ಮಂಕುತಿಮ್ಮನ ಕಗ್ಗಗೆ ಜ್ಞಾನಪೀಠ ಪ್ರಶಸ್ತಿ ಲಭಿಸಬೇಕಿತ್ತು: ಡಾ.ಎ.ವಿ.ಪ್ರಸನ್ನ

Update: 2019-04-14 17:27 GMT

ಬೆಂಗಳೂರು, ಎ.14: ಸಾಹಿತಿ ಡಿ.ವಿ.ಗುಂಡಪ್ಪನವರ ಮಂಕುತಿಮ್ಮನ ಕಗ್ಗ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಬೇಕಿತ್ತು. ಅದಕ್ಕಾಗಿ ಅವರಲ್ಲಿ ಎಲ್ಲ ಅರ್ಹತೆಯೂ ಇತ್ತು ಎಂದು ವ್ಯಾಖ್ಯಾನಕಾರ ಡಾ.ಎ.ವಿ.ಪ್ರಸನ್ನ ಹೇಳಿದರು.

ರವಿವಾರ ರಾಜಾಜಿನಗರದ ಎಂಇಎಸ್ ಶಿಕ್ಷಕರ ಕಾಲೇಜಿನಲಿ ಜ್ಞಾನದೀಪಿಕಾ ಶೈಕ್ಷಣಿಕ ದತ್ತಿ ಸಂಸ್ಥೆ, ಡಿ.ವಿ.ಜಿ. ಅಭಿಮಾನಿ ಬಳಗದ ಸಹಯೋಗದಲ್ಲಿ ಏರ್ಪಡಿಸಿದ್ದ ಪದ್ಮಭೂಷಣ ಡಾ.ಡಿ.ವಿ.ಗುಂಡಪ್ಪನವರ ಕೃತಿಗಳ ಆಧಾರಿತ ಲೇಖಕರಾದ ಎನ್.ಸತ್ಯಪ್ರಕಾಶ್‌ರವರ ‘ಕಗ್ಗಗಳಲ್ಲಿ ಸಾಮಾಜಿಕ ಪ್ರಜ್ಞೆ’ ಹಾಗೂ ಸತ್ಯೇಶ್ ಎನ್.ಬೆಳ್ಳೂರು ಅವರ ‘ಕಗ್ಗಗಳಲ್ಲಿ ವೈಚಾರಿಕ ಚಿಂತನೆ’ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಡಿ.ವಿ.ಗುಂಡಪ್ಪನವರಿಗೆ ಜ್ಞಾನಪೀಠ ಪ್ರಶಸ್ತಿ ಬರಬೇಕಿತ್ತು. ಆದರೆ, ಆಯ್ಕೆ ಸಮಿತಿಯ ಸದಸ್ಯರಿಗೆ ಈ ಕೃತಿಯ ಯೋಗ್ಯತೆ ಗುರುತಿಸಲು ಸಾಧ್ಯವಾಗದ ಹಿನ್ನೆಲೆ ದೊರೆಯಲಿಲ್ಲ. ಆಯ್ಕೆ ಸಮಿತಿಯು ಶಿಫಾರಸು ಮಾಡಿದ್ದ ಪಟ್ಟಿಯಲ್ಲಿ ಡಿವಿಜಿ ಅವರ ಹೆಸರು ಮೊದಲಿತ್ತು. ಪ್ರಶಸ್ತಿ ಲಭಿಸಿದ್ದರೆ ಡಿವಿಜಿ ಅವರು ಜ್ಞಾನಪೀಠ ಪಡೆದ ಮೊದಲ ಕನ್ನಡಿಗರಾಗುತ್ತಿದ್ದರು. ಅಂದು ಜ್ಞಾನಪೀಠ ಪ್ರಶಸ್ತಿ ಕೈತಪ್ಪಿದ ಬಗ್ಗೆ ಪತ್ರಿಕೆಗಳಲ್ಲಿ ವ್ಯಕ್ತವಾದ ಅಭಿಪ್ರಾಯಕ್ಕೆ ಹಾಸ್ಯಜೀವಿ ಡಿವಿಜಿಯವರು ಪ್ರಶಸ್ತಿ ಬರಲಿಲ್ಲ, ಸೋ ವಾಟ್? ಬಂದಿದ್ದರೆ ಸೋ ವಾಟ್?! ಎಂದಿದ್ದರು ಎಂದು ನಕ್ಕರು.

ಡಿವಿಜಿ ಗಂಭೀರ ಚಿಂತಕರಾಗಿದ್ದರು. ಮಂಕುತಿಮ್ಮನ ಕಗ್ಗದಲ್ಲಿ ಸೃಷ್ಟಿಯಿಂದ ಹಿಡಿದು ಮನುಷ್ಯನ ಬದುಕಿನ ಸಮಗ್ರ ಚಿತ್ರಣ ಅದರಲ್ಲಿ ಅಡಕವಾಗಿದೆ. ಸಾಮಾಜಿಕ, ಆಧ್ಯಾತ್ಮಿಕ, ರಾಜಕೀಯ, ನಿಸರ್ಗ, ದೇವರು, ಧರ್ಮ, ಆರ್ಥಿಕ, ಸಾಹಿತ್ಯ ಹೀಗೆ ಬಹುಮುಖ ಮಜಲುಗಳಿಂದ ಮಂಕುತಿಮ್ಮನ ಕಗ್ಗ ಸಮೃದ್ಧವಾಗಿದ್ದು, ಇಂದಿಗೂ ಅತ್ಯಂತ ಪ್ರಸ್ತುತ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News