳಿಂದ ಕೇಳಿಬಂದಿರಲಿಲ್ಲ. ಕಳೆದ ವರ್ಷ ಚಾಲನೆ ಪಡೆದ ರಾಮ ರಾಜ್ಯ ರಥ ಅಯೋಧ್ಯೆಗೆ ಶುಕ್ರವಾರ ಆಗಮಿಸಿದಾಗ ಕೂಡಾ ಜನತೆಯಲ್ಲಿ ಉತ್ಸಾಹ ಕಂಡುಬರಲಿಲ್ಲ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

"ಪ್ರಧಾನಿ ನರೇಂದ್ರ ಮೋದಿಯವರಿಗೆ ಬಾಲಾಕೋಟ್ ದಾಳಿ ಅಯೋಧ್ಯೆ ವಿಚಾರಕ್ಕಿಂತ ಹೆಚ್ಚು ಭಾವನಾತ್ಮಕ ವಿಷಯ" ಎಂದು ಅವಧಾ ವಿವಿ ನಿವೃತ್ತ ಪ್ರೊಫೆಸರ್ ಮತ್ತು ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತ ರಾಮಶಂಕರ್ ತ್ರಿಪಾಠಿ ಹೇಳುತ್ತಾರೆ. "ಮಂದಿರ್ ನಹಿ, ರಾಷ್ಟ್ರವಾದ್ ಮುದ್ದಾ ಹೆ, ಮಂದಿರ್ ಕಭಿ ಮುದ್ದಾ ಥಾ ಹಿ ನಹಿ. ಹಮ್ ತೋ ಮೋದಿ ಕೆ ನಾಮ್ ಪೇ ಜೀತೇಂಗೆ (ದೇವಸ್ಥಾನವಲ್ಲ; ರಾಷ್ಟ್ರೀಯವಾದ ಈ ಬಾರಿಯ ಚುನಾವಣಾ ವಿಷಯ. ನಾವೆಂದೂ ದೇವಸ್ಥಾನಕ್ಕಾಗಿ ಮತ ಕೇಳಿಲ್ಲ. ಮೋದಿಯ ವ್ಯಕ್ತಿತ್ವದಿಂದಾಗಿ ನಾನು ಗೆಲ್ಲುತ್ತೇನೆ" ಎಂದು ಅಯೋಧ್ಯೆ ಪ್ರದೇಶ ಒಳಪಡುವ ಫಿರೋಝಾಬಾದ್ ಕ್ಷೇತ್ರದ ಹಾಲಿ ಸಂಸದ ಲಲ್ಲು ಸಿಂಗ್ ಹೇಳುತ್ತಾರೆ.

ರಾಮಮಂದಿರ ನಿರ್ಮಾಣ ಚುನಾವಣಾ ವಿಷಯವಾಗದ ಬಗ್ಗೆ ವಿಎಚ್‌ಪಿ ಕೇಂದ್ರೀಯ ಕಾರ್ಯದರ್ಶಿ ರಾಜೇಂದ್ರ ಪಂಕಜ್ ಅವರನ್ನು ಪ್ರಶ್ನಿಸಿದಾಗ "ರಾಷ್ಟ್ರವಾದ ಮತ್ತು ರಾಮ ಎರಡೂ ಅಂತರ ಸಂಬಂಧ ಹೊಂದಿದ ವಿಚಾರಗಳು" ಎಂದು ಸಬೂಬು ಹೇಳಿದರು.

1989ರ ಬಳಿಕ ಅಯೋಧ್ಯೆಗೆ ಯಾವ ಪ್ರಧಾನಿಯೂ ಭೇಟಿ ನೀಡಿಲ್ಲ. ಆಗ ರಾಜೀವ್‌ ಗಾಂಧಿ ಇಲ್ಲಿಂದ ಚುನಾವಣಾ ಪ್ರಚಾರ ಆರಂಭಿಸಿದ್ದರು. "ರಾಮಭಕ್ತ ಮೋದಿ ಒಮ್ಮೆಯಾದರೂ ಇಲ್ಲಿಗೆ ಭೇಟಿ ನೀಡಬೇಕು ಎನ್ನುವುದು ನಮ್ಮ ನಿರೀಕ್ಷೆ. ಆದರೆ ಅವರು ಕೂಡಾ ಅಯೋಧ್ಯೆಗೆ ಬರಲಿಲ್ಲ" ಎಂದು ಸ್ಥಳೀಯ ನಿವಾಸಿ ಭೋಲೆನಾಥ್ ಪಾಂಡೆ ಹೇಳುತ್ತಾರೆ.

ಎರಡು ಬರಿಯ ಸಂಸದ ಹಾಗೂ ಅಯೋಧ್ಯೆ ನಿವಾಸಿ ವಿನಯ್ ಕಟಿಯಾರ್ ಹೇಳುವಂತೆ, "ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ನನಗೆ ಇನ್ನೂ ಹೈಕಮಾಂಡ್‌ನಿಂದ ಸೂಚನೆ ಬಂದಿಲ್ಲ. ಈ ಬಾರಿ ಈ ಕ್ಷೇತ್ರ ಸುಲಭದ ತುತ್ತಲ್ಲ". ಬಾಬರಿ-ರಾಮಜನ್ಮಭೂಮಿ ಪ್ರಕರಣದ ಪ್ರಮುಖ ಅರ್ಜಿದಾರ ಇಕ್ಬಾಲ್ ಅನ್ಸಾರಿಯವರ ವಾದವೇ ಬೇರೆ. "ರಾಮ್ ಲಲ್ಲಾ ದೇವಾಲಯ ಈಗಾಗಲೇ ವಿವಾದಿತ ಸ್ಥಳದಲ್ಲಿದೆ. ಪ್ರತಿ ದಿನ 5000 ಯಾತ್ರಾರ್ಥಿಗಳು ಇಲ್ಲಿಗೆ ಆಗಮಿಸಿ ಪೂಜೆ ಸಲ್ಲಿಸುತ್ತಾರೆ. ಇದು ಆದ್ದರಿಂದ ಹೇಗೆ ಬಿಜೆಪಿಗೆ ಚುನಾವಣಾ ವಿಷಯವಾಗಲು ಸಾಧ್ಯ?" ಎನ್ನುವುದು ಅವರ ಪ್ರಶ್ನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News