ಅಂಬೇಡ್ಕರ್ ಎಲ್ಲ ಕಾಲಕ್ಕೂ ಅರ್ಥವಾಗುವ ವ್ಯಕ್ತಿ: ಡಾ.ನಟರಾಜ್‌ ಹುಳಿಯಾರ್

Update: 2019-04-14 16:33 GMT

ಬೆಂಗಳೂರು, ಎ. 14: ಡಾ.ಬಿ.ಆರ್.ಅಂಬೇಡ್ಕರವರೂ ಎಂದೆಂದಿಗೂ ಎಲ್ಲರಿಗೂ, ಎಲ್ಲ ಕಾಲಕ್ಕೂ ಅರ್ಥವಾಗುವಂತಹ ಅಪರೂಪದ ವ್ಯಕ್ತಿ. ಆದುದರಿಂದ ವಿದ್ಯಾರ್ಥಿಗಳು ಅಂಬೇಡ್ಕರ್‌ರವರ ಬದುಕು ಮತ್ತು ಬರಹಗಳನ್ನು ಅಧ್ಯಯನ ಮಾಡಿ ಅವರ ಉನ್ನತ ಆದರ್ಶ-ಚಿಂತನೆಗಳನ್ನು ರೂಢಿಸಿಕೊಳ್ಳಬೇಕು ಎಂದು ಬೆಂ.ವಿವಿ ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ನಟರಾಜ್ ಹುಳಿಯಾರ್ ಕರೆ ನೀಡಿದ್ದಾರೆ.

ರವಿವಾರ ಇಲ್ಲಿನ ಜಾಲಹಳ್ಳಿಯ ಸೈಂಟ್ ಕ್ಲಾರೆಟ್ ಕಾಲೇಜಿನ ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದಿಂದ ಅಂಬೇಡ್ಕರ್‌ರವರ 128ನೆ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ತತ್ವಗಳನ್ನು ರೂಢಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಉತ್ತಮ ಸಮಾಜ ನಿರ್ಮಾಣಕ್ಕೆ ಕಂಕಣ ಬದ್ಧರಾಗಬೇಕು ಎಂದರು.

ಇಡೀ ಜಗತ್ತಿನಲ್ಲೇ ಮಹಾತ್ಮರೆನಿಸಿಕೊಂಡ ಏಕೈಕ ವ್ಯಕ್ತಿ ಅಂಬೇಡ್ಕರ್. ಇವರು ದೀನ ದಲಿತರ ಉದ್ದಾರಕರೂ ಮಾತ್ರವಲ್ಲದೆ, ನೊಂದವರಿಗೆ, ಮಹಿಳೆಯರಿಗೆ, ಅಸಹಾಯಕರಿಗೆ ಹಾಗೂ ಎಲ್ಲ ಜನಾಂಗಗಳಿಗೂ ಆಶಾದೀಪ. ಮನುಕುಲದ ಉದ್ದಾರಕ್ಕೆ ಹುಟ್ಟಿ ಬಂದಂತಹ ಸೂರ್ಯನೆನಿಸಿದ್ದಾರೆಂದು ಹುಳಿಯಾರ್ ಸ್ಮರಿಸಿದರು.

ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನವೂ ಇಡೀ ಜಗತ್ತಿನ ಎಲ್ಲ ಸಂವಿಧಾನಗಳಿಗಿಂತ ವಿಶೇಷವಾದ ಸಂವಿಧಾನವನ್ನು ನೀಡಿರುತ್ತಾರೆ. ಆದರೆ ಇವತ್ತಿನ ರಾಜಕಾರಣದ ಸಂದರ್ಭದಲ್ಲಿ ಅಂಬೇಡ್ಕರವರನ್ನು ಕೇವಲ ಒಂದೇ ಜಾತಿ-ಕೋಮಿಗೆ ಸೀಮಿತಗೊಳಿಸುತ್ತಿರುವುದು ನಿಜಕ್ಕೂ ನೋವುಂಟಾಗುವ ಸಂಗತಿ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ರೆ.ಡಾ. ಸಾಬುಜಾರ್ಜ್ ವಹಿಸಿದರು. ಎನ್.ಸುರೇಶ್, ಅಂಬೇಡ್ಕರ್ ಅಧ್ಯಯನ ಕೇಂದ್ರದ ಮಾದೇಶ್ ಸೇರಿದಂತೆ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News