'ವನ್ ವೋಟ್, ವನ್ ನೋಟ್' ಘೋಷಣೆ: ಮೋದಿ ಹೋಲುವ ಪಕ್ಷೇತರನಿಗೆ ನೋಟಿಸ್

Update: 2019-04-14 03:36 GMT

ಲಕ್ನೋ, ಎ. 14: ಪ್ರಧಾನಿ ನರೇಂದ್ರ ಮೋದಿಯನ್ನು ಹೋಲುವ ವ್ಯಕ್ತಿ, ಗೃಹ ಸಚಿವ ರಾಜನಾಥ್ ಸಿಂಗ್ ವಿರುದ್ಧ ಕಣಕ್ಕೆ ಧುಮುಕಿರುವುದು ಎಲ್ಲೆಡೆ ಸುದ್ದಿಯಾಗಿತ್ತು. ಇದೀಗ ಅಭಿನಂದನ್ ಪಾಠಕ್ "ವನ್ ವೋಟ್, ವನ್ ನೋಟ್" ಘೋಷಣೆಗಾಗಿ ಚುನಾವಣಾ ಆಯೋಗದಿಂದ ನೋಟಿಸ್ ಪಡೆದಿದ್ದಾರೆ.

ಲಕ್ನೋ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೌಶಲ್‌ರಾಜ್ ಶರ್ಮಾ ಅವರು ಈ ನೋಟಿಸ್ ನೀಡಿದ್ದು, ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ. "ವನ್ ವೋಟ್ ವನ್ ನೋಟ್" ಘೋಷಣೆ ಮತದಾರರಿಗೆ ಆಮಿಷ ಒಡ್ಡುವಂಥದ್ದು ಎಂದು ಅಭಿಪ್ರಾಯಪಟ್ಟಿದ್ದಾರೆ. "ನೋಟಿಸ್‌ಗೆ ಉತ್ತರಿಸಲು 24 ಗಂಟೆಗಳ ಕಾಲಾವಕಾಶ ನೀಡಲಾಗಿದೆ. ಉತ್ತರ ಬಾರದಿದ್ದಲ್ಲಿ ಎಫ್‌ಐಆರ್ ದಾಖಲಿಸಲಾಗುವುದು" ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಗೃಹ ಸಚಿವ ರಾಜನಾಥ್ ಸಿಂಗ್ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿರುವ ಅಭಿನಂದನ್, ಈ ತಿಂಗಳ 26ರಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾರಾಣಾಸಿಯಲ್ಲಿ ನಾಮಪತ್ರ ಸಲ್ಲಿಸುವುದಾಗಿ ಘೋಷಿಸಿದ್ದಾರೆ. ಚುನಾವಣಾ ಗಿಮಿಕ್‌ಗಳ ವಿರುದ್ಧ ಪ್ರತಿಭಟನಾರ್ಥವಾಗಿ ತಾವು ಕಣಕ್ಕೆ ಧುಮುಕಿದ್ದು, ತಾವೂ ಗಂಭೀರ ಅಭ್ಯರ್ಥಿ ಎಂದು ಹೇಳಿಕೊಂಡಿದ್ದಾರೆ. ಪ್ರಧಾನಿ ಹುದ್ದೆಗೆ ರಾಹುಲ್‌ ಗಾಂಧಿಯವರನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ.

ಪ್ರಧಾನಿ ಮೋದಿಯಂತೆ ಉಡುಗೆ ಧರಿಸುವ ಇವರು, ಮೋದಿಯಂತೆಯೇ ಮಿತ್ರೋಂ.. ಎಂದು ಭಾಷಣ ಆರಂಭಿಸುತ್ತಾರೆ.
ಸಹರಣ್‌ ಪುರ ಮೂಲದ ಪಾಠಕ್, ಎನ್‌ಡಿಎ ಮಿತ್ರಪಕ್ಷವಾದ ಆರ್‌ಪಿಐ (ಅಠಾವಳೆ) ಪಕ್ಷದ ಉತ್ತರ ಪ್ರದೇಶ ಘಟಕದ ಉಪಾಧ್ಯಕ್ಷರಾಗಿದ್ದರು. ಕಳೆದ ತಿಂಗಳು ಕಾಂಗ್ರೆಸ್ ಪಕ್ಷ ಸೇರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News