ಕಾಲಕ್ಕೆ ತಕ್ಕಂತೆ ಮಹಾಕಾವ್ಯದ ಮರು ವಾಖ್ಯಾನವಾಗಬೇಕು: ನಾಗತಿಹಳ್ಳಿ ಚಂದ್ರಶೇಖರ್

Update: 2019-04-14 17:25 GMT

ಬೆಂಗಳೂರು, ಎ.14: ಯಾರಾದರೂ ಒಪ್ಪಲಿ ಬಿಡಲಿ. ಈಗಿನ ಮನಸ್ಸುಗಳು ಮಹಾಕಾವ್ಯಗಳನ್ನು ನಮ್ಮ ಕಾಲಕ್ಕೆ ತಕ್ಕಂತೆ ಮರು ವಾಖ್ಯಾನಿಸುವ ಅವಶ್ಯಕತೆ ಇದೆ ಎಂದು ಲೇಖಕ ಮತ್ತು ಸಿನಿಮಾ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅಭಿಪ್ರಾಯಪಟ್ಟರು.

ರವಿವಾರ ನಗರದ ವಾಡಿಯಾ ಸಭಾಂಗಣದಲ್ಲಿ ಸಾವಣ್ಣ ಪ್ರಕಾಶನ ಹಮ್ಮಿಕೊಳ್ಳಲಾದ ಪುಸ್ತಕ ವಸಂತೋತ್ಸವದಲ್ಲಿ ಜೋಗಿ - ನೀವು ದೇವರನ್ನು ನಂಬ ಬೇಡಿ, ಜಗದೀಶ್ ಶರ್ಮಾ -ಮಹಾಭಾರತ ಹೇಳಿಯೂ ಹೇಳದ್ದು, ಗೋಪಾಲಕೃಷ್ಣ ಕುಂಟನಿ- ಪೂರ್ಣ ತೆರೆಯದ ಪುಟಗಳು, ಅಹೋರಾತ್ರ - ತೃಣಮಾತ್ರ, ಗಂಗಾವತಿ ಪ್ರಾಣೇಶ್ - ನಕ್ಕರೆ ಅಕ್ಕರೆ ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಯುವಕರು ಮಹಾಕಾವ್ಯದೊಂದಿಗೆ ಸಂವಾದ ಮಾಡುವುದನ್ನು ಕಾಣುತ್ತಿದ್ದು, ಇದು ಮುಂದುವರೆಯಬೇಕು ಎಂದು ಹೇಳಿದರು.

ಜೋಗಿ ಅವರ ‘ನೀವು ದೇವರನ್ನು ನಂಬಬೇಡಿ’ ಪುಸ್ತಕ ಓದುವಾಗ, ದೇವರ ಬಗ್ಗೆ ನಾನು ಹೊಂದಿದ್ದ ಅನೇಕ ಕೌತುಕಗಳನ್ನು ಮೆಲುಕು ಹಾಕಿದೆ. ಕೆಲಸದ ಒತ್ತಡದಲ್ಲಿ ನನ್ನಿಂದ ಆ ಅನುಭವಗಳನ್ನು ಬರೆಯುವುದಕ್ಕೆ ಸಾಧ್ಯವಾಗಿಲ್ಲ. ಆದರೆ, ಜೋಗಿ ಆ ಕೆಲಸ ಮಾಡಿದ್ದಾರೆ. ದೇವರ ಬಗ್ಗೆ ಚರ್ಚೆ ಹೇಗೆ ಆರಂಭಿಸಬೇಕು. ಹೇಗೆ ಮುಗಿಸಬೇಕೆಂಬುದು ಗೊತ್ತಾಗುವುದಿಲ್ಲ. ಕೆಲ ಆಸ್ತಿಕರು ಜೀವನದ ಒಂದು ಕಾಲಘಟ್ಟದಲ್ಲಿ ನಾಸ್ತಿಕರಾಗಿ ಬದಲಾಗಿದ್ದಾರೆ. ಇನ್ನು ಅನೇಕರು ನಾಸ್ತಕರಾಗಿದ್ದವರು ಕೊನೆಗೆ ಆಸ್ತಿಕರಾಗಿದ್ದನ್ನು ನಾನು ಕಂಡಿದ್ದೇನೆ ಎಂದರು.

ಲೇಖಕ ಜಗದೀಶ್ ಶರ್ಮ ಅವರ ‘ಮಹಾಭಾರತ ಹೇಳಿಯೂ ಹೇಳದ್ದು’ ಕೃತಿಯಲ್ಲಿ 15 ಕಥೆಗಳಿವೆ. ಅದರಲ್ಲಿ ಒಳ್ಳೆಯವರಿಗೆ ನರಕ ಯಾಕೆ ಪ್ರಾಪ್ತಿ ಆಗುತ್ತದೆ ಎಂಬ ಪ್ರಶ್ನೆ ಪ್ರಸ್ತುತ ಕಾಲಘಟ್ಟಗೆ ಅವಶ್ಯಕವಾಗಿದೆ. ಕೃತಿಯಲ್ಲಿರುವ 15 ಕಥೆಗಳು ಮಹಭಾರತದ ಕಥೆಗಳನ್ನು ಹೊಸದಾಗಿ ನೋಡುವ ಮತ್ತು ಅರ್ಥೈಸುವ ಬಗೆಯಾಗಿದೆ. ಇದು ಕನ್ನಡ ಸಾಹಿತ್ಯಕ್ಕೆ ಹೊಸ ಪ್ರಯೋಗವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ನಟ ರಮೇಶ್ ಅರವಿಂದ್ ಮಾತನಾಡಿ, ಚುರುಕು ಮುಟ್ಟಿಸಿದ ಅಪ್ಪ, ಸಂತೈಸಿದ ಅಮ್ಮ, ಮೊದಲ ಅವಮಾನ-ಸನ್ಮಾನ, ಮೊದಲು ಹರಿದು ಹಾಕಿದ ಪ್ರೇಮ ಪತ್ರ, ಮೊದಲು ಸ್ಪೂರ್ತಿಯಾದ ಘಟನೆ ಹೀಗೆ ತಮ್ಮ ಬಾಲ್ಯ, ಯೌವ್ವನ ಸೇರಿದಂತೆ ಜೀವನದ ರಸವತ್ತಾದ ಹಾಗೂ ಕಹಿಯಾದ ಎಲ್ಲ ಘಟನೆಗಳ ಮೂಟೆಯನ್ನು ಹೊತ್ತುಕೊಂಡ ಈ ಲೇಖಕರ ಮನದಲ್ಲಿ ಕಲ್ಪನಾ ಲೋಕದ ಮಾಯಪೆಟ್ಟಿಗೆ ಇದೆ. ಬದುಕಿನ ಮೂಟೆಯೊಳಗಿನ ಹಿಡಿಯಷ್ಟು ಅನುಭವಕ್ಕೆ ಕಲ್ಪನಾ ಲೋಕದ ಮಾಯಪೆಟ್ಟಿಗೆಯೊಳಗೆ ಅವಿತ ಅಕ್ಷರಗಳನ್ನು ತಮ್ಮದೆ ಶೈಲಿಯಲ್ಲಿ ನಿರೂಪಿಸುವ ಬಗೆಯೇ ಸಾಹಿತ್ಯ. ಒಬ್ಬ ನಿರ್ದೇಶಕ ಹಾಗೂ ಸಾಹಿತ್ಯ ವಿಶಿಷ್ಟವಾಗಿ ಜೀವನಾನುಭವನ್ನು ಕಟ್ಟಿಕೊಟ್ಟರೆ ಯಶಸ್ಸು ಅರಸಿ ಬರಲಿದೆ ಎಂದರು.

ಒಂದು ಪುಸ್ತಕ ಒಂದು ಅನುಭವ. ಕೃತಿ ಓದುಗರ ಮನ ತಲುಪಿದಾಗ ಆ ಅನುಭಾವದ ವೃತ್ತ ಪೂರ್ಣಗೊಳ್ಳಲಿದೆ. ಒಂದೊಂದು ಪುಸ್ತಕವೂ ಓದುಗನಿಗೆ ಪ್ರತಿ ಕಾಲಘಟ್ಟದಲ್ಲಿಯೂ ವಿಭಿನ್ನವಾದ ಅನುಭವ ನೀಡುವುದರೊಂದಿಗೆ ಆ ಸಂದರ್ಭದ ಸತ್ಯವನ್ನು ಎತ್ತಿ ತೋರುತ್ತಿರುತ್ತದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News