ಅಂಬೇಡ್ಕರ್‌ರನ್ನು ದಲಿತ ನಾಯಕನಾಗಿ ಮೀಸಲಿರಿಸುವ ಪ್ರಯತ್ನ ಸಲ್ಲ: ನ್ಯಾ.ಎಚ್.ಎನ್.ನಾಗಮೋಹನ್‌ ದಾಸ್

Update: 2019-04-14 16:30 GMT

ಬೆಂಗಳೂರು, ಎ.13: ಸಂವಿಧಾನದ ಅನುಗುಣವಾಗಿ ದೇಶವನ್ನು ಕಟ್ಟುತ್ತಿರುವ ಸಂದರ್ಭದಲ್ಲೂ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಜನ ನಾಯಕನನ್ನಾಗಿ ಗುರುತಿಸದೆ, ಬರೀ ದಲಿತ ನಾಯಕನಾಗಿ ಮೀಸಲಿರಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‌ದಾಸ್ ಕಿಡಿಕಾರಿದ್ದಾರೆ.

ರವಿವಾರ ಗಾಂಧಿ ಭವನದ ಸಭಾಂಗಣದಲ್ಲಿ ಎಂ.ಎಸ್.ಕೃಷ್ಣನ್ ಸ್ಮರಣ ಸಂಸ್ಥೆ ಹಾಗೂ ಎಐಟಿಯುಸಿ ಬೆಂಗಳೂರು ಜಿಲ್ಲಾ ಮಂಡಳಿ ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ, ಸಂವಿಧಾನ ಮತ್ತು ಕಾರ್ಮಿಕ ವರ್ಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ವಿಶ್ವದ ಜನ ಅಂಬೇಡ್ಕರ್ ಅವರ ಜನ್ಮ ದಿನವನ್ನು ವಿಶ್ವ ಜ್ಞಾನದ ದಿನವನ್ನಾಗಿ ಆಚರಿಸುತ್ತಿದ್ದಾರೆ, ಸಂವಿಧಾನದ ಅನುಗುಣವಾಗಿ ದೇಶವನ್ನು ಕಟ್ಟುವ ಅಭಿಪ್ರಾಯಗಳು ಮೂಡಿ ಬರುತ್ತಿವೆ. ಆದರೆ, ಸ್ವಹಿತಾಸಕ್ತಿವುಳ್ಳ ಜನರು ಅಂಬೇಡ್ಕರ್ ಅವರನ್ನು ಬರೀ ದಲಿತ ನಾಯಕನಾಗಿ ಮೀಸಲಿರಿಸುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಈ ದೇಶಕ್ಕೆ ಸ್ವಾತಂತ್ರ ಸಿಕ್ಕಾಗ ಶೇ.20ರಷ್ಟು ಅಕ್ಷರಸ್ಥರಿದ್ದರು. ಆದರೆ, ಈಗ ಶೇ.80ರಷ್ಟು ಅಕ್ಷರಸ್ಥರಿದ್ದಾರೆ. ಆದರೂ ಸಂವಿಧಾನದ ಬಗ್ಗೆ ಸರಕಾರಗಳೂ ಜನರಿಗೆ ತಿಳಿವಳಿಕೆ ಮೂಡಿಸಿಲ್ಲ. ಹಾಗೆಯೇ ಅಕ್ಷರಸ್ಥರೂ ಸಂವಿಧಾನವನ್ನು ಗಂಭೀರವಾಗಿ ಪರಿಗಣಿಸಿ ಅದರಲ್ಲಿರುವ ಅಂಶಗಳನ್ನು ಅರಿಯುತ್ತಿಲ್ಲ. ಇಂತಹ ಶಿಕ್ಷಣ ದೇಶದ ಹಿನ್ನಡೆಗೆ ಕಾರಣವಾಗುತ್ತದೆ ಎಂದು ಹೇಳಿದರು.

ಅಂಬೇಡ್ಕರ್ ಅವರು ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಮಂತ್ರಿ ಆಗಿದ್ದಾಗ ಮಹಿಳೆಯರಿಗೆ ಹೆರಿಗೆ ರಜೆ, ಆಸ್ತಿಯಲ್ಲಿ ಸಮಾನ ಹಕ್ಕು, ಕಾರ್ಮಿಕರ ಕಲ್ಯಾಣ ನಿಧಿ, ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ಸೇರಿ ಇನ್ನಿತರ ಹಕ್ಕುಗಳು ಮಹಿಳೆರಿಗೆ ಸಿಗಲು ಶ್ರಮಿಸಿದರು. ಅಲ್ಲದೆ, ಮಹಿಳಾ ಮೀಸಲಾತಿ ಬಿಲ್ ಅನ್ನು ಜಾರಿಗೆ ತರಲು ಅಂಬೇಡ್ಕರ್ ಅವರು ಪ್ರಯತ್ನಿಸಿದಾದರೂ ಆ ಬಿಲ್ ಪಾಸಾಗಲಿಲ್ಲ. ಆದರೆ, ಈಗಿನ ರಾಷ್ಟ್ರೀಯ ಪಕ್ಷಗಳು ತಾವು ಅಧಿಕಾರಕ್ಕೆ ಬಂದರೆ ಆ ಮಹಿಳಾ ಮೀಸಲಾತಿ ಬಿಲ್‌ನ್ನು ಜಾರಿಗೆ ತರುತ್ತೇವೆ ಎಂದು ಆಶ್ವಾಸನೆಗಳನ್ನು ನೀಡುತ್ತವೆ. ಆದರೆ, ಅಧಿಕಾರದ ಚುಕ್ಕಾಣಿಯನ್ನು ಹಿಡಿದ ಮೇಲೆ ಮಹಿಳಾ ಮೀಸಲಾತಿ ಬಿಲ್‌ ಪಾಸ್ ಮಾಡಲು ಹಿಂದೇಟು ಹಾಕುತ್ತವೆ ಎಂದು ಹೇಳಿದರು.

ಹೊಸತು ಪತ್ರಿಕೆ ಸಂಪಾದಕ ಸಿದ್ದನಗೌಡ ಪಾಟೀಲ್ ಮಾತನಾಡಿ, ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಒಪ್ಪದ ಸಂಘ ಪರಿವಾರಗಳು ಅಂಬೇಡ್ಕರ್ ಅವರನ್ನು ಗೌರವಿಸುವ ನೆಪದಲ್ಲಿ ಅಹಿಂದ ವರ್ಗದವರ ಮತಗಳನ್ನು ಪಡೆಯಲು ಯತ್ನಿಸುತ್ತಿದ್ದಾರೆ. ಅಂಬೇಡ್ಕರ್ ಅವರ ಶ್ರಮದಿಂದ ರಚಿತವಾದ ಸಂವಿಧಾನವನ್ನು ಅಂಬೇಡ್ಕರ್ ಒಬ್ಬರೆ ಸಂವಿಧಾನವನ್ನು ರಚಿಸಿಲ್ಲ, ಅವರೊಂದಿಗೆ ಹಲವಾರು ಜನರು ಶ್ರಮಿಸಿದ್ದಾರೆ ಎಂಬ ಕುಹಕದ ಮಾತುಗಳನ್ನಾಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎಸ್ಸಿ-ಎಸ್ಟಿ ಮೀಸಲು ಕ್ಷೇತ್ರದ ಜೊತೆಗೆ ಯಾವುದಾದರೊಂದು ಹೆಸರು ಮಾಡಿರುವ ಪಕ್ಷದ ಬೆಂಬಲವಿದ್ದರೆ ಎಸ್ಸಿ-ಎಸ್ಟಿಗಳು ಲೋಕಸಭೆ ಹಾಗೂ ವಿಧಾನಸಭೆಗೆ ಚುನಾಯಿತ ಪ್ರತಿನಿಧಿಗಳಾಗಿ ಹೋಗಿರುವ ಉದಾಹರಣೆಗಳಿವೆ. ಅದೇ ದಲಿತ ಚಳವಳಿ ಹಿನ್ನೆಲೆಯಿಂದ ಬಂದ ಯಾವೊಬ್ಬ ವ್ಯಕ್ತಿಯೂ ಜನಪ್ರತಿನಿಧಿಗಳಾಗಿ ಲೋಕಸಭೆ, ವಿಧಾನಸಭೆಗಳಿಗೆ ಹೋಗಿರುವ ಉದಾಹರಣೆಗಳೆ ಇಲ್ಲ. ಇಂತಹ ವಾತಾವರಣ ಬದಲಾಗಬೇಕಾದರೆ ಆರ್ಥಿಕ ಶಕ್ತಿ ಕೇಂದ್ರಿಕರಣವಾಗದೆ, ವಿಕೇಂದ್ರಿಕರಣವಾಗಬೇಕು ಎಂದು ಹೇಳಿದರು.

ಕಾರ್ಮಿಕ ಮುಖಂಡರಾದ ಎಂ.ಡಿ.ಹರಿಗೋವಿಂದ್, ಶ್ರೀಮುರಳಿಧರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News