ನಿತೀಶ್ ರನ್ನು ಪ್ರಧಾನಿ ಅಭ್ಯರ್ಥಿಯಾಗಿಸಿದರೆ ತೇಜಸ್ವಿಗೆ ಸಿಎಂ ಪಟ್ಟದ ಆಮಿಷ: ರಾಬ್ರಿ ದೇವಿ

Update: 2019-04-13 11:10 GMT

ಪಾಟ್ನಾ : ತಮ್ಮನ್ನು ಮಹಾಮೈತ್ರಿಯ ಪ್ರಧಾನಿ ಅಭ್ಯರ್ಥಿಯನ್ನಾಗಿಸಿದರೆ  ಬಿಹಾರದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯ ನಂತರ ತೇಜಸ್ವಿ ಯಾದವ್ ಅವರನ್ನು ಮುಖ್ಯಮಂತ್ರಿಯನ್ನಾಗಿಸುವ ಆಫರ್ ಅನ್ನು ಬಿಹಾರ ಸಿಎಂ ನಿತೀಶ್ ಕುಮಾರ್ ಮಾಡಿದ್ದಾರೆಂದು ಮಾಜಿ ಸಿಎಂ ಹಾಗೂ ರಾಷ್ಟ್ರೀಯ ಜನತಾ ದಳದ ನಾಯಕಿ ರಾಬ್ರಿ ದೇವಿ ಹೇಳಿದ್ದಾರೆ.

"ಎನ್‍ಡಿಎ, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ನಿತೀಶ್ ಅವರಿಗೆ ಯಾವುದೇ ಬೆಲೆ ನೀಡುತ್ತಿಲ್ಲ. ಅವರು ಬಿಜೆಪಿಯಿಂದಾಗಿ ಒತ್ತಡದಲ್ಲಿದ್ದು ಇದೇ ಕಾರಣಕ್ಕಾಗಿ ನಮ್ಮ ಹತ್ತಿರ ವಾಪಸ್ ಬರಲಿಚ್ಛಿಸಿದ್ದಾರೆ. ಪ್ರಶಾಂತ್ ಕಿಶೋರ್ ಕನಿಷ್ಠ ಐದು ಬಾರಿ ಆಗಮಿಸಿದ್ದರು,'' ಎಂದು ರಾಬ್ರಿ ದೇವಿ ಹೇಳಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ರಚಿಸಲಾಗಿರುವ ಮಹಾಮೈತ್ರಿಯ ಬಗ್ಗೆ ಮಾತನಾಡಿದ ಅವರು "ಲಾಲೂ ಜಿ ಅವರು ಇಲ್ಲಿಲ್ಲದ ಕಾರಣ ನಾನು ಮಾತನಾಡುತ್ತಿದ್ದೇನೆ, ಮಹಾಮೈತ್ರಿಗೆ 400 ಸ್ಥಾನಗಳು ದೊರೆಯಲಿವೆ. ಲಾಲೂ ಜಿ ಏಕೆ ಜೈಲಿನಲ್ಲಿದ್ದಾರೆ? ಅವರಿಗೆ ಮಂಜು ವರ್ಮ ಪ್ರಕರಣದಲ್ಲಿ ಏನನ್ನೂ ಪತ್ತೆ ಹಚ್ಚಲಾಗಿಲ್ಲ. ಲಾಲೂ ಅವರು ಮೇವು ಹಗರಣದಲ್ಲಿ ಶಾಮೀಲಾಗಿಲ್ಲ. ಅವರು ಬಡವರ ದನಿಯಾಗಿದ್ದರು ಆದರೆ ಅವರಿಗೆ ಕೃತಜ್ಞರಾಗಿರುವ ಬದಲು ಜನರು ಅವರನ್ನು ಹಗರಣಕ್ಕಾಗಿ ದೂರಿದರು,'' ಎಂದರು.

ತೇಜಸ್ವಿ ಯಾದವ್ ಮಾತನಾಡುತ್ತಾ "ನಮ್ಮನ್ನು ಭೇಟಿಯಾಗಲು ಪ್ರಶಾಂತ್ ಕಿಶೋರ್ ಅವರಿಗೆ ನಿತೀಶ್ ಕುಮಾರ್ ಹೇಳಿದ್ದಾರೆಯೇ ಎಂಬುದನ್ನು ಅವರು ಸ್ಪಷ್ಟ ಪಡಿಸಬೇಕು. ಲಾಲು ಅವರ ಪುಸ್ತಕ `ಗೋಪಾಲಗಂಜ್ ಟು ರೈಸಿನಾ' ಸತ್ಯವನ್ನು ಹೊರಗೆಡಹಿದೆ. ಕಿಶೋರ್ ಅವರು ಸಕ್ರಿಯರಾಗಿಲ್ಲದೇ ಇದ್ದರೂ ಟ್ವಿಟ್ಟರ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರು ನಿತೀಶ್ ಜಿ ಅವರ ಅನುಮತಿ ಪಡೆದಿದ್ದಾರೆಯೇ? ಮೊದಲು ಪಡೆಯಬೇಕು,'' ಎಂದು ಹೇಳಿದ್ದಾರೆ.

ನಿತೀಶ್ ಅವರು ಮಹಾಮೈತ್ರಿಯನ್ನು ಸೇರಿಕೊಳ್ಳಲು ಇಚ್ಛಿಸಿದ್ದಾರೆಂಬ ವರದಿಗಳಿಗೆ ಪ್ರತಿಕ್ರಿಯಿಸಿದ ತೇಜಸ್ವಿ "ಇದು ನಿಜ ಹಾಗೂ ಇದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ.  ಎನ್‍ಡಿಯ ಜತೆ 2017ರಲ್ಲಿ ಸೇರಿದ ಆರು ತಿಂಗಳೊಳಗಾಗಿಯೇ ಅವರು ಮತ್ತೆ ಮಹಾಮೈತ್ರಿ ಸೇರಲು ನಡೆಸುತ್ತಿರುವ ಯತ್ನಗಳ ಹಿಂದಿನ ಕಾರಣವೇನೆಂದು ಅವರು ಬಹಿರಂಗ ಪಡಿಸಬೇಕು,''ಎಂದು ತೇಜಸ್ವಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News