ಹೆಚ್ಚು ಮತಗಳನ್ನು ನೀಡಿದ ಗ್ರಾಮಗಳ ಅಭಿವೃದ್ಧಿಗೆ ಮೊದಲ ಆದ್ಯತೆ ಎಂದ ಮೇನಕಾ ಗಾಂಧಿ

Update: 2019-04-15 11:11 GMT

ಪಿಲ್ಹಿಬಿಟ್, ಎ.15: ತನಗೆ ಮತ ನೀಡದ ಮುಸ್ಲಿಮರು ತಮ್ಮಿಂದ ಸಹಾಯ ನಿರೀಕ್ಷಿಸಬಾರದು ಎಂದು ಕಳೆದ ವಾರವಷ್ಟೇ ಸುಲ್ತಾನ್ ಪುರ್ ಕ್ಷೇತ್ರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಹೇಳಿ ವಿವಾದಕ್ಕೀಡಾಗಿದ್ದ ಕೇಂದ್ರ ಸಚಿವೆ ಮೇನಕಾ ಗಾಂಧಿ ತಾವು ಹಾಲಿ ಸಂಸದೆಯಾಗಿರುವ ಹಾಗೂ ಮುಂಬರುವ ಚುನಾವಣೆಯಲ್ಲಿ ತಮ್ಮ ಪುತ್ರ ವರುಣ್ ಗಾಂಧಿ ಸ್ಪರ್ಧಿಸುತ್ತಿರುವ ಪಿಲ್ಬಿಬಿಟ್ ನಲ್ಲಿ  ಚುನಾವಣಾ ಸಭೆಯಲ್ಲಿ ಮಾತನಾಡುತ್ತಾ, ಪಕ್ಷಕ್ಕೆ ದೊರೆತ ಮತಗಳ ಆಧಾರದಲ್ಲಿ ಗ್ರಾಮಗಳನ್ನು ವಿಂಗಡಿಸಿ ಅಂತೆಯೇ ಆದ್ಯತೆಯ ಮೇಲೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದಿದ್ದಾರೆ.

“ಪ್ರತಿ ಬಾರಿ ನಾವು ಪಿಲ್ಬಿಬಿಟ್ ನಲ್ಲಿ ಗೆಲುವು ಸಾಧಿಸುತ್ತೇವೆ. ಹಾಗಿರುವಾಗ ನಾವು ಒಂದು ಗ್ರಾಮಕ್ಕಾಗಿ ಹೆಚ್ಚು ಕೆಲಸ ಹಾಗೂ ಇನ್ನೊಂದಕ್ಕೆ ಕಡಿಮೆ ಕೆಲಸ ಮಾಡಲು ಇರುವ ಮಾನದಂಡವೇನು. ನಾವು ಗ್ರಾಮಗಳನ್ನು ಎ ಬಿ ಸಿ ಹಾಗೂ ಡಿ ಆಗಿ ವಿಂಗಡಿಸುತ್ತೇವೆ. ನಮಗೆ  ಶೇ.80ರಷ್ಟು ಮತಗಳು ದೊರೆತ ಗ್ರಾಮ ಎ ವಿಭಾಗಕ್ಕೆ  ಸೇರಿದರೆ, ಶೇ.60ರಷ್ಟು ಮತಗಳು ದೊರೆತ ಗ್ರಾಮ ಬಿ, ಶೇ. 50ರಷ್ಟು ಮತಗಳನ್ನು ನೀಡಿದ ಗ್ರಾಮ ಸಿ ಹಾಗೂ ಶೇ. 50ಕ್ಕಿಂತಲೂ ಮತಗಳನ್ನು ನೀಡಿದ ಗ್ರಾಮ ಡಿ ವಿಭಾಗದಲ್ಲಿ ಬರುತ್ತದೆ”.

“ಮೊದಲು ಎ ವಿಭಾಗದ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿ ನಡೆಲಾಗುವುದು. ನಂತರ ಬಿ ವಿಭಾಗದ ಗ್ರಾಮಗಳಲ್ಲಿ ಕೆಲಸ ಕೈಗೆತ್ತಿಕೊಳ್ಳಲಾಗುವುದು, ಅಲ್ಲಿ ಪೂರ್ಣಗೊಂಡ ನಂತರವಷ್ಟೇ ಸಿ ವಿಭಾಗದ ಗ್ರಾಮದ ಕೆಲಸಗಳು ಆರಂಭಗೊಳ್ಳುತ್ತವೆ. ಆದುದರಿಂದ  ಎ, ಬಿ , ಸಿ  ವಿಭಾಗಗಳಿಗೆ ಪ್ರವೇಶಿಸುವುದು ನಿಮಗೆ  ಬಿಟ್ಟಿದ್ದು, ಯಾರೂ ಡಿ ವಿಭಾಗದಲ್ಲಿ ಬರ ಕೂಡದು, ನಾವಿಲ್ಲಿ ಒಳ್ಳೆಯದನ್ನು ಮಾಡಲು ಬಂದಿದ್ದೇವೆ” ಎಂದಿದ್ದಾರೆ.

ಈ ಬಾರಿ ಮೇನಕಾ ಗಾಂಧಿ ತಮ್ಮ ಪುತ್ರ ಪ್ರತಿನಿಧಿಸುತ್ತಿರುವ ಸುಲ್ತಾನ್ ಪುರ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದರೆ, ಮೇನಕಾ ಕ್ಷೇತ್ರದಿಂದ ವರುಣ್ ಸ್ಪರ್ಧಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News