‘ಸಂವಿಧಾನ ಉಳಿಸಿ ತೇಜಸ್ವಿ ಸೂರ್ಯನನ್ನು ತೊಲಗಿಸಿ’ ಅಭಿಯಾನ

Update: 2019-04-13 14:51 GMT

ಬೆಂಗಳೂರು, ಎ.13: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ‘ತೇಜಸ್ವಿ ಸೂರ್ಯನನ್ನು ತೊಲಗಿಸಿ ಸಂವಿಧಾನ ಉಳಿಸಿ’ ಎಂದು ದಲಿತ ಸಂಘಟನೆಗಳ ಮಹಾಸಭಾ ಮತದಾರರಲ್ಲಿ ಮನವಿ ಮಾಡಿದೆ.

ಶನಿವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾರತೀಯ ಪ್ರಜಾ ಸಂಘದ ರಾಜ್ಯಾಧ್ಯಕ್ಷ ಜಯಪ್ರಕಾಶ್, ತೇಜಸ್ವಿ ಸೂರ್ಯನ ದಲಿತ ವಿರೋಧಿ, ಸಂವಿಧಾನ ವಿರೋಧಿ ಹಾಗೂ ಮಹಿಳಾ ವಿರೋಧಿ ನೀತಿ ಖಂಡನೀಯವಾದುದು. ದೇಶದ ಪ್ರತಿಯೊಬ್ಬ ಪ್ರಜೆಯನ್ನು ಸಮಾನವೆಂದು ಕಾಣುವ ಭಾರತದ ಸಂವಿಧಾನವನ್ನು ಬದಲಿಸುವಂತೆ ಮಾತನಾಡುವ ಈ ವ್ಯಕ್ತಿಗೆ ನಿಮ್ಮ ಅಮೂಲ್ಯವಾದ ಮತವನ್ನು ಹಾಕಬೇಡಿ ಎಂದು ವಿನಂತಿಸಿಕೊಂಡರು.

ಈ ತಲೆ ಕೆಟ್ಟ ತೇಜಸ್ವಿ ಸೂರ್ಯ ಈ ಹಿಂದೆ ಒಂದು ಖಾಸಗಿ ಚಾನಲ್‌ನಲ್ಲಿ ಮಾತನಾಡುತ್ತಾ ಸಂಬಂಧವೇ ಇಲ್ಲದ ವಿಚಾರದಲ್ಲಿ ಅಂಬೇಡ್ಕರ್ ಒಬ್ಬ ದೇಶದ್ರೋಹಿ ಎನ್ನುವ ಹೇಳಿಕೆ ನೀಡಿದ್ದ. ಈ ಮನುವಾದಿ ಕುತಂತ್ರಿ ಕಾನೂನು ರೂಪಿಸುವ ಲೋಕಸಭೆಗೆ ಅರ್ಹನೇ? ಅಲ್ಲದೆ, ಅಂಬೇಡ್ಕರ್ ವಿಗ್ರಹಗಳನ್ನು ಕೆಡವಿದವರಿಗೆ ನನ್ನ ಬೆಂಬಲವಿದೆ ಎಂದು ಹೇಳುವ ಸಮಾಜ ದ್ರೋಹಿಗೆ ಚುನಾವಣೆ ಕಣಕ್ಕೆ ಇಳಿಯಲು ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.

ಇಡೀ ದೇಶವೇ ಹೆಣ್ಣು ಮಕ್ಕಳನ್ನು ಗೌರವಿಸುತ್ತಿದೆ. ಸಂವಿಧಾನದಲ್ಲಿ ಮಹಿಳೆಯರಿಗೆ ಸಮಾನ ಹಕ್ಕು ಪ್ರತಿಪಾದಿಸಿದೆ. ಆದರೆ, ಹೆಣ್ಣು ಮಕ್ಕಳು ಮನೆ ಕೆಲಸಕ್ಕೆ ಮಾತ್ರ ಸೀಮಿತವಾಗಬೇಕೆಂದು ಹೇಳುವ ಈ ಹೆಣ್ಣು ಬಾಕ ಸ್ತ್ರೀ ವಿರೋಧಿ ಸಂಸತ್ತಿಗೆ ಹೋಗಲು ಅನರ್ಹ ವ್ಯಕ್ತಿಯಾಗಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಜನರು ದಡ್ಡರಲ್ಲ. ದಲಿತರನ್ನೂ, ಸಾರ್ವಭೌಮ ಸಂವಿಧಾನ ಹಾಗೂ ಹೆಣ್ಣು ಮಕ್ಕಳನ್ನೂ ಗೌರವಿಸದ ತೇಜಸ್ವಿ ಸೂರ್ಯನಿಗೆ ನಾವೆಲ್ಲರೂ ಓಟು ನೀಡಲು ಎಲ್ಲ ಕಳೆದುಕೊಂಡವರಲ್ಲ. ಸ್ವಾಭಿಮಾನ ತುಂಬಿರುವ ಭಾರತೀಯರು.

-ಜಯಪ್ರಕಾಶ್, ಭಾರತೀಯ ಪ್ರಜಾ ಸಂಘದ ರಾಜ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News