ಸಿಎಂ ಆಗಿ ಅಮಾಯಕರನ್ನು ಬಲಿ ಪಡೆದ ಮೋದಿಯಿಂದ ನೀತಿ ಪಾಠ ಕಲಿಯಬೇಕಿಲ್ಲ: ಕುಮಾರಸ್ವಾಮಿ

Update: 2019-04-14 12:40 GMT

ಬೆಂಗಳೂರು, ಎ.14: ಯಾವುದೇ ದಾಖಲೆಗಳಲಿಲ್ಲದೆ, ಸುಳ್ಳು ಆರೋಪಗಳನ್ನು ಮಾಡುವ ಪ್ರಧಾನಿ ನರೇಂದ್ರ ಮೋದಿ ಅವರ ಮಟ್ಟಕ್ಕೆ ನಾನು ಇಳಿಯುವುದಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಹೇಳಿದರು.

ರವಿವಾರ ಭಾರತ ರತ್ನ, ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 128ನೇ ಜನ್ಮದಿನಾಚರಣೆ ಅಂಗವಾಗಿ ರವಿವಾರ ವಿಧಾನಸೌಧ ಮುಂಭಾಗದ ಡಾ.ಬಿ. ಆರ್.ಅಂಬೇಡ್ಕರ್ ಅವರ ಪ್ರತಿಮಗೆ ಮಾಲಾರ್ಪಣೆ ಮಾಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಪ್ರಧಾನಿ ಮೋದಿ ಮಟ್ಟಕ್ಕೆ ನಾನು ಇಳಿದಿಲ್ಲ. ಆದಾಯ ತೆರಿಗೆ ಸೇರಿದಂತೆ ಯಾವುದೇ ತನಿಖೆಗೂ ನಾನು ಹೆದರಿಲ್ಲ. ಇನ್ನೂ, ಪ್ರಧಾನಿ ನರೇಂದ್ರ ಮೋದಿ ಹಿನ್ನಲೆಯೇ ಕಮಿಷನ್, ಪರ್ಸೆಂಟೇಜ್. ಹೀಗಾಗಿಯೇ ಅವರು, ಎಲ್ಲೆಡೆ ಪರ್ಸಂಟೇಜ್ ವಿಷಯವನ್ನೇ ಮಾತಾಡುತ್ತಾರೆ ಎಂದು ಟೀಕಿಸಿದರು.

ಐಟಿ(ಆದಾಯ ತೆರಿಗೆ ಇಲಾಖೆ) ದಾಳಿ ಬಗ್ಗೆ ನಾವು ಪ್ರತಿಭಟನೆ ಮಾಡಿದ್ದು, ಪ್ರಧಾನಿ ಮೋದಿ ಲೇವಡಿ ಮಾಡುತ್ತಾರೆ. ಐಟಿ ಇಲಾಖೆ ಸರಿಯಾಗಿ ಕೆಲಸ ಮಾಡುತ್ತಿದೆಯೇ ಎಂಬುದನ್ನು ನೋಡಬೇಕಿದೆ. ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ಹಳ್ಳಿಯೊಂದರಲ್ಲಿ ಯಾರದೋ ಮನೆಗೆ ಊಟಕ್ಕೆ ಹೋದರೆ ಮಾರನೆ ದಿನ ಐಟಿ ಅವರು ಆ ಮನೆ ಮೇಲೆ ದಾಳಿ ಮಾಡುತ್ತಾರೆ. ಇದೊಂದು ಮಾನವೀಯತೆ ಇರುವ ಕೇಂದ್ರ ಸರಕಾರವೇ ಎಂದು ಪ್ರಶ್ನಿಸಿದರು.

ನಮ್ಮದು ರಿಮೋಟ್ ಕಂಟ್ರೋಲ್ ಸರಕಾರ ಎಂದು ಮೋದಿ ಹೇಳುತ್ತಾರೆ. ಪ್ರಧಾನಿ ಯಾವ ರಿಮೋಟ್ ಕಂಟ್ರೋಲ್ ನಲ್ಲಿ ಇದ್ದಾರೆ ಎಂದು ಹೇಳಬೇಕು. ನಾನು ಯಾರ ರಿಮೋಟ್‌ನ ನಿಯಂತ್ರಣದಲ್ಲೂ ಇಲ್ಲ. ಮುಕ್ತ ಆಡಳಿತ ನೀಡುತ್ತಿದ್ದೇನೆ. ಭಯದ ವಾತಾವರಣದಲ್ಲಿ ಆಡಳಿತ ನಡೆಸುತ್ತಿಲ್ಲ ಎಂದರು.

ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

‘ಬಲಿ ಪಡೆದ ಮೋದಿಯಿಂದ ನೀತಿ ಪಾಠ ಬೇಕಿಲ್ಲ’

ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಗೋದ್ರಾ ಹತ್ಯಾಕಾಂಡಕ್ಕಾಗಿ ಪೊಲೀಸ್ ತನಿಖೆ ಎದುರಿಸಿದ್ದರು. ನಾನು ಅವರ ಮಟ್ಟಕ್ಕೆ ಇಳಿದಿಲ್ಲ. ಮುಖ್ಯಮಂತ್ರಿಯಾಗಿ ಅಮಾಯಕರನ್ನು ಬಲಿ ಪಡೆದ ಮೋದಿ ಅವರಿಂದ ನಾನು ನೀತಿ ಪಾಠ ಕಲಿಯಬೇಕಿಲ್ಲ.

-ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

‘ಬಾಕ್ಸ್ ಬಗ್ಗೆ ಉತ್ತರ ನೀಡಿ’

ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಆಗಮಿಸಿದಾಗ ದೊಡ್ಡದೊಂದು ಪೆಟ್ಟಿಗೆ(ಬಾಕ್ಸ್) ಅನ್ನು ಮೂರು ಜನ ಎಸ್‌ಪಿಜಿ ಅಧಿಕಾರಿಗಳು ತೆಗೆದುಕೊಂಡು ಹೋದರಲ್ಲ ಅದು ಏನು? ಆ ಪೆಟ್ಟಿಗೆ ತಲುಪಿಸಿದ ಕಾರು ಯಾರದು? ಎಂಬ ಪ್ರಶ್ನೆಗಳಿಗೆ ಚುನಾವಣಾ ಆಯೋಗ ಉತ್ತರ ನೀಡಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News