ಪಾಕಿಸ್ತಾನಕ್ಕೆ ನರೇಂದ್ರ ಮೋದಿಗಿಂತ ಉತ್ತಮ ಭಾರತದ ಪ್ರಧಾನಿ ಸಿಗಲಾರರು: ಅರವಿಂದ ಕೇಜ್ರಿವಾಲ್ ವ್ಯಂಗ್ಯ

Update: 2019-04-14 15:39 GMT

ಮಾರ್ಗೋವಾ, ಎ. 14: 2016ರ ಪಠಾಣ್‌ಕೋಟ್ ದಾಳಿ ಕುರಿತು ತನಿಖೆ ನಡೆಸಲು ಪಾಕಿಸ್ತಾನದ ತಂಡಕ್ಕೆ ಆಹ್ವಾನ ನೀಡಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರವನ್ನು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತರಾಟೆಗೆ ತೆಗೆದುಕೊಂಡಿದ್ದಾರೆ.

  ಮೋದಿ ಅವರು ತನ್ನನ್ನು ಬಲಿಷ್ಠ ನಾಯಕ ಹಾಗೂ ತನ್ನ ಸರಕಾರವನ್ನು ಬಲಿಷ್ಠ ಸರಕಾರ ಎಂದು ಕರೆದುಕೊಳ್ಳುತ್ತಿದ್ದಾರೆ. ಕಳೆದ 70 ವರ್ಷಗಳಲ್ಲಿ ಹಲವು ದುರ್ಬಲ ಸರಕಾರಗಳು ಅಸ್ತಿತ್ವಕ್ಕೆ ಬಂದಿವೆ. ಆದರೆ, ಮೋದಿಜಿ ಮಾಡಿದಂತೆ ಯಾರು ಕೂಡ ಮಾಡಿಲ್ಲ. ಪಠಾಣ್‌ಕೋಟ್ ವಾಯು ಪಡೆ ನೆಲೆ ಸ್ಫೋಟಿಸಿರುವುದು ಪಾಕಿಸ್ತಾನದ ಭಯೋತ್ಪಾದಕರು. ಮೋದಿ ಅವರು ಐಎಸ್‌ಐ (ಇಂಟರ್ ಸರ್ವೀಸಸ್ ಇಂಟಲಿಜೆನ್ಸ್) ಗೆ ಪತ್ರ ಬರೆದಿದ್ದರು ಹಾಗೂ ತನಿಖೆಗೆ ಕೋರಿದ್ದರು ಎಂದು ಕೇಜ್ರಿವಾಲ್ ಸಾರ್ವಜನಿಕ ರ್ಯಾಲಿಯಲ್ಲಿ ಹೇಳಿದರು.

ಪಠಾಣ್‌ಕೋಟ್ ದಾಳಿಯಲ್ಲಿ ಏಳು ಮಂದಿ ಮೃತಪಟ್ಟ ಬಳಿಕ ಪಾಕಿಸ್ತಾನ ಸೇನೆಯ ಹಾಗೂ ಐಎಸ್‌ಐ ಅಧಿಕಾರಿಗಳ ಸಹಿತ ಪಾಕಿಸ್ತಾನಿ ತನಿಖೆಗಾರರ ಐವರು ಸದಸ್ಯರ ತಂಡ ಪಠಾಣ್‌ಕೋಟ್ ವಿಮಾನ ನೆಲೆಗೆ ಭೇಟಿ ನೀಡಿದೆ ಎಂದು ಅವರು ತಿಳಿಸಿದರು.

 ಪಾಕಿಸ್ತಾನಕ್ಕೆ ನರೇಂದ್ರ ಮೋದಿಗಿಂತ ಉತ್ತಮ ಭಾರತದ ಪ್ರಧಾನಿ ಸಿಗಲಾರರು ಎಂದು ವ್ಯಂಗ್ಯವಾಡಿದ ಕೇಜ್ರಿವಾಲ್, ಎರಡನೇ ಅವಧಿಗೆ ಕೂಡ ನರೇಂದ್ರ ಮೋದಿ ಅವರೇ ಪ್ರಧಾನಿಯಾಗಬೇಕು ಎಂಬ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಇತ್ತೀಚೆಗಿನ ಹೇಳಿಕೆಯನ್ನು ಪ್ರಶ್ನಿಸಿದ್ದಾರೆ.

ಪಠಾಣ್‌ಕೋಟ್ ದಾಳಿಯ ಬಳಿಕ ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧದಂತಹ ಸನ್ನಿವೇಶ ನಿರ್ಮಾಣ ಆಗಿದೆ. ಈಗ ಇಮ್ರಾನ್ ಖಾನ್ ಹೇಳುತ್ತಿದ್ದಾರೆ, ಮೋದಿಜಿ ಅವರು ಮತ್ತೆ ಪ್ರಧಾನಿಯಾಗಬೇಕು ಎಂದು. ಇದನ್ನು ಹೇಗೆ ಅರ್ಥ ಮಾಡಿಕೊಳ್ಳುವುದು? ಮೋದಿಜಿ ಹಾಗೂ ಇಮ್ರಾನ್ ಖಾನ್ ನಡುವೆ ಏನು ನಡೆಯುತ್ತಿದೆ? ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.

2019ರ ಸಾರ್ವತ್ರಿಕ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರ ಬಿಜೆಪಿ ಜಯ ಗಳಿಸಿದರೆ, ಭಾರತದೊಂದಿಗೆ ಶಾಂತಿ ಮಾತುಕತೆಗೆ ಉತ್ತಮ ಅವಕಾಶ ಸಿಗಬಹುದು ಎಂದು ಇಮ್ರಾನ್ ಖಾನ್ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News