ಕೇರಳ: ಚುನಾವಣೆಗಳಿಗೆ ಮುನ್ನ ಶಬರಿಮಲೆ ಸಂಘಟನೆಯಿಂದ ‘ನಾಮಜಪ’ ಪ್ರತಿಭಟನೆ

Update: 2019-04-13 15:57 GMT

ತಿರುವನಂತಪುರ,ಎ.13: ಕೇರಳದಲ್ಲಿ ಲೋಕಸಭಾ ಚುನಾವಣೆಗೆ ಕೇವಲ ಒಂಭತ್ತು ದಿನಗಳು ಬಾಕಿಯುಳಿದಿರುವಂತೆ ಶನಿವಾರ ವಿವಿಧ ಹಿಂದು ಸಂಘಟನೆಗಳ ಒಕ್ಕೂಟವಾಗಿರುವ ಶಬರಿಮಲೆ ಕರ್ಮ ಸಮಿತಿಯು ಶಬರಿಮಲೆ ಪ್ರತಿಭಟನೆಗೆ ಸಂಬಂಧಿಸಿದಂತೆ ತನ್ನ ಸದಸ್ಯರ ವಿರುದ್ಧ ಪ್ರಕರಣಗಳ ಸಾಮೂಹಿಕ ಹೇರಿಕೆಯನ್ನು ಪ್ರತಿಭಟಿಸಲು ಇಲ್ಲಿಯ ಸಚಿವಾಲಯ ಕಟ್ಟಡದ ಎದುರು ಧರಣಿಯನ್ನು ನಡೆಸಿತು.

ಎಲ್ಲ ವಯೋಮಾನದ ಮಹಿಳೆಯರಿಗೆ ಶಬರಿಮಲೆ ದೇವಸ್ಥಾನಕ್ಕೆ ಪ್ರವೇಶಾವಕಾಶ ಕಲ್ಪಿಸಿರುವ ಸರ್ವೋಚ್ಚ ನ್ಯಾಯಾಲಯದ ಸೆ.28ರ ತೀರ್ಪನ್ನು ಅನುಷ್ಠಾನಿಸುವ ಸಿಪಿಎಂ ನೇತೃತ್ವದ ಎಲ್‌ಡಿಎಫ್ ಸರಕಾರದ ವಿರುದ್ಧ ನಡೆದಿದ್ದ ಪ್ರತಿಭಟನೆಗಳ ನೇತೃತ್ವ ವಹಿಸಿದ್ದ ಸಮಿತಿಯು ತನ್ನ ಕಾರ್ಯಕರ್ತರನ್ನು ಅಕ್ರಮವಾಗಿ ವಿವಿಧ ಕ್ರಿಮಿನಲ್ ಪ್ರಕರಣಗಳಲ್ಲಿ ಸಿಲುಕಿಸಲಾಗುತ್ತಿದೆ ಎಂದು ಆರೋಪಿಸಿತು.

ಮಹಿಳೆಯರು ಸೇರಿದಂತೆ ಭಾರೀ ಸಂಖ್ಯೆಯಲ್ಲಿ ಕಾರ್ಯಕರ್ತರು ಸುಡುಬಿಸಿಲನ್ನೂ ಲೆಕ್ಕಿಸದೆ ರಸ್ತೆಯಲ್ಲಿ ಕುಳಿತು ಅಯ್ಯಪ್ಪ ಸ್ವಾಮಿಯ ಮಂತ್ರವನ್ನು ಪಠಿಸುತ್ತ ‘ನಾಮಜಪ’ ಪ್ರತಿಭಟನೆಯನ್ನು ನಡೆಸಿದರು.

ಚುನಾವಣೆಗೆ ಮುನ್ನ ನಡೆದಿರುವ ಈ ಧರಣಿಯು ಶಬರಿಮಲೆ ಪ್ರತಿಭಟನೆಗಳ ನೆನಪು ಮರುಕಳಿಸುವಂತೆ ಮಾಡಿದೆ. ಕೇರಳದಲ್ಲಿ ಎ.23ರಂದು ಏಕಹಂತದಲ್ಲಿ ಲೋಕಸಭಾ ಚುನಾವಣೆಯು ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News