ಆಸ್ಟ್ರೇಲಿಯಾದ ನೈಟ್ ಕ್ಲಬ್ ಬಳಿ ಗುಂಡಿನ ದಾಳಿ

Update: 2019-04-14 05:48 GMT

ಮೆಲ್ಬೋರ್ನ್,ಎ.14: ರವಿವಾರ ನಸುಕಿನಲ್ಲಿ ಇಲ್ಲಿಯ ನೈಟ್ ಕ್ಲಬ್‌ವೊಂದರ ಹೊರಗೆ ಚಲಿಸುತ್ತಿದ್ದ ಕಾರೊಂದರಿಂದ ನಡೆದ ಭೀಕರ ಗುಂಡಿನ ದಾಳಿಯಲ್ಲಿ ಓರ್ವ ಸೆಕ್ಯುರಿಟಿ ಗಾರ್ಡ್ ಮೃತಪಟ್ಟಿದ್ದು,ಇತರ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದೊಂದು ಭಯೋತ್ಪಾದಕ ದಾಳಿಯೆನ್ನಲು ಯಾವುದೇ ಸುಳಿವುಗಳು ದೊರಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಆಸ್ಟ್ರೇಲಿಯಾ ವಿಶ್ವದ ಕೆಲವು ಅತ್ಯಂತ ಕಠಿಣ ಬಂದೂಕು ನಿಯಂತ್ರಣ ಕಾನೂನುಗಳನ್ನು ಹೊಂದಿದೆ. 1996ರಲ್ಲಿ ದ್ವೀಪರಾಜ್ಯ ತಾಸ್ಮಾನಿಯಾದ ಪೋರ್ಟ್ ಆರ್ಥರ್‌ನಲ್ಲಿ ಬಂದೂಕುಧಾರಿಯೋರ್ವ 35 ಜನರನ್ನು ಬಲಿ ತೆಗೆದುಕೊಂಡಿದ್ದ ಭೀಕರ ನರಮೇಧದ ಬಳಿಕ ಆಸ್ಟ್ರೇಲಿಯಾ ಈ ಕಾನೂನುಗಳನ್ನು ಜಾರಿಗೊಳಿಸಿತ್ತು.

ಸಾಕಷ್ಟು ಮನೋರಂಜನಾ ತಾಣಗಳಿರುವ ಮೆಲ್ಬೋರ್ನ್‌ನ ಉಪನಗರ ಪ್ರಹ್ರಾನ್‌ನಲ್ಲಿ ರವಿವಾರ ನಸುಕಿನ 3:20ರ ಸುಮಾರಿಗೆ ಮಷಿನ್ ನೈಟ್‌ಕ್ಲಬ್‌ನ ಹೊರಗೆ ಈ ಗುಂಡಿನ ದಾಳಿ ನಡೆದಿದೆ. ವಾರಂತ್ಯವಾದ್ದರಿಂದ ನೈಟ್‌ಕ್ಲಬ್‌ನಲ್ಲಿ ಸಾಕಷ್ಟು ಜನರಿದ್ದರು ಎನ್ನಲಾಗಿದೆ.

ಮೂವರು ಸೆಕ್ಯುರಿಟಿ ಗಾರ್ಡ್‌ಗಳು ಮತ್ತು ಓರ್ವ ವ್ಯಕ್ತಿ ನೈಟ್‌ಕ್ಲಬ್‌ನೊಳಗೆ ಪ್ರವೇಶಿಸಲು ನಿಂತುಕೊಂಡಿದ್ದ ಸಂದರ್ಭ ಈ ದಾಳಿ ನಡೆದಿದ್ದು, ಕಾರೊಂದರಿಂದ ಗುಂಡುಗಳನ್ನು ಹಾರಿಸಿರುವಂತೆ ಕಂಡುಬಂದಿದೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಆ್ಯಂಡ್ರೂ ಸ್ಟಾಂಪರ್ ತಿಳಿಸಿದರು.

ತೀರ ಸಮೀಪದಿಂದ ಗುಂಡುಗಳನ್ನು ಹಾರಿಸಲಾಗಿದ್ದು, ಗಂಭೀರ ಗಾಯಗೊಂಡವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿತ್ತು. ಓರ್ವ ಸೆಕ್ಯುರಿಟಿ ಗಾರ್ಡ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ಇನ್ನೋರ್ವನ ಸ್ಥಿತಿ ಚಿಂತಾಜನಕವಾಗಿದೆ. ಇನ್ನಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಸ್ಥಳೀಯ ದೈನಿಕವು ವರದಿ ಮಾಡಿದೆ. ಆದರೆ ಇದು ಭಯೋತ್ಪಾದಕ ದಾಳಿಯೆನ್ನಲು ಯಾವುದೇ ಸುಳಿವುಗಳು ಈವರೆಗೆ ಲಭ್ಯವಾಗಿಲ್ಲ.

ನಸುಕಿನ ಮೂರು ಗಂಟೆಯ ಸುಮಾರಿಗೆ ಈ ಪ್ರದೇಶದಲ್ಲಿ ವೇಗವಾಗಿ ಚಲಿಸುತ್ತಿದ್ದ ಯಾವುದೇ ವಾಹನವನ್ನು ಕಂಡವರು ತಮಗೆ ಮಾಹಿತಿ ನೀಡುವಂತೆ ಪೊಲೀಸರು ಜನರನ್ನು ಕೋರಿದ್ದಾರೆ. ಈ ದಾಳಿಯ ಬಳಿಕ ಮೆಲ್ಬೋರ್ನ್‌ನ ವುಲರ್ಟ್ ಉಪನಗರದಲ್ಲಿ ಸುಟ್ಟು ಹೋದ ಸ್ಥಿತಿಯಲ್ಲಿದ್ದ ಕಪ್ಪುಬಣ್ಣದ ಪೋರ್ಷ್ ಎಸ್‌ಯುವಿ ಪತ್ತೆಯಾಗಿದೆ ಎಂದೂ ಪೊಲೀಸರು ತಿಳಿಸಿದ್ದು,ಈ ಕಾರಿಗೂ ದಾಳಿಗೂ ಸಂಬಂಧವಿದೆಯೇ ಎನ್ನುವುದನ್ನು ಕಂಡುಕೊಳ್ಳಲು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News