ಬೆಂಗಳೂರು ಉತ್ತರದಲ್ಲಿ ಪಕ್ಷೇತರ ಅಭ್ಯರ್ಥಿಗಳಿಂದ ಪ್ರಶ್ನೆಗಳ ಸುರಿಮಳೆ..!

Update: 2019-04-14 17:55 GMT

ಬೆಂಗಳೂರು, ಎ.14: ಮುಕ್ತ, ನಿಷ್ಪಕ್ಷಪಾತ ಹಾಗೂ ನ್ಯಾಯಯುತ ಚುನಾವಣೆಗೆ ಎಲ್ಲರ ಸಹಕಾರ ಮುಖ್ಯ ಎಂದು ನಗರದ ಮಾದರಿ ನೀತಿ ಸಂಹಿತೆ ಜಾರಿಗೆ ನಿಯೋಜಿತರಾಗಿರುವ ವಿಶೇಷಾಧಿಕಾರಿ ಮೌನಿಶ್ ಮುದ್ಗಿಲ್ ಮನವಿ ಮಾಡಿದ್ದಾರೆ.

ರವಿವಾರ ಬೆಂಗಳೂರು ಉತ್ತರ ಲೋಕ ಸಭಾ ಕ್ಷೇತ್ರದ ಚುನಾವಣಾ ನಿರ್ವಚನಾಧಿಕಾರಿಗಳೂ ಆಗಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ಬಿ.ಎಂ.ವಿಜಯ್ ಶಂಕರ್ ಹಾಗೂ ಮೌನಿಶ್ ಮುದ್ಗಿಲ್‌ರವರ ಸಮ್ಮುಖದಲ್ಲಿ ಮುಕ್ತ ಹಾಗೂ ನ್ಯಾಯಯುತ ಚುನಾವಣೆಗೆ ಪೂರಕವಾಗುವಂತಹ ಅತ್ಯುತ್ತಮ ಸಲಹೆಗಳೂ ಹರಿದು ಬಂದವು.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ರವಿವಾರ ಆಯೋಜಿಸಿದ್ದ ಚುನಾವಣಾ ಸ್ಪರ್ಧಾ ಕಣದಲ್ಲಿರುವ ಅಭ್ಯರ್ಥಿಗಳು ಹಾಗೂ ಅಭ್ಯರ್ಥಿಗಳ ಪ್ರತಿನಿಧಿಗಳ ಸಭೆಯಲ್ಲಿ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ಭಾಗವಹಿಸದೆ ಪಕ್ಷೇತರ ಅಭ್ಯರ್ಥಿಗಳು ಪಾಲ್ಗೊಂಡಿದ್ದು ಒಂದು ವಿಶೇಷವಾದರೆ, ಪಕ್ಷೇತರ ಅಭ್ಯರ್ಥಿಗಳಿಂದ ಪ್ರಶ್ನೆಗಳ ಸುರಿಮಳೆ ಮತ್ತೊಂದು ವಿಶೇಷವಾಗಿತ್ತು.

ಧಾರ್ಮಿಕ ಮುಖಂಡರ ಫರ್ಮಾನು: ಇಂತಹವರಿಗೆ ಮತ ಹಾಕಬಾರದು ಇಂತಹವರಿಗೆ ಮತ ಹಾಕಬೇಕು ಎಂದು ಕೆಲವು ಧಾರ್ಮಿಕ ಮುಖಂಡರು ತಮ್ಮ ಸಮುದಾಯದ ಮತದಾರರಿಗೆ ಫರ್ಮಾನು ಹೊರಡಿಸುತ್ತಿದ್ದಾರೆ. ಮತ್ತೊಬ್ಬರ ಹಕ್ಕು ಕಸಿದು ಕೊಳ್ಳುವ ಇಂತಹ ಧಾರ್ಮಿಕ ಮುಖಂಡರಿಗೆ ಮುಗ್ಧ ಮತದಾರರ ಸ್ವತಂತ್ರ ಹರಣ ಮಾಡಲು ಅಧಿಕಾರ ಕೊಟ್ಟವರು ಯಾರು ? ಎಂದು ಓರ್ವ ಅಭ್ಯರ್ಥಿ ಪ್ರಶ್ನಿಸಿದರು.

ಚುನಾವಣಾ ಅಕ್ರಮಗಳೇನಾದರೂ ಕಂಡು ಬಂದಲ್ಲಿ ಶುಲ್ಕ-ರಹಿತ ದೂ.ಸಂ: 1950 ಅಥವಾ ಬೆಂಗಳೂರು ಉತ್ತರ ಲೋಕ ಸಭಾ ಕ್ಷೇತ್ರದ ಸ.ಸಂ: 080- 224 0515 ಅಥವಾ ತಮ್ಮ ಸಂಚಾರಿ ಮೊ.ಸಂ: 94481 94915 ಅನ್ನು ಸಂಪರ್ಕಿಸಿ ಮಾಹಿತಿ ನೀಡಿ ಎಂದು ಅಭ್ಯರ್ಥಿಗಳಲ್ಲಿ ಅವರು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News