ಕಡಿಮೆ ವೇತನದ ಉದ್ಯೋಗ ಒಪ್ಪಿಕೊಳ್ಳುವ ಅನಿವಾರ್ಯತೆಯಲ್ಲಿ ಜೆಟ್ ಏರ್‌ವೇಸ್‌ನ ಪೈಲಟ್‌ಗಳು

Update: 2019-04-14 15:35 GMT

ಹೊಸದಿಲ್ಲಿ, ಎ.14: ಜೆಟ್ ಏರ್‌ವೇಸ್ ಎದುರಿಸುತ್ತಿರುವ ಸಂದಿಗ್ಧ ಪರಿಸ್ಥಿತಿಯ ಲಾಭವನ್ನು ಪ್ರತಿಸ್ಪರ್ಧಿ ವಿಮಾನಯಾನ ಸಂಸ್ಥೆ ಸ್ಪೈಸ್‌ಜೆಟ್ ಪಡೆಯಲು ಮುಂದಾಗಿದ್ದು ಜೆಟ್‌ಏರ್‌ವೇಸ್‌ನ ಪೈಲಟ್ ಹಾಗೂ ಇಂಜಿನಿಯರ್‌ಗಳನ್ನು ಶೇ.30ರಿಂದ 50ರಷ್ಟು ಕಡಿಮೆ ವೇತನ ನೀಡಿ ನೇಮಿಸಿಕೊಳ್ಳುವ ಪ್ರಸ್ತಾವನೆ ಮುಂದಿರಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

 ಆರ್ಥಿಕ ಸಂಕಷ್ಟದಲ್ಲಿರುವ ಜೆಟ್ ಏರ್‌ವೇಸ್‌ನ ಪೈಲಟ್‌ಗಳು ಈಗ ತಾವು ಪಡೆಯುತ್ತಿರುವ ವೇತನಕ್ಕಿಂತ ಶೇ. 25ರಿಂದ 30ರಷ್ಟು ಕಡಿಮೆ ವೇತನ ಹಾಗೂ ಇಂಜಿನಿಯರ್‌ಗಳು ಈಗ ಪಡೆಯುತ್ತಿರುವ ವೇತನದ ಪ್ಯಾಕೇಜ್‌ಗಿಂತ ಶೇ.50ರಷ್ಟು ಕಡಿಮೆ ವೇತನದ ಕೊಡುಗೆಯನ್ನು ಒಪ್ಪಿಕೊಳ್ಳುವಂತೆ ಸ್ಪೈಸ್‌ಜೆಟ್ ಸಂಸ್ಥೆ ಪ್ರಸ್ತಾವನೆ ಮುಂದಿರಿಸಿದೆ. ತಾವು ಕೆಲಸ ಮಾಡುತ್ತಿರುವ ಸಂಸ್ಥೆ ಕಾರ್ಯ ಸ್ಥಗಿತಗೊಳಿಸುವ ಸಾಧ್ಯತೆಯನ್ನು ಮನಗಂಡಿರುವ ಉದ್ಯೋಗಿಗಳು ಕಡಿಮೆ ವೇತನಕ್ಕೆ ಒಪ್ಪಿಕೊಂಡಿದ್ದಾರೆ. ಆದರೆ ಜೆಟ್ ಏರ್‌ವೇಸ್‌ನಲ್ಲಿ ನೀಡುತ್ತಿದ್ದ ಸರಾಸರಿ ವೇತನ ಇತರ ಸಂಸ್ಥೆಗಳಿಗಿಂತ ಅಧಿಕವಾಗಿತ್ತು ಎಂದು ಮೂಲಗಳು ತಿಳಿಸಿವೆ.

ಏರ್‌ಇಂಡಿಯಾ ಮತ್ತು ಸ್ಪೈಸ್‌ಜೆಟ್‌ನಲ್ಲಿ ಉದ್ಯೋಗಕ್ಕೆ ಅರ್ಜಿ ಹಾಕಿರುವ ಹಿರಿಯ ವಿಮಾನ ನಿರ್ವಹಣಾ ಇಂಜಿಯರ್ ಒಬ್ಬರು, ತಾನು ಜೆಟ್‌ಏರ್‌ವೇಸ್‌ನಲ್ಲಿ ತಿಂಗಳಿಗೆ ಸುಮಾರು 4 ಲಕ್ಷ ವೇತನದ ಪ್ಯಾಕೇಜ್ ಪಡೆಯುತ್ತಿದ್ದು ಈಗ ತನಗೆ ಒಂದೂವರೆ ಲಕ್ಷದಿಂದ 2 ಲಕ್ಷದ ವೇತನ ಶ್ರೇಣಿಯ ಕೊಡುಗೆ ನೀಡಲಾಗಿದೆ ಎಂದು ಹೇಳಿದ್ದಾರೆ.

ಇದು ತುಂಬಾ ಕಡಿವೆುಯಾಯಿತು. ಆದರೆ ನಮಗೆ ಒಪ್ಪಿಕೊಳ್ಳದೆ ಬೇರೆ ದಾರಿಯಿಲ್ಲ. ಯಾರಾದರೂ ಹೂಡಿಕೆದಾರರು ಜೆಟ್ ಏರ್‌ವೇಸ್ ಸಂಸ್ಥೆಯನ್ನು ಖರೀದಿಸಿ ನಮ್ಮ ಉದ್ಯೋಗ ಮುಂದುವರಿಯುವಂತೆ ಮಾಡಲಿ ಎಂದು ಸಂಸ್ಥೆಯ ಉದ್ಯೋಗಿಗಳು ಆಶಿಸುತ್ತಿದ್ದಾರೆ ಎಂದವರು ಹೇಳಿದ್ದಾರೆ.

   ಸಾಲದ ಮರುಪಾವತಿ ಹಾಗೂ ಇತರ ಕೆಲವು ಆರ್ಥಿಕ ಬಾಧ್ಯತೆಗಳಿರುವ ಹಿರಿಯ ಉದ್ಯೋಗಿಗಳು ಸಕಾಲಿಕ ಮತ್ತು ಉತ್ತಮ ವೇತನ ದೊರೆಯುವ ವಿಮಾನಸಂಸ್ಥೆಗಳಲ್ಲಿ ಕೆಲಸ ಹುಡುಕುತ್ತಿದ್ದಾರೆ. ಕೆಲಸಕ್ಕೆ ಸೇರುವಾಗ ಹಿರಿಯ ಉದ್ಯೋಗಿಗಳು 3ರಿಂದ 5 ವರ್ಷದ ಬಾಂಡ್ ಬರೆದುಕೊಡಲು ಸಿದ್ಧರಿರುವುದಿಲ್ಲ .ಹೆಚ್ಚು ಅನುಭವ ಹೊಂದಿಲ್ಲದ ಪೈಲಟ್‌ಗಳೂ ಜೆಟ್ ಏರ್‌ವೇಸ್‌ನಲ್ಲಿ 2.9 ಲಕ್ಷ ರೂ. ಮಾಸಿಕ ವೇತನ ಪಡೆಯುತ್ತಿದ್ದರೆ ಈಗ ಇತರ ವಿಮಾನಯಾನ ಸಂಸ್ಥೆಯಲ್ಲಿ ಮಾಸಿಕ 2ಲಕ್ಷಕ್ಕೂ ಕಡಿಮೆ ವೇತನ ಪಡೆಯಲು ಒಪ್ಪುತ್ತಿದ್ದಾರೆ ಎಂದು ಜೆಟ್‌ಏರ್‌ವೇಸ್‌ನ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಜೆಟ್ ಏರ್‌ವೇಸ್‌ನ ಕಾರ್ಯನಿರ್ವಹಣೆ ಬಹುತೇಕ ಸ್ಥಗಿತಗೊಂಡಿದೆ. ಈಗ ಸಂಸ್ಥೆ ಮರಳಿ ಕಾರ್ಯಾಚರಣೆ ಆರಂಭಿಸಿದರೆ ಪೈಲಟ್‌ಗಳು ಹಾಗೂ ಇಂಜಿನಿಯರ್‌ಗಳು ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರ ದೊರಕುತ್ತದೆ. ಆಗ ಬಹುತೇಕ ಇಂಜಿನಿಯರ್‌ಗಳು ಹಾಗೂ ಪೈಲಟ್‌ಗಳು ಮತ್ತೆ ಜೆಟ್ ಏರ್‌ವೇಸ್‌ಗೆ ಮರಳಿದರೂ ಆಶ್ಚರ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಸಾಲದ ಹೊರೆ ಮತ್ತು ನಷ್ಟದ ಕಾರಣ ಜೆಟ್ ಏರ್‌ವೇಸ್ ಸಂಸ್ಥೆ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News