ಸಮ್ಮಿಶ್ರ ಸರಕಾರದ ವೈಫಲ್ಯದಿಂದ ಬಿಜೆಪಿಗೆ ದೊಡ್ಡ ಕೊಡುಗೆ: ಅರವಿಂದ ಲಿಂಬಾವಳಿ

Update: 2019-04-14 12:54 GMT

ಬೆಂಗಳೂರು, ಎ.14: ರಾಜ್ಯದಲ್ಲಿನ ಸಮ್ಮಿಶ್ರ ಸರಕಾರದ ವೈಫಲ್ಯ, ಆಂತರಿಕ ಕಿತ್ತಾಟ, ಭ್ರಷ್ಟಾಚಾರಗಳು ಈ ಬಾರಿ ಬಿಜೆಪಿಗೆ ದೊಡ್ಡ ಕೊಡುಗೆಯನ್ನೇ ನೀಡಲಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸರಕಾರ ರಚನೆಯಾದ ದಿನದಿಂದಲೂ ಗೊಂದಲ, ಗಲಾಟೆಗಳು ಮುಂದುವರಿದಿದೆ. ಇದರಿಂದ ಯಾವುದೇ ಅಭಿವೃದ್ಧಿಯಾಗುತ್ತಿಲ್ಲ. ಒಂದೆಡೆ ಪರ ಪರಿಸ್ಥಿತಿಯಿದ್ದರೆ, ಇನ್ನೊಂದು ಕಡೆ ರೈತರ ಆತ್ಮಹತ್ಯೆಗಳು ಅಧಿಕವಾಗುತ್ತಿವೆ ಎಂದರು

ಜೆಡಿಎಸ್ ಹಾಗೂ ಕಾಂಗ್ರೆಸ್‌ನ ಮೇಲ್ಮಟ್ಟದ ನಾಯಕರು ಒಗ್ಗಟ್ಟು ತೋರಿಸುತ್ತಿದ್ದರೆ, ತಳ ಮಟ್ಟದಲ್ಲಿನ ಕಾರ್ಯಕರ್ತರಲ್ಲಿ ಒಳಜಗಳ, ವೈಮನಸ್ಸು ಇನ್ನೂ ಅಧಿಕವಾಗಿದೆ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುಮಲತಾ ಪರವಾಗಿ ಕಾಂಗ್ರೆಸ್-ಜೆಡಿಎಸ್‌ನ ನಾಯಕರು ಪಾಲ್ಗೊಂಡಿರುವುದು ಇದಕ್ಕೆ ನಿದರ್ಶನವಾಗಿದೆ ಎಂದು ಹೇಳಿದರು.

ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಿಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ 22 ಕ್ಷೇತ್ರಗಳಲ್ಲಿ ಗೆಲ್ಲುತ್ತದೆ. ಕುಮಾರಸ್ವಾಮಿ ನೇತೃತ್ವದ ಮೈತ್ರಿಕೂಟ ಸರಕಾರ ಉರುಳಿ ಮಧ್ಯಂತರ ಚುನಾವಣೆ ನಡೆಯುತ್ತದೆ ದೇಶದಲ್ಲಿ ಮೋದಿ ಸರಕಾರದ ಪರವಾದ ಅಲೆಯಿದೆ. ರಾಜ್ಯದಲ್ಲಿ ಮೈತ್ರಿ ಸರಕಾರದ ವಿರೋಧಿ ಅಲೆಯಿದೆ. ಹೀಗಾಗಿ ನಿಶ್ಚಿತವಾಗಿ ಬಿಜೆಪಿಗೆ ಲಾಭವಾಗಲಿದೆ ಎಂದು ನುಡಿದರು.

ರಾಜ್ಯದಲ್ಲಿ ಸರಕಾರ ಪತನವಾಗಿ ಚುನಾವಣೆ ನಡೆಯುವ ಸನ್ನಿವೇಶ ಬರದಿದ್ದರೆ ಯಡಿಯೂರಪ್ಪನೇ ನಿಶ್ಚಿತವಾಗಿ ಈ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ಬಿಜೆಪಿಯ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಿಮ್ಮ ಹಾಗೂ ಅಶೋಕ್ ನಡುವೆ ಪೈಪೋಟಿ ನಡೆದಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅಧ್ಯಕ್ಷ ಸ್ಥಾನಕ್ಕೆ ಯಾರನ್ನು ತರಬೇಕು ಅನ್ನುವುದಕ್ಕೂ ಒಂದು ಪ್ರಕ್ರಿಯೆ ನಡೆಯಬೇಕಾಗುತ್ತದೆ. ಈಗಾಗಲೇ ಅದು ನಡೆಯಬೇಕಾಗಿತ್ತು. ಆದರೆ ಚುನಾವಣೆಯ ಕಾರಣದಿಂದ ನಡೆದಿಲ್ಲ ಎಂದು ಮಾಹಿತಿ ನೀಡಿದರು.

ಯಡಿಯೂರಪ್ಪ ನಮ್ಮ ನಾಯಕರು. ಲೋಕಸಭಾ ಚುನಾವಣೆಯ ನಂತರ ಸರಕಾರ ಪತನವಾಗಿ ಬಿಜೆಪಿ ಅಧಿಕಾರ ಹಿಡಿದರೆ ಯಡಿಯೂರಪ್ಪ ಸಿಎಂ ಆಗುತ್ತಾರೆ. ಆಗ ಅಧ್ಯಕ್ಷ ಸ್ಥಾನಕ್ಕೆ ಯಾರನ್ನು ತರಬೇಕು?ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಮತ್ತದನ್ನು ವರಿಷ್ಟರು ನೋಡಿಕೊಳ್ಳುತ್ತಾರೆ ಎಂದು ತಿಳಿಸಿದರು.

ಪಕ್ಷದಲ್ಲಿ ವಂಶಪಾರಂಪರ್ಯ ರಾಜಕಾರಣ ಬೇಡ ಎಂಬ ಮಾತು ದಿನ ಕಳೆದಂತೆ ಪ್ರಖರವಾಗುತ್ತಿದೆ. ಅಡ್ವಾಣಿಯವರಂತಹ ಹಿರಿಯ ನಾಯಕ ಚುನಾವಣೆಯಲ್ಲಿ ನಿಲ್ಲಬಾರದು ಎಂದಾದಾಗ ಅವರ ಮಗಳಿಗೆ ಟಿಕೆಟ್ ಕೊಡಲು ಪಕ್ಷ ಬಯಸಿತು. ಆದರೆ ಅಡ್ವಾಣಿಯವರು ನಿರಾಕರಿಸಿದ್ದರು ಎಂದು ಹೇಳಿದರು.

ನಮ್ಮ ಪಕ್ಷ ಕಾರ್ಯಕರ್ತರಿಂದ ಬೆಳೆದ ಪಕ್ಷ. ಇಲ್ಲಿ ವಂಶಪಾರಂಪರ್ಯ ರಾಜಕಾರಣ ಬೇಡ ಎಂಬುದು ಅವರ ಧೋರಣೆಯಾಗಿತ್ತು. ಅಂತಹ ಧೋರಣೆಯ ಫಲಶೃತಿಗಳಲ್ಲಿ ತೇಜಸ್ವಿನಿ ಅನಂತಕುಮಾರ್ ಅವರ ಪ್ರಕರಣವೂ ಒಂದು ಎಂದ ಅವರು, ಇದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News