ಮಲ್ಯ, ನೀರವ್ ಮೋದಿ ಮಾತ್ರವಲ್ಲ, 36 ಉದ್ಯಮಿಗಳು ದೇಶ ಬಿಟ್ಟು ಪರಾರಿ

Update: 2019-04-16 08:00 GMT

ಹೊಸದಿಲ್ಲಿ, ಎ.16: ವಿಜಯ್ ಮಲ್ಯ ಮತ್ತು ನೀರವ್ ಮೋದಿ ಮಾತ್ರವಲ್ಲ, ಅವರ ಸಹಿತ  ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ಒಟ್ಟು 36 ಮಂದಿ ಇತರ ಉದ್ಯಮಿಗಳೂ ದೇಶ ಬಿಟ್ಟು ಪಲಾಯನಗೈದಿದ್ದಾರೆಂಬ ಕುತೂಹಲಕರ ಮಾಹಿತಿ ಜಾರಿ ನಿರ್ದೇಶನಾಲಯದಿಂದಲೇ ಹೊರಬಿದ್ದಿದೆ.

ಕ್ರಿಮಿನಲ್ ಪ್ರಕರಣಗಳನ್ನು ಹೊತ್ತು 36 ಮಂದಿ ಇತರ ಉದ್ಯಮಿಗಳಂತೆ ಆಗಸ್ಟಾ ವೆಸ್ಟ್ ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಹಗರಣದಲ್ಲಿ ಬಂಧಿತನಾಗಿರುವ ರಕ್ಷಣಾ ಏಜಂಟ್ ಸುಶೇನ್  ಮೋಹನ್ ಗುಪ್ತಾ  ಕೂಡ ದೇಶ ಬಿಟ್ಟು ಪಲಾಯನಗೈಯ್ಯುವ ಸಾಧ್ಯತೆಯಿರುವುದರಿಂದ ಆತನ ಜಾಮೀನು ಅರ್ಜಿಯನ್ನು ವಿರೋಧಿಸುತ್ತಿರುವುದಾಗಿ ಸೋಮವಾರ ಜಾರಿ ನಿರ್ದೇಶನಾಲಯ  ವಿಶೇಷ ನ್ಯಾಯಾಧೀಶರಿಗೆ ಹೇಳಿದೆ.

ತನಗೆ ಸಮಾಜದೊಂದಿಗೆ ಆಳವಾದ ಸಂಬಂಧವಿದೆ ಎಂದು ಆರೋಪಿ ಗುಪ್ತಾ ಹೇಳಿದ್ದನ್ನು ವಿರೋಧಿಸಿ ಜಾರಿ ನಿದೇರ್ಶನಾಲಯದ  ವಿಶೇಷ ಸಾರ್ವಜನಿಕ ಅಭಿಯೋಜಕರಾದ ಡಿ ಪಿ ಸಿಂಗ್, ಹಾಗೂ ಎನ್ ಕೆ ಮಠ, ``ಮಲ್ಯ, ಲಲಿತ್ ಮೋದಿ, ನೀರವ್ ಮೋದಿ, ಮೆಹುಲ್ ಚೊಕ್ಸಿ ಹಾಗೂ ಸಂದೇಸರ ಸೋದರರಿಗೂ ಸಮಾಜದಲ್ಲಿ  ಆಳವಾದ ಬೇರುಗಳಿದ್ದರೂ  ಅವರೂ ದೇಶ ಬಿಟ್ಟು ಪಲಾಯನಗೈದರು. ಕಳೆದ ಕೆಲ ವರ್ಷಗಳಲ್ಲಿ ಹೀಗೆ ದೇಶ ಬಿಟ್ಟು ಪರಾರಿಯಾದವರಲ್ಲಿ 36 ಉದ್ಯಮಿಗಳಿದ್ದಾರೆ'' ಎಂದು ಹೇಳಿದರು.

ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ಬಹಳಷ್ಟು ಶ್ರೀಮಂತರು ದೇಶ ಬಿಟ್ಟು ಪರಾರಿಯಾಗಲು ಸಫಲರಾಗಿದ್ದಾರೆಂಬ ವಿಚಾರವನ್ನು ಕೇಂದ್ರ ಸರಕಾರ ಅಥವಾ ಅದರ ಇತರ ಏಜನ್ಸಿಗಳು ಒಪ್ಪಿಕೊಂಡಿದ್ದು ಇದೇ ಮೊದಲ ಬಾರಿಯಲ್ಲ.

ಕಳೆದೈದು ವರ್ಷಗಳಲ್ಲಿ ಆರ್ಥಿಕ ಅಪರಾಧ ಹಾಗೂ ಸಾಲ ಬಾಕಿಯಿರುವ  27 ಮಂದಿ ದೇಶ ಬಿಟ್ಟು ಪರಾರಿಯಾಗಿದ್ದಾರೆಂದು ಜನವರಿಯಲ್ಲಿ ವಿತ್ತ ಖಾತೆಯ ರಾಜ್ಯ ಸಚಿವ ಶಿವಪ್ರತಾಪ್ ಶುಕ್ಲಾ ಲೋಕಸಭೆಗೆ ತಿಳಿಸಿದ್ದರು.ಇದಕ್ಕೂ ಮೊದಲು ಮಾರ್ಚ್ 2018ರಲ್ಲಿ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಎಂ ಜೆ ಅಕ್ಬರ್ 31 ಉದ್ಯಮಿಗಳು ಪರಾರಿಯಾಗಿದ್ದಾರೆಂದು ಸಂಸತ್ತಿಗೆ ಮಾಹಿತಿ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News