ಪ್ರಧಾನಿ ಮೋದಿಗೆ ಟ್ವೀಟ್ ಮೂಲಕ ವ್ಯಂಗ್ಯಭರಿತ ಸ್ವಾಗತ ಕೋರಿದ ಕೃಷ್ಣಭೈರೇಗೌಡ

Update: 2019-04-13 16:02 GMT

ಬೆಂಗಳೂರು, ಎ.13: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಕೃಷ್ಣ ಭೈರೇಗೌಡ, ಪ್ರಧಾನಿ ನರೇಂದ್ರ ಮೋದಿಗೆ ಟ್ವಿಟ್ ಮೂಲಕ ವ್ಯಂಗ್ಯಭರಿತ ಸ್ವಾಗತವನ್ನು ಕೋರಿದ್ದಾರೆ.

2014ರಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೀರಾ ಎಂದು ಪ್ರಶ್ನಿಸಿರುವ ಕೃಷ್ಣಭೈರೇಗೌಡ, ಭರವಸೆಗಳನ್ನು ಈಡೇರಿಸಿರುವ ಕುರಿತು ರಿಪೋರ್ಟ್ ಕಾರ್ಡ್ ನೀಡಿ ಎಂದು ಆಗ್ರಹಿಸಿದ್ದಾರೆ.

10 ಸಾವಿರ ಕೋಟಿ ರೂ. ಬೆಂಗಳೂರಿಗೆ ಕೊಡುವ ಭರವಸೆ ಈಡೇರಿಸಿದ್ದೀರಾ? ಎಲ್ಲಿದೆ ಅನುದಾನ? ಯಲಹಂಕದಲ್ಲಿ ಪವರ್ ಪ್ಲಾಂಟ್ ಮಾಡೋದಾಗಿ ಹೇಳಿದ್ದು ಜಾರಿಯಾಗಿದೆಯಾ? ರಾಜ್ಯ ಸರಕಾರವೇ ಸ್ವಂತ ಅನುದಾನದಲ್ಲಿ ಯೋಜನೆ ಜಾರಿಗೆ ಮುಂದಾಗಿದೆ ಎಂದು ಅವರು ಟ್ವಿಟ್ ಮಾಡಿದ್ದಾರೆ. ಬೆಂಗಳೂರಿಗೆ ಬುಲೆಟ್ ಟ್ರೇನ್ ಅಂತ ಹೇಳಿದ್ದು ಜಾರಿಯಾಗಿದೆಯಾ ಎಂದು ಪ್ರಶ್ನಿಸಿರುವ ಕೃಷ್ಣ ಭೈರೇಗೌಡ, ಮೋನೋ ರೈಲು ಕೊಡುವ ಭರವಸೆಯಂತೆ ಈ ಕ್ರಮಕ್ಕೇನಾದ್ರೂ ಮುಂದಾಗಿದ್ದೀರಾ? ಎಂದು ಕೇಳಿದ್ದಾರೆ.

10 ಕೇಂದ್ರೀಯ ವಿದ್ಯಾಲಯ ಕೊಡ್ತೀನಿ ಅಂದವರು, ಒಂದು ಕೇಂದ್ರೀಯ ವಿದ್ಯಾಲಯವನ್ನಾದರೂ ಸ್ಥಾಪಿಸಿದ್ದೀರಾ? ಬೆಂಗಳೂರಿಗೆ ಐಐಟಿ ಕೊಡ್ತೇನೆ ಅಂದಿದ್ದ ನೀವು ಐಐಟಿ ಕೊಟ್ರಾ? ನ್ಯಾಷನಲ್ ಎರೋನಾಟಿಕಲ್ ಯೂನಿವರ್ಸಿಟಿ ಕೊಡ್ತೇನೆ ಅಂದ್ದಿದ್ದವರು ಕನಿಷ್ಟ ಪ್ರಯತ್ನವನ್ನಾದ್ರೂ ಮಾಡಿದ್ರಾ? ಎಂದು ಕೃಷ್ಣ ಭೈರೇಗೌಡ ಪ್ರಶ್ನಿಸಿದ್ದಾರೆ.

1 ಕೋಟಿ ರೂ. ವೆಚ್ಚದ ಅಂತರ್‌ರಾಷ್ಟ್ರೀಯ ಕ್ರೀಡಾ ಸಮುಚ್ಛಯ ಮಾಡ್ತೇನೆ ಅಂದವರು ಅದನ್ನು ಕೊಟ್ರಾ? ವಿಶೇಷ ಜ್ಞಾನ ವಲಯ(ಸ್ಪೆಷಲ್ ನಾಲೆಡ್ಜ್ ರೆನ್) ಕೊಡ್ತೇನೆ ಅಂದಿದ್ದ ಭರವಸೆ ಏನಾಯ್ತು? ಅಂತರ್‌ರಾಷ್ಟ್ರೀಯ ಕನ್ವೇನ್‌ಷನಲ್ ಹಾಲ್ ಕೊಡ್ತೇನೆ ಅಂದ ಭರವಸೆ ಈಡೇರಿದೆಯಾ? 5 ವರ್ಷದ ಅವಧಿಯಲ್ಲಿ ಸುಳ್ಳು ಭರವಸೆಯನ್ನು ಕೊಟ್ಟಿರುವ ನೀವು ಈ ಬಾರಿ ಸುಳ್ಳು ಹೇಳಬೇಡಿ ಎಂದು ಪ್ರಧಾನಿಗೆ ಕೃಷ್ಣಭೈರೇಗೌಡ ಟ್ವಿಟ್‌ನಲ್ಲಿ ಸರಣಿ ಪ್ರಶ್ನೆಗಳನ್ನು ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News