ದೂರು ದಾಖಲಾಗಿದ್ದರೂ ಕ್ರಮ ಕೈಗೊಂಡಿಲ್ಲ: ಆಡಿಯೊ ಬಿಡುಗಡೆ ಮಾಡಿದ ಕಾಂಗ್ರೆಸ್ ಆರೋಪ

Update: 2019-04-14 09:15 GMT

ಬೆಂಗಳೂರು, ಎ.14: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯರ ವಿರುದ್ಧ ಕೋಲ್ಕತ್ತದ ಮೂಲದ ಮಹಿಳೆ ಡಾ. ಸೋಮದತ್ತ ಲೈಂಗಿಕ ಕಿರುಕುಳದ ಸಂಬಂಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದು, ಅದನ್ನು ತಮ್ಮ ಅಫಿದಾವಿತ್ ನಲ್ಲಿ ನಮೂದಿಸಿಲ್ಲ ಎಂದು ಕಾಂಗ್ರೆಸ್ ವಕ್ತಾರ ಬ್ರಿಜೇಶ್ ಕಾಳಪ್ಪ ಆರೋಪಿಸಿದ್ದಾರೆ.

ನಗರದ ಪ್ರೆಸ್ ಕ್ಲಬ್ ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿಗೆ ಸಿಡಿಯೊಂದು ಬಿಡುಗಡೆ ಆಗಿದ್ದು, ಅದರಲ್ಲಿ ನಾನು ಸೇರಿದಂತೆ ಮೂರು ಜನ ಮಹಿಳೆಯರ ಮೇಲೆ ತೇಜಸ್ವಿ ಸೂರ್ಯ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಡಾ. ಸೋಮದತ್ತ ಆರೋಪಿಸಿದ್ದರು. ಅಲ್ಲದೆ, ಈ ಸಂಬಂಧ ಬೆಂಗಳೂರಿನ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು ಎಂದು ಹೇಳಿದ್ದಾರೆ. ಆದರೆ, ಈ ಕುರಿತು ತೇಜಸ್ವಿ ಸೂರ್ಯ ವಿಷಯ ಬಹಿರಂಗ ಪಡಿಸಿಲ್ಲ ಎಂದು ಬ್ರಿಜೇಶ್ ಆರೋಪಿಸಿದರು.

ತೇಜಸ್ವಿ ಸೂರ್ಯರ ಲೈಂಗಿಕ ದೌರ್ಜನ್ಯದ ಕುರಿತು ಬಿಜೆಪಿ ಹೈಕಮಾಂಡ್ ಗೂ ದೂರು ನೀಡಲಾಗಿತ್ತು. ಆದರೆ, ಕ್ರಮ ಕೈಗೊಂಡಿರಲಿಲ್ಲ. ಈ ವಿಷಯ ಮೈಸೂರು ಸಂಸದ ಹಾಗು ಅಲ್ಲಿನ ಹಾಲಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಪ್ರತಾಪ ಸಿಂಹರಿಗೂ ತಿಳಿದಿತ್ತು. ಅವರು ಪ್ರಮಾಣವಚನ ಸ್ವೀಕಾರದ ಸಂದರ್ಭದಲ್ಲಿ ಈತರಹ ವಿಷಯ ಬಂದಾಗ ಯಾರೇ ಆದರೂ ಕ್ರಮ ತಗೋತೀವಿ ಎಂದು ಹೇಳ್ತಾರೆ. ನನ್ನ ವಿಷಯ ಬಂದಾಗ ಮೌನವಹಿದಿದ್ದು ಯಾಕೆಂದು ಪ್ರಶ್ನಿಸಿದ್ದಾರೆ. ಈ ಕುರಿತು ಪ್ರತಾಪ ಸಿಂಹ ಮಾತನಾಡಬೇಕು ಎಂದು ಬ್ರಿಜೇಶ್ ಒತ್ತಾಯಿಸಿದ್ದಾರೆ.

ಲೈಂಗಿಕ ಕಿರುಕುಳ ಪ್ರಕರಣ ಎದುರಾದರೆ ಯಾವ ರೀತಿ ಕ್ರಮ ಕೈಗೊಳ್ಳಬೇಕು,  ಹೇಗೆ ಸಮಿತಿ ಮಾಡಬೇಕು, ವಿಚಾರಣೆ ನಡೆಯಬೇಕು ಎಂದು ವಿಶಾಖ ಸಮಿತಿ ಪ್ರಕರಣದ ಮಾದರಿಗಳಿವೆ. ಸೋಮದತ್ತ ಅವರ ಪ್ರಕರಣದಲ್ಲಿ ಇದನ್ನು ಅನುಕರಣೆ ಮಾಡಲಾಗಿದೆಯಾ ಎಂದು ಪ್ರಶ್ನಿಸಿದರು.

ತೇಜಸ್ವಿ ಸೂರ್ಯರ ಚಿಕ್ಕಪ್ಪ ಪ್ರಭಾವಿ ಶಾಸಕರಾಗಿದ್ದು, ಖುದ್ದು ಸಂಸದರ ಪತ್ನಿಗೆ ಟಿಕೆಟ್ ಕೈ ತಪ್ಪಿಸಿ ತೇಜಸ್ವಿ ಸೂರ್ಯಗೆ ಟಿಕೆಟ್ ಸಿಗುವಂತೆ ಮಾಡಿದ್ದಾರೆ. ಅದೇ ರೀತಿ ಅವರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣವನ್ನೂ ಮುಚ್ಚಿ ಹಾಕುವ ಯತ್ನ ನಡೆದಿದೆ. ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಹಾಗು ಅದನ್ನು ಫಾಲೋ ಮಾಡುತ್ತೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್, ಮುಖಂಡರಾದ ಮಂಜುಳಾ ನಾಯ್ಡು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News