ಮಹಿಳೆಯರನ್ನು ಅವಮಾನಿಸಿದ ಕೇಂದ್ರ ಸಚಿವ: ತಿರುಗೇಟು ನೀಡಿದ ರಾಬ್ರಿ ದೇವಿ

Update: 2019-04-14 06:05 GMT

ಪಾಟ್ನಾ, ಎ. 14: ಕೇಂದ್ರ ಸಚಿವ ಅಶ್ವಿನಿ ಚೌಬೆ ಮಹಿಳೆಯರ ಬಗ್ಗೆ ಅವಮಾನಕರ ಹೇಳಿಕೆ ನೀಡುವ ಮೂಲಕ 15 ದಿನಗಳ ಅಂತರದಲ್ಲಿ ಮತ್ತೊಂದು ವಿವಾದದ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ.

"ರಾಬ್ರಿ ದೇವಿಯವರಿಗೆ ಏನು ಹೇಳಬೇಕು ? ಅವರು ನನ್ನ ಅತ್ತಿಗೆ. ಅವರು ಮುಸುಕಿನ ಹಿಂದೆ ಇರುವುದೇ ಒಳ್ಳೆಯದು" ಎಂದು ಚೌಬೆ ಹೇಳಿಕೆ ನೀಡಿರುವ ಬಗ್ಗೆ ಬಿಹಾರದ ಮಾಜಿ ಮುಖ್ಯಮಂತ್ರಿ ತಿರುಗೇಟು ನೀಡಿದ್ದಾರೆ.

"ಮಹಿಳೆಯರ ಬಗೆಗಿನ ನಿಮ್ಮ ಮನಸ್ಥಿತಿಯನ್ನು ನೀವೇ ಬಹಿರಂಗಪಡಿಸಿದ್ದೀರಿ. ಬಿಜೆಪಿಯ ಘೋಷಣೆ 'ಬೇಟಿ ಬಚಾವೊ, ಬೇಟಿ ಪಡಾವೊ’. ಆದರೆ ನಿಮ್ಮ ಹೇಳಿಕೆ ಮಹಿಳೆಯರನ್ನು ಅವಮಾನಿಸುವಂಥದ್ದು; ಬಿಜೆಪಿಯಲ್ಲಿರುವ ಎಲ್ಲ ನಾಯಕಿಯರನ್ನು ಮುಸುಕಿನ ಹಿಂದೆ ಮನೆಯಲ್ಲೇ ಉಳಿಯುವಂತೆ ನೀವು ಕೇಳುತ್ತೀರಾ ?" ಎಂದು ರಾಬ್ರಿ ದೇವಿ ಕುಟುಕಿದ್ದಾರೆ.

"ಇದು ಮಹಿಳೆಯರ ಸಬಲೀಕರಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನಿಮಗೆ ಮಾಡಿರುವ ಪಾಠವೇ" ಎಂದು ಪ್ರಶ್ನಿಸಿದ್ದಾರೆ.

ಜೆಡಿಯು ಅಭ್ಯರ್ಥಿಯ ಪರವಾಗಿ ಸೀತಾಮರಿ ಎಂಬಲ್ಲಿ ಪ್ರಚಾರ ಭಾಷಣ ಮಾಡುವ ವೇಳೆ ಚೌಬೆ ಈ ಹೇಳಿಕೆ ನೀಡಿದ್ದರು. ಕಳೆದ ತಿಂಗಳು ಸರ್ಕಾರಿ ಅಧಿಕಾರಿಯೊಬ್ಬರಿಗೆ ಚೌಬೆ ಧಮಕಿ ಹಾಕುತ್ತಿರುವ ವೀಡಿಯೊ ವೈರಲ್ ಆಗಿತ್ತು. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ತಮ್ಮ ವಾಹನವನ್ನು ತಡೆದದ್ದಕ್ಕಾಗಿ ಅಧಿಕಾರಿಯ ವಿರುದ್ಧ ಕಿಡಿ ಕಾರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News