ದೇಶದಲ್ಲಾಗುತ್ತಿರುವ ಅನ್ಯಾಯಗಳ ಕುರಿತು ಜನತೆಗೆ ತಿಳಿಸುವಲ್ಲಿ ಮಾಧ್ಯಮಗಳು ವಿಫಲ: ಸಿರಾಜ್ ಅಹ್ಮದ್

Update: 2019-04-14 18:03 GMT

ಬೆಂಗಳೂರು, ಎ.14: ದೇಶದಲ್ಲಾಗುತ್ತಿರುವ ಅನ್ಯಾಯಗಳು ಹಾಗೂ ಅದಕ್ಕೆ ಕಾರಣವಾಗಿರುವ ವ್ಯಕ್ತಿಗಳು, ಸಂಸ್ಥೆಗಳು ಹಾಗೂ ಕೋಮುವಾದಿ ಪಕ್ಷದ ಕುರಿತು ಜನತೆಗೆ ತಿಳಿಸುವಲ್ಲಿ ಮಾಧ್ಯಮಗಳು ವಿಫಲವಾಗಿವೆ ಎಂದು ಪ್ರಾಧ್ಯಾಪಕ ಸಿರಾಜ್ ಅಹ್ಮದ್ ವಿಷಾದ ವ್ಯಕ್ತಪಡಿಸಿದ್ದಾರೆ.

ರವಿವಾರ ನಗರದ ಸ್ಫೂರ್ತಿಧಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯ ಅಂಗವಾಗಿ ಆಯೋಜಿಸಿದ್ದ ‘ಅಂಬೇಡ್ಕರ್ ಹಬ್ಬ’ ವರ್ತಮಾನದ ರಾಜಕಾರಣ ಕುರಿತ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಮಕಾಲಿನ ಸಮಾಜದ ನೈತಿಕ ಅಧಃಪತನಕ್ಕೆ ಮಾಧ್ಯಮಗಳು ದೊಡ್ಡ ಕೊಡುಗೆ ಕೊಟ್ಟಿವೆ. ಅದರಲ್ಲೂ ನವ ಮಾಧ್ಯಮಗಳ ಬಂದ ನಂತರ ಮಾಧ್ಯಮದ ಮೂಲ ಲಕ್ಷಣವೆ ನಿರ್ಮೂಲನೆಗೊಂಡಿದೆ ಎಂದು ಟೀಕಿಸಿದರು.

ಇವತ್ತಿನ ನವ ಮಾಧ್ಯಮಗಳಾದ ಟಿವಿ, ಸಾಮಾಜಿಕ ಜಾಲತಾಣಗಳಲ್ಲಿ ಗರಿಷ್ಠ ಮೊತತದ ನೋಟು ಅಮಾನ್ಯೀಕರಣದಿಂದ ಆಗಿರುವ ಸಮಸ್ಯೆಗಳ ಕುರಿತು ಚರ್ಚಿಸುವುದಿಲ್ಲ. ಬದಲಿಗೆ, ಸ್ಮೃತಿ ಇರಾನಿಯ ಶಿಕ್ಷಣದ ಬಗ್ಗೆ ಚರ್ಚೆ ಮಾಡುತ್ತವೆ. ಹೀಗೆ ಜನರ ಸಾಮಾನ್ಯ ಆಲೋಚನೆಗಳನ್ನು ದಿಕ್ಕು ತಪ್ಪಿಸುವಂತಹ ಹುನ್ನಾರ ನಡೆಯುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ದೇಶದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿಯೆ ಪತ್ರಿಕೆ ಹಾಗೂ ಪತ್ರಗಳ ಮೂಲಕ ಗಾಂಧಿ, ಅಂಬೇಡ್ಕರ್ ಹಾಗೂ ಠಾಗೂರ್‌ರವರ ನಡುವೆ ನಡೆದ ಮಾತುಕತೆಗಳು ಜಗತ್ತಿನಯೆ ಶ್ರೇಷ್ಟವಾದ ಸಂವಾದವೆಂದು ಗುರುತಿಸಿಕೊಂಡಿದೆ. ಆದರೆ, ಇವತ್ತಿನ ನವ ಮಾಧ್ಯಮಗಳಲ್ಲಿ ಇಂತಹ ಜನಪರ, ದೇಶಪರವಾದ ಚರ್ಚೆಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲವೆಂದು ಅವರು ಬೇಸರ ವ್ಯಕ್ತಪಡಿಸಿದರು.

ಜನಶಕ್ತಿ ಸಂಘಟನೆಯ ಕಾರ್ಯಕರ್ತೆ ಮಲ್ಲಿಗೆ ಸಿರಿಮನೆ ಮಾತನಾಡಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮಾನವ ಹಕ್ಕುಗಳ ಪರಿಭಾಷೆಗೆ ನಿಜವಾದ ಅರ್ಥ ಹಾಗೂ ಕಾನೂನು ಜಾರಿ ಮಾಡಿ ಹೋಗಿದ್ದಾರೆ. ಇವರ ಆಶಯದಿಂದಾಗಿ ಅನೇಕ ಜನಪರ ಸಂಘಟನೆಗಳು ಮಾನವ ಹಕ್ಕುಗಳ ರಕ್ಷಣೆಯಲ್ಲಿ ತೊಡಗಲು ಸಾಧ್ಯವಾಗಿದೆ ಎಂದರು.

ದೇಶದಲ್ಲಿ ಅನೇಕ ಮಾನವ ಹಕ್ಕು ಹೋರಾಟಗಾರರು ಕಾರ್ಯನಿರ್ವಹಿಸುತ್ತಿದ್ದರೂ 2015ರಿಂದ ಇಲ್ಲಿಯವರೆಗೆ ದಲಿತರ, ಅಲ್ಪಸಂಖ್ಯಾತರ ಹಾಗೂ ಆದಿವಾಸಿ ಸಮುದಾಯದ 117 ವ್ಯಕ್ತಿಗಳ ಮೇಲೆ ಕೋಮುವಾದಿಗಳು ಸಾಮೂಹಿಕವಾಗಿ ಹಲ್ಲೆ ನಡೆಸಿದ್ದಾರೆ. ಇದರಲ್ಲಿ 88 ವ್ಯಕ್ತಿಗಳು ಸಾವನ್ನಪ್ಪಿದ್ದಾರೆಂದು ಅವರು ಆತಂಕಪಟ್ಟರು.

ಪತ್ರಕರ್ತ ಇಂದೂಧರ ಹೊನ್ನಾಪುರ ಮಾತನಾಡಿ, ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಹಿಂ.ವರ್ಗಕ್ಕೆ ಒಂದು ಸೀಟನ್ನು ಕೊಟ್ಟಿಲ್ಲ. ಕೇವಲ ಮೀಸಲಾತಿಯ ಕಾರಣಕ್ಕಾಗಿ ದಲಿತರಿಗೆ ಸೀಟುಗಳನ್ನು ಹಂಚಿದೆ. ಹೀಗಾಗಿ ಹಿಂದುಳಿದವರನ್ನು ಹತ್ತಿರಕ್ಕೆ ಬಿಟ್ಟಿಕೊಳ್ಳದ ಬಿಜೆಪಿ, ದಲಿತ ಸಮುದಾಯಕ್ಕೆ ಮಾನ್ಯತೆ ಕೊಡುತ್ತಾರೆಯೆ. ಇದನ್ನು ಅರ್ಥ ಮಾಡಿಕೊಳ್ಳಬೇಕು. ಬಿಜೆಪಿಗೆ ಮತ ಹಾಕುವಂತಹ ಅಪಾಯಕಾರಿ ಕೃತ್ಯ ಮಾಡಬಾರದು ಎಂದರು.

ಕೆಲವು ದಲಿತರು ಮೀಸಲಾತಿಗೆ, ಭಡ್ತಿಗೆ, ಸರಕಾರದ ಗುತ್ತಿಗೆ ಪಡೆಯಲು ಅಂಬೇಡ್ಕರ್ ಮೀಸಲಾತಿ ಬೇಕು. ಆದರೆ, ಅವರ ಚಿಂತನೆಗಳ ದಾರಿಯಲ್ಲಿ ಸಾಗಲು ಅಂಬೇಡ್ಕರ್ ಬೇಡವಾಗಿದೆ. ಇದರಿಂದಾಗಿ ಕೋಮುವಾದಿಗಳು ಅಟ್ಟಹಾಸ ಮೆರೆಯುತ್ತಿವೆ ಎಂದರು.

ಸ್ಫೂರ್ತಿಧಾಮ ಅಧ್ಯಕ್ಷ ಮರಿಸ್ವಾಮಿ, ಪತ್ರಕರ್ತ ದೊಡ್ಡಿಹಳ್ಳಿ ನರಸಿಂಹ ಮೂರ್ತಿ ಹಾಜರಿದ್ದರು.

ಮಾಧ್ಯಮಗಳು ಬಿಂಬಿಸುವಂತೆ ಚುನಾವಣಾ ಪ್ರಕ್ರಿಯೆಯು ಮಹಾಯುದ್ದವು ಅಲ್ಲ, ಕುರುಕ್ಷೇತ್ರವೂ ಅಲ್ಲ. ಪ್ರಜಾಪ್ರಭುತ್ವಕ್ಕೆ ಯಾರು ಹಿತವರು ಎಂಬುದನ್ನು ಚಿಂತಿಸುವ ಬುದ್ದಿಯ ಪ್ರಕ್ರಿಯೆಯಾಗಿದೆ. ಈ ನೆಲೆಗಟ್ಡಿನಲ್ಲಿ ಮಾಧ್ಯಮಗಳು ಪ್ರಜಾಪ್ರಭುತ್ವಕ್ಕೆ ಪೂರಕವಾಗಿರುವಂತಹ ಚರ್ಚೆಗಳನ್ನು ನಡೆಸುವಂತಾಗಲಿ

-ಇಂದೂಧರ ಹೊನ್ನಾಪುರ, ಹಿರಿಯ ಪತ್ರಕರ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News