ಮೇನಕಾಗಾಂಧಿಯ ‘ಸೇಡಿನ ರಾಜಕಾರಣ’

Update: 2019-04-16 05:48 GMT

ಭಾರತದ ‘ಅಹಿಂಸೆ’ಯ ಪರಿಕಲ್ಪನೆ ಅತ್ಯಂತ ಆಷಾಢಭೂತಿತನದಿಂದ ಕೂಡಿದೆ. ಇಲ್ಲಿ ಅಹಿಂಸೆಯೆಂದರೆ ‘ಪ್ರಾಣಿ ಪಕ್ಷಿಗಳನ್ನು ಹಿಂಸಿಸದೇ ಇರುವುದು’. ಪ್ರಾಣಿ ಹಿಂಸೆಯನ್ನು ವಿರೋಧಿಸಿ ಸಸ್ಯಾಹಾರಿಗಳಾದ ಒಂದು ದೊಡ್ಡ ಸಮುದಾಯ ಈ ದೇಶದಲ್ಲಿ ತಲೆ ತಲಾಂತರಗಳಿಂದ ಕೆಳಜಾತಿಯನ್ನು ಅತ್ಯಂತ ಬರ್ಬರವಾಗಿ ಹಿಂಸಿಸುತ್ತಾ ಬಂದಿದೆ. ಮನುಷ್ಯನ ಮೇಲೆ ನಡೆಯುತ್ತಾ ಬಂದಿರುವ ಈ ಜಾತ್ಯಾಧಾರಿತ ಹಿಂಸೆ, ಯಾವತ್ತೂ ಹಿಂಸೆಯ ಪಟ್ಟಿಯಲ್ಲಿ ದಾಖಲಿಸಲ್ಪಡಲೇ ಇಲ್ಲ. ಮನುಷ್ಯನನ್ನು ಪ್ರಾಣಿಗಿಂತ ಕಡೆಯಾಗಿ ನೋಡುತ್ತಾ ಬಂದ ಜನರು, ಪ್ರಾಣಿಗಳ ಕುರಿತಂತೆ ತೋರಿಸುವ ಪ್ರೀತಿ, ದಯೆ ಕಪಟತನದಿಂದ ಕೂಡಿದೆ. ಇತ್ತೀಚಿನ ‘ಗೋರಕ್ಷಣೆ’ಯ ಪ್ರಹಸನವೂ ಇದಕ್ಕಿಂತ ಭಿನ್ನವಾಗಿಲ್ಲ. ಗೋವುಗಳನ್ನು ಮಾತೆ ಎಂದು ಕರೆಯುತ್ತಾ, ಮನುಷ್ಯರನ್ನು ರಾಕ್ಷಸೀಯವಾಗಿ ಥಳಿಸಿ ಕೊಲ್ಲುತ್ತಿರುವ ಪ್ರಕರಣಗಳು ದೇಶದಲ್ಲಿ ಪದೇ ಪದೇ ನಡೆಯುತ್ತಿವೆ. ಒಬ್ಬ ಮನುಷ್ಯನನ್ನು ನಿಷ್ಕರುಣೆಯಿಂದ ಸಾರ್ವಜನಿಕವಾಗಿ ಬರ್ಬರವಾಗಿ ಥಳಿಸಿ ಕೊಲ್ಲುವವನ ‘ಗೋವಿನ ಪ್ರೀತಿ’ಯನ್ನು ಯಾರಾದರೂ ನಂಬುವುದಕ್ಕೆ ಸಾಧ್ಯವೇ? ಮನೆಯಲ್ಲಿ ತನ್ನ ಹೆತ್ತ ತಾಯಿಗೆ ಎಳ್ಳಷ್ಟೂ ಗೌರವ ನೀಡದ ಯುವಕನೊಬ್ಬ ಬೀದಿಯಲ್ಲಿ ನಿಂತು ‘ಗೋವು ನನ್ನ ತಾಯಿ’ ಎಂದು ಘೋಷಿಸಿ ಅಮಾಯಕರ ಮೇಲೆ ದೌರ್ಜನ್ಯ ಎಸಗುವುದು ‘ಅಹಿಂಸೆ’ಯ ವರ್ತಮಾನದ ಕ್ರೂರ ವ್ಯಂಗ್ಯವಾಗಿದೆ.

ಇದು ಸಂಘಪರಿವಾರ ವೇಷದಲ್ಲಿರುವ ಬೀದಿ ಗೂಂಡಾಗಳ ಪ್ರಾಣಿದಯೆಯ ಮಾತಾಯಿತು. ಗಾಂಧಿ ಕುಟುಂಬದ ಸೊಸೆ, ಇಂದಿರಾಗಾಂಧಿಯ ಹಿರಿಯ ಪುತ್ರ ಸಂಜಯ್ ಗಾಂಧಿಯ ಪತ್ನಿ ಮೇನಕಾ ಗಾಂಧಿಯೂ ಪ್ರಾಣಿದಯೆಯ ಮೂಲಕವೇ ತಮ್ಮ ರಾಜಕಾರಣವನ್ನು ಬೆಳೆಸಿಕೊಂಡವರು. ಹುಲಿ, ಸಿಂಹ, ಕರಡಿ, ಕೋತಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧ ನ್ಯಾಯಾಲಯದ ಮೆಟ್ಟಿಲನ್ನು ಏರಿದ ಹೆಗ್ಗಳಿಕೆಯೂ ಇವರಿಗಿದೆ. ಕರಡಿಯಾಡಿಸಿ ಬದುಕು ನಡೆಸುವ ಮನುಷ್ಯರನ್ನು ಕಂಡರೆ ಇವರಿಗೆ ವಿಪರೀತ ಸಿಟ್ಟು. ಕರಡಿಯ ಮೇಲೆ ನಡೆಯುವ ದೌರ್ಜನ್ಯದ ಕುರಿತಂತೆ ಇವರು ಮರುಗಿದಷ್ಟು ಕರಡಿಯಾಡಿಸುವವನ ಕುರಿತಂತೆ ಮರುಗಿದ ಉದಾಹರಣೆಗಳಿಲ್ಲ. ಈ ದೇಶದಲ್ಲಿ ಆದಿವಾಸಿಗಳು, ಬುಡಕಟ್ಟು ಜನರ ಮೇಲೆ ನಡೆಯುತ್ತಿರುವ ಭೀಕರ ದೌರ್ಜನ್ಯಗಳ ಬಗ್ಗೆಯಾಗಲಿ, ಗುಜರಾತ್ ಹತ್ಯಾಕಾಂಡ ಸಂದರ್ಭದಲ್ಲಿ ಮಹಿಳೆಯರ ಮೇಲೆ ನಡೆದ ಕ್ರೌರ್ಯಗಳ ಬಗ್ಗೆ ಒಂದು ಹನಿ ಕಣ್ಣೀರು ಸುರಿಸದ ಮೇನಕಾಗಾಂಧಿ, ತಮ್ಮ ದಯೆಯನ್ನು, ಕರುಣೆಯನ್ನು ಕೇವಲ ಪ್ರಾಣಿಗಳಿಗಷ್ಟೇ ಸೀಮಿತಗೊಳಿಸಿಕೊಂಡು ಬಂದವರು. ಪ್ರಾಣಿ ದಯೆಯನ್ನು ಮುಂದಿಟ್ಟು ಕೃತಿಗಳನ್ನೂ ರಚಿಸಿದ್ದಾರೆ.

ಮೇನಕಾಗಾಂಧಿಯ ಪತಿ ದಿ. ಸಂಜಯ್ ಗಾಂಧಿಯವರು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಈ ದೇಶದ ಅಮಾಯಕರ ಮೇಲೆ ನಡೆಸಿದ ದೌರ್ಜನ್ಯಗಳನ್ನು ಮೇನಕಾಗಾಂಧಿ ಭವಿಷ್ಯದ ರಾಜಕೀಯ ಹೆದ್ದಾರಿಯನ್ನಾಗಿಸಿಕೊಂಡವರು. ಇಂದಿರಾಗಾಂಧಿ ಕುಟುಂಬದ ವಿರುದ್ಧ ಸಡ್ಡು ಹೊಡೆದು ಬಿಜೆಪಿಯೊಂದಿಗೆ ಸಖ್ಯ ಬೆಳೆಸಿದ ಮೇನಕಾಗಾಂಧಿ ಇಂದು ಬಿಜೆಪಿಯೊಳಗಿನ ಹಿಂಸೆ, ಕ್ರೌರ್ಯಗಳನ್ನೆಲ್ಲ ತಮ್ಮ ರಕ್ತದ ಕಣಕಣಗಳಲ್ಲಿ ತುಂಬಿಸಿಕೊಂಡಿದ್ದಾರೆ. ಇವರ ಪುತ್ರ ಬಹಿರಂಗವಾಗಿ ‘ಮುಸ್ಲಿಮರ ಹತ್ಯೆಗೆ’ ಕರೆ ನೀಡಿದ್ದರೆ, ಮೇನಕಾಗಾಂಧಿ ಆ ಕ್ರೌರ್ಯವನ್ನು ತಣ್ಣಗಿನ ಭಾಷೆಯಲ್ಲಿ ತಮ್ಮ ಕ್ಷೇತ್ರದ ಮತದಾರರ ಮುಂದೆ ವ್ಯಕ್ತಪಡಿಸಿ ಸುದ್ದಿಯಾಗುತ್ತಿದ್ದಾರೆ. ಆ ಮೂಲಕ ಪ್ರಜಾಸತ್ತೆಯ ಹಿರಿಮೆಗೆ ಅವರು ಧಕ್ಕೆ ತಂದಿದ್ದಾರೆ.

ಚುನಾವಣೆ ನಡೆಯುವ ಮೊದಲೇ ಫಲಿತಾಂಶ ಘೋಷಿಸಿಕೊಂಡಿರುವ ಮೇನಕಾ ಗಾಂಧಿ ‘‘ಕ್ಷೇತ್ರದಲ್ಲಿ ನಾನು ಈಗಾಗಲೇ ಗೆದ್ದಾಗಿದೆ. ನಿಮ್ಮ ಮತ ಸಿಕ್ಕಿದರೂ, ಸಿಗದಿದ್ದರೂ ದೊಡ್ಡ ವ್ಯತ್ಯಾಸವಾಗುವುದಿಲ್ಲ. ಆದರೆ ನನಗೆ ಮತ ನೀಡದೇ ಇದ್ದರೆ ನಿಮ್ಮ ಕೆಲಸಗಳನ್ನು ಮಾಡಿಕೊಡಲು ಸಾಧ್ಯವಿಲ್ಲ’’ ಎಂದು ತಾನು ಸ್ಪರ್ಧಿಸಿರುವ ಕ್ಷೇತ್ರದ ಮುಸ್ಲಿಮ್ ಮತದಾರರಿಗೆ ಬಹಿರಂಗವಾಗಿಯೇ ಬೆದರಿಕೆಯನ್ನೊಡ್ಡಿದ್ದಾರೆ. ಚುನಾವಣೆಯೆಂದರೆ ‘ವ್ಯಾಪಾರ’ ಎಂದು ತಪ್ಪು ತಿಳಿದುಕೊಂಡಿರುವ ಮೇನಕಾಗಾಂಧಿ ‘ಹಣಕೊಟ್ಟರೆ ದಿನಸಿ ಕೊಡುತ್ತೇನೆ’ ಎಂದು ದಿನಸಿ ಅಂಗಡಿ ಮಾಲಕನೊಬ್ಬನ ಮಟ್ಟಕ್ಕಿಳಿದು ಮಾತನಾಡಿದ್ದಾರೆ. ಒಂದು ರೀತಿಯಲ್ಲಿ ಮೇನಕಾಗಾಂಧಿ ಮತದಾರರನ್ನು ‘ಬ್ಲಾಕ್ ಮೇಲ್’ ಮಾಡಿದ್ದಾರೆ. ಬೆದರಿಸಿದ್ದಾರೆ. ಇದರ ಮುಂದುವರಿದ ಭಾಗವಾಗಿ, ಅತಿ ಹೆಚ್ಚು ಮತಗಳು ಪಡೆದ ಕ್ಷೇತ್ರ, ಕಡಿಮೆ ಮತಗಳನ್ನು ಪಡೆದ ಕ್ಷೇತ್ರ ಎಂದು ವಿಂಗಡಿಸಲು ಹೊರಟಿದ್ದಾರೆ. ಬಿಜೆಪಿಗೆ ಅತಿ ಹೆಚ್ಚು ಮತಗಳನ್ನು ಪಡೆದ ಕ್ಷೇತ್ರಗಳಲ್ಲಷ್ಟೇ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ‘ನೀವು ಯಾವ ಪಟ್ಟಿಯಲ್ಲಿ ಬೀಳಲು ಬಯಸುತ್ತೀರಿ?’ ಎಂದು ಮತದಾರರನ್ನು ಪ್ರಶ್ನಿಸಿದ್ದಾರೆ. ಆಯ್ಕೆಯಾದ ಒಬ್ಬ ಪ್ರತಿನಿಧಿ ಒಂದು ಪಕ್ಷವನ್ನಷ್ಟೇ ಪ್ರತಿನಿಧಿಸುವುದಿಲ್ಲ. ಫಲಿತಾಂಶ ಘೋಷಣೆಯಾದ ಬಳಿಕ ಆತ ಇಡೀ ಕ್ಷೇತ್ರವನ್ನು ಪ್ರತಿನಿಧಿಸುತ್ತಾನೆ. ಇಡೀ ಕ್ಷೇತ್ರದ ಅಭಿವೃದ್ಧಿಯ ಹೊಣೆಗಾರನಾಗುತ್ತಾನೆ.

ತನಗೆ ಮತ ಹಾಕಿದ ಪ್ರದೇಶಗಳನ್ನಷ್ಟೇ ಅಭಿವೃದ್ಧಿ ಪಡಿಸುತ್ತೇನೆ ಎಂದು ಎಲ್ಲ ಜನಪ್ರತಿನಿಧಿಗಳು ಹೊರಟರೆ ಈ ದೇಶದ ಗತಿ ಏನಾದೀತು? ಜನಪ್ರತಿನಿಧಿಯೊಬ್ಬ ಮತದಾರರಲ್ಲಿ ‘ನಿಮ್ಮ ಪ್ರದೇಶಗಳನ್ನು ಅಭಿವೃದ್ಧಿಪಡಿಸುತ್ತೇನೆ. ನನಗೆ ಮತ ನೀಡಿ’ ಎಂದು ಕೇಳುವುದು ಬಿಟ್ಟು ‘ನನಗೆ ಮತ ನೀಡಿದರೆ ಮಾತ್ರ ನಿಮ್ಮ ಕ್ಷೇತ್ರವನ್ನು ಅಭಿವೃದ್ಧಿಗೊಳಿಸುತ್ತೇನೆ’ ಎನ್ನುವುದು ಸಂವಿಧಾನಕ್ಕೆ ಮಾತ್ರವಲ್ಲ, ಚುನಾವಣಾ ಪ್ರಕ್ರಿಯೆಗೆ ಮಾಡುವ ಅವಮಾನವಾಗಿದೆ. ಅತ್ಯಂತ ಅಸೂಕ್ಷ್ಮವಾದ, ಸಂವೇದನಾ ರಹಿತವಾದ ಈ ಹೇಳಿಕೆಯ ಹಿಂದಿರುವ ಕ್ರೌರ್ಯ ಬೆಚ್ಚಿ ಬೀಳಿಸುವಂತಹದು. ಅವರೊಳಗೆ ಬಚ್ಚಿಟ್ಟುಕೊಂಡಿರುವ ತುರ್ತುಪರಿಸ್ಥಿತಿ ಕಾಲದ ಸಂಜಯ್ ಗಾಂಧಿ ಈ ಮೂಲಕ ಬಹಿರಂಗವಾಗಿದ್ದಾರೆ. ಮೇನಕಾಗಾಂಧಿ ಇಂತಹದೊಂದು ಹೇಳಿಕೆಯನ್ನು ನೀಡುವ ಮೂಲಕ ಚುನಾವಣಾ ಪ್ರಕ್ರಿಯೆಯನ್ನೇ ನಿರಾಕರಿಸಿದ್ದಾರೆ. ಜನರನ್ನು ಬೆದರಿಸಿ ಮತ ಯಾಚಿಸಲು ಹೊರಟಿದ್ದಾರೆ. ಇಷ್ಟಾದರೂ ಇವರ ಮೇಲೆ ಚುನಾವಣಾ ಆಯೋಗ ಕ್ರಮ ತೆಗೆದುಕೊಂಡಿಲ್ಲ. ಚುನಾವಣೆಯ ಉದ್ದೇಶವನ್ನೇ ಅರಿಯದ ಮೇನಕಾಗಾಂಧಿಯನ್ನು ಚುನಾವಣೆಯಲ್ಲಿ ಸ್ಪರ್ಧಿಸದಂತೆ ಅನರ್ಹಗೊಳಿಸಲು ಮೇಲಿನ ಅವರ ಹೇಳಿಕೆಗಳು ಧಾರಾಳ ಸಾಕು. ಗೆಲ್ಲುವ ಮೊದಲೇ, ‘ಸೇಡಿನ ರಾಜಕೀಯ’ ನಡೆಸುವ ಬಗ್ಗೆ ಬಹಿರಂಗವಾಗಿ ಆಡಿಕೊಂಡಿರುವ ಮೇನಕಾಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಯಾವ ಅರ್ಹತೆಯೂ ಇಲ್ಲ. ತಕ್ಷಣ ಚುನಾವಣಾ ಆಯೋಗ ಮಧ್ಯ ಪ್ರವೇಶಿಸಿ ಮೇನಕಾಗಾಂಧಿಯನ್ನು ಚುನಾವಣಾ ಕಣದಿಂದ ಹೊರ ಹಾಕಿ, ಮತದಾರನ ಮತ ಹಾಕುವ ಹಕ್ಕಿನ ಘನತೆಯನ್ನು ಕಾಪಾಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News