ನ್ಯಾಯಯುತ ಮತದಾನ ನಡೆದರೆ ನಿಮಗೆ 40 ಸ್ಥಾನಗಳೂ ಸಿಗುವುದು ಕಷ್ಟ !

Update: 2019-04-15 06:03 GMT

ಹೊಸದಿಲ್ಲಿ : 2014 ರಾಯ್ ಬರೇಲಿಯಿಂದ ಸೋನಿಯಾ ಗಾಂಧಿ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಿಜೆಪಿ ನಾಯಕ  , ಸುಪ್ರೀಂ ಕೋರ್ಟ್ ನ್ಯಾಯವಾದಿ ಅಜಯ್ ಅಗರ್ವಾಲ್ ಅವರು ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ. ಪ್ರಧಾನಿಗೆ ಬರೆದಿರುವ ಬಹಿರಂಗ ಪತ್ರದಲ್ಲಿ ತೀವ್ರ ವಾಗ್ದಾಳಿ ನಡೆಸಿರುವ ಅಗರ್ವಾಲ್ ನ್ಯಾಯಯುತವಾಗಿ ಚುನಾವಣೆ ನಡೆದರೆ ನೀವು ಹೇಳಿದಂತೆ 400 ಸೀಟುಗಳಲ್ಲ, ಬದಲಿಗೆ ಇಡೀ ದೇಶದಲ್ಲಿ ನಿಮಗೆ 40 ಸ್ಥಾನಗಳೂ ಸಿಗುವುದು ಕಷ್ಟ. ಇದಕ್ಕಾಗಿ ನೀವು ಸಿದ್ಧವಾಗಿರಿ. ಇಲ್ಲದಿದ್ದರೆ ನಿಮಗೆ ಮಾನಸಿಕ ಆಘಾತ ಖಚಿತ  ಎಂದು ಹೇಳಿದ್ದಾರೆ. 

ಕಳೆದ ಗುಜರಾತ್ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ 2018 ರಲ್ಲಿ ಕಾಂಗ್ರೆಸ್ ಮುಖಂಡ ಮಣಿಶಂಕರ್ ಅಯ್ಯರ್ ಅವರ ನಿವಾಸದಲ್ಲಿ ನಡೆದಿದೆ ಎನ್ನಲಾದ ಪಾಕ್ ಅಧಿಕಾರಿಗಳು, ಮಾಜಿ ಉಪರಾಷ್ಟ್ರಪತಿ ಹಾಮಿದ್ ಅನ್ಸಾರಿ ಹಾಗು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಡುವಿನ ಸಭೆಯ ಬಗ್ಗೆ ಹೇಳಿರದಿದ್ದರೆ ಆ ಚುನಾವಣೆಯಲ್ಲಿ ಬಿಜೆಪಿ ಸೋಲುತ್ತಿತ್ತು. ನಾನು ಇದನ್ನು ಬಹಿರಂಗಪಡಿಸಿದ ಬಳಿಕವೇ ಅದನ್ನು ಪ್ರಧಾನಿ ಸಾರ್ವಜನಿಕ ಚುನಾವಣಾ ಸಭೆಗಳಲ್ಲಿ ಹೇಳಿ ಧ್ರುವೀಕರಣ ಮಾಡಿ ಸೋಲುವ ಚುನಾವಣೆಯನ್ನು ಗೆದ್ದು ಬಿಟ್ಟರು. ಇದನ್ನು ಸಂಘ ಪರಿವಾರದ ಹಿರಿಯ ಮುಖಂಡರೂ ಒಪ್ಪುತ್ತಾರೆ ಎಂದು ಅಗರ್ವಾಲ್ ಹೇಳಿದ್ದಾರೆ. 

ಈ ವಿಷಯದ ಬಗ್ಗೆ ಸಂಘದ ಸಹಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರೊಂದಿಗೆ  ತಾನು  ನಡೆಸಿದ್ದೇನೆ ಎನ್ನಲಾದ ಫೋನ್ ಮಾತುಕತೆಯೊಂದರ ಆಡಿಯೋವನ್ನೂ ಅಗರ್ವಾಲ್ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ದತ್ತಾತ್ರೇಯ ಎಂದು ಹೇಳಲಾಗುವ ವ್ಯಕ್ತಿ ಆ ಪಾಕ್ ಸಭೆಯ ವಿಷಯದಿಂದಾಗಿಯೇ ಬಿಜೆಪಿ ಗುಜರಾತ್ ನಲ್ಲಿ ಗೆದ್ದಿದ್ದು ಎಂದು ಹೇಳುತ್ತಾರೆ. 

" ನಾನು ಕಳೆದ 28 ವರ್ಷಗಳಿಂದ ನಿಮ್ಮ ಜೊತೆ ಒಡನಾಟ ಇದ್ದವನು. ಕನಿಷ್ಠ ನೂರು ಬಾರಿ ನಾವು ಒಟ್ಟಿಗೆ ದೆಹಲಿಯ ಬಿಜೆಪಿ ಕಚೇರಿಯಲ್ಲಿ ಊಟ ಮಾಡಿದ್ದೇವೆ. ಆದರೆ ನೀವು ನನಗೆ ಅನ್ಯಾಯ ಮಾಡಿದಿರಿ. ಅದೆಷ್ಟೋ ಬಾರಿ ನೋಟು ರದ್ದತಿ ಸಂದರ್ಭದ ಅವ್ಯವಹಾರಗಳ ಕುರಿತು ನಿಮಗೆ ಪತ್ರ ಬರೆದೆ. ಆದರೆ ಆ ಬಗ್ಗೆ ತನಿಖೆ ಮಾಡುವುದು ಬಿಟ್ಟು ನೀವು ನನ್ನ ಮೇಲೆಯೇ ಸಿಟ್ಟು ಮಾಡಿಕೊಂಡಿರಿ. ನೀವು ನನ್ನ ಹಾಗೆಯೆ ಅದೆಷ್ಟೋ ಕಾರ್ಯಕರ್ತರನ್ನು ಗುಲಾಮರಂತೆ ಬಳಸಿ ಬಿಸಾಡಿದ್ದೀರಿ. ಅವರು ನಿಮ್ಮ ಜುಮ್ಲಾಗಳಿಗೆ ಬಲಿಬಿದ್ದು ಮನೆಮಠ ಬಿಟ್ಟು ಪಕ್ಷಕ್ಕಾಗಿ ದುಡಿಯುತ್ತಾರೆ. ರಾಯ್ ಬರೇಲಿಯಲ್ಲಿ ನಾನು ಪಡೆದಷ್ಟು ಮತವನ್ನು ಇಷ್ಟರವರೆಗೆ ಯಾವ ಬಿಜೆಪಿ ಅಭ್ಯರ್ಥಿಯೂ ಪಡೆದಿಲ್ಲ. ಇಪ್ಪತ್ತು, ಮೂವತ್ತು ಸಾವಿರದೊಳಗೆ ಬಿಜೆಪಿ ಅಭ್ಯರ್ಥಿಗಳು ಮತ ಪಡೆಯುತ್ತಿದ್ದಲ್ಲಿ ನಾನು  1,73,721 ಮತ ಪಡೆದಿದ್ದೇನೆ. ಆದರೂ ನೀವು ಈ ಬಾರಿ ನನ್ನ ಟಿಕೆಟ್ ಕಿತ್ತುಕೊಂಡು ಒಬ್ಬ ಭ್ರಷ್ಟಾಚಾರಿಗೆ ಅಲ್ಲಿ ಟಿಕೆಟ್ ಕೊಟ್ಟಿದ್ದೀರಿ . ಅಲ್ಲಿ ಈ ಬಾರಿ ಬಿಜೆಪಿ 50 ಸಾವಿರಕ್ಕಿಂತ ಹೆಚ್ಚು ಮತ ಪಡೆಯುವುದಿಲ್ಲ ಎಂದು ಅಗರ್ವಾಲ್ ದೂರಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News