ಚುನಾವಣೆಗೆ ಮುನ್ನವೇ ಸೋಲಿನ ಸುಳಿವು ಕಂಡುಕೊಂಡ ಬಿಜೆಪಿ ಅಭ್ಯರ್ಥಿ!

Update: 2019-04-16 04:08 GMT

ಮೊರಾದಾಬಾದ್ (ಉತ್ತರ ಪ್ರದೇಶ), ಎ.16: ಮೊರಾದಾಬಾದ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಸಂಸದ ಕನ್ವರ್ ಸರ್ವೇಶ್ ಕುಮಾರ್ ಸಿಂಗ್, ಮತದಾನಕ್ಕೆ ಮುನ್ನವೇ ಸೋಲಿನ ಸುಳಿವು ಕಂಡುಕೊಳ್ಳುವ ಮೂಲಕ ಸುದ್ದಿಯಲ್ಲಿದ್ದಾರೆ.

ಎಪ್ರಿಲ್ 23ರಂದು ಈ ಕ್ಷೇತ್ರದಲ್ಲಿ ಮತದಾನ ನಡೆಯಲಿದ್ದು, ತಮ್ಮ ಮರು ಆಯ್ಕೆ ಕಷ್ಟಸಾಧ್ಯ ಎಂದು ಪಿಟಿಐ ಜತೆ ದೂರವಾಣಿಯಲ್ಲಿ ಮಾತನಾಡಿದ ಅವರು ಸ್ಪಷ್ಟಪಡಿಸಿದ್ದಾರೆ. "ಈ ಬಾರಿಯ ಚುನಾವಣೆ ಕಠಿಣವಾಗಲಿದೆ. ಮುಸ್ಲಿಂ ಮತಗಳ ವಿಭಜನೆ ಆಗುತ್ತಿಲ್ಲ. ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ಸ್ಪರ್ಧೆಯಾಗಿ ಮಾರ್ಪಟ್ಟಿದೆ" ಎಂದು ಅವರು ಹೇಳಿದ್ದಾರೆ.

ಈ ಭಾಗದ ಪ್ರಭಾವಿ ಮುಖಂಡ ಎನಿಸಿಕೊಂಡಿರುವ ಸಿಂಗ್ ವಿರುದ್ಧ ಕಾಂಗ್ರೆಸ್‌ನ ಇಮ್ರಾನ್ ಪ್ರತಾಪ್‌ಗಾರಿ ಸ್ಪರ್ಧಿಸುತ್ತಿದ್ದಾರೆ. ತಮ್ಮ ಅಪೂರ್ವ ವಾಗ್ಝರಿ ಮತ್ತು ಪ್ರಚೋದನಾಕಾರಿ ಗೀತೆ ಸಂಯೋಜನೆ ಮೂಲಕ ಬಿಜೆಪಿ ಸರ್ಕಾರದ ಕ್ರಮಗಳನ್ನು ಇವರು ಪ್ರಶ್ನಿಸುತ್ತಿದ್ದಾರೆ. ಪ್ರಚಾರ ಬಿರುಸು ಪಡೆದಿದ್ದು, ಎಸ್ಪಿ-ಬಿಎಸ್ಪಿ-ಆರ್‌ಎಲ್‌ಡಿ ಮೈತ್ರಿಕೂಟದ ಅಭ್ಯರ್ಥಿ, ವೃತ್ತಿಯಲ್ಲಿ ವೈದ್ಯರಾಗಿರುವ ಎಸ್.ಟಿ.ಹಸನ್ ಕೂಡಾ ಮುಸ್ಲಿಂ ಮತಕ್ಕೆ ಗಾಳ ಹಾಕಿದ್ದಾರೆ. ಕ್ಷೇತ್ರದ ಒಟ್ಟು 19.41 ಲಕ್ಷ ಮತದಾರರ ಪೈಕಿ ಶೇಕಡ 47ರಷ್ಟು ಮುಸ್ಲಿಮರು. ಆದರೆ ಅಧಿಕೃತವಾಗಿ ಸಮುದಾಯ ಯಾರನ್ನು ಬೆಂಬಲಿಸುತ್ತದೆ ಎನ್ನುವುದನ್ನು ಇನ್ನೂ ಬಹಿರಂಗಪಡಿಸಿಲ್ಲ. ಮತದಾನಕ್ಕೆ ಮೂರು ದಿನ ಮೊದಲಷ್ಟೇ ಈ ನಿರ್ಧಾರ ಪ್ರಕಟವಾಗುತ್ತದೆ ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.

ಸಿಂಗ್ 2014ರಲ್ಲಿ ಇಲ್ಲಿಂದ ಲೋಕಸಭೆಗೆ ಆಯ್ಕೆಯಾಗುವ ಮುನ್ನ ಐದು ಬಾರಿ ಶಾಸಕರಾಗಿದ್ದರು. ಇವರ ಪುತ್ರ ಇದೇ ಕ್ಷೇತ್ರ ವ್ಯಾಪ್ತಿಯ ಬರ್ಹಾಪುರ ವಿಧಾನಸಭಾ ಕ್ಷೇತ್ರದ ಶಾಸಕ. ಮುಸ್ಲಿಮರನ್ನು ಹೊರತುಪಡಿಸಿ ಹೆಚ್ಚಿನ ಸಂಖ್ಯೆಯಲ್ಲಿರುವ ಜಾಟವ ಸಮುದಾಯ ಶೇಕಡ 9ರಷ್ಟು ಪಾಲು ಹೊಂದಿದ್ದು, ಸಾಂಪ್ರದಾಯಿಕವಾಗಿ ಬಿಎಸ್ಪಿಯನ್ನು ಬೆಂಬಲಿಸುತ್ತಾ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News