ಕಾಂಗ್ರೆಸ್‌ನ ‘ನ್ಯಾಯ್’ ಯೋಜನೆ ಸುಳ್ಳು ಭರವಸೆ: ಮಾಜಿ ಸಿಎಂ ಎಸ್.ಎಂ.ಕೃಷ್ಣ

Update: 2019-04-16 13:16 GMT

ಬೆಂಗಳೂರು, ಎ.16: ಕಾಂಗ್ರೆಸ್ ಪಕ್ಷವು ಇತ್ತೀಚಿಗೆ ಘೋಷಣೆ ಮಾಡಿರುವ ಚುನಾವಣಾ ಯೋಜನೆ ‘ನ್ಯಾಯ್’ ಸುಳ್ಳು ಭರವಸೆಯಾಗಿದ್ದು, ಅಧಿಕಾರಕ್ಕೆ ಬರುವುದಿಲ್ಲ ಎಂದು ಸ್ಪಷ್ಟವಾಗಿದ್ದರಿಂದ ಸುಳ್ಳನ್ನು ಪ್ರಣಾಳಿಕೆಯಲ್ಲಿ ಸೇರಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಮುಖಂಡ ಎಸ್.ಎಂ.ಕೃಷ್ಣ ಹೇಳಿದ್ದಾರೆ.

ಮಂಗಳವಾರ ನಗರದಲ್ಲಿಂದು ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನ ಅಧ್ಯಕ್ಷ ರಾಹುಲ್‌ಗಾಂಧಿ ದೇಶದ ಎಲ್ಲ ಕಡೆಗಳಲ್ಲಿನ ಚುನಾವಣಾ ಪ್ರಚಾರ ಸಭೆಗಳಲ್ಲಿ ಎಲ್ಲರಿಗೂ ವಾರ್ಷಿಕವಾಗಿ 72 ಸಾವಿರ ನೀಡುವ ನ್ಯಾಯ್ ಯೋಜನೆ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ, ಅದರ ಬಗ್ಗೆ ಅವರಿಗೆ ಸ್ಪಷ್ಟತೆಯಿಲ್ಲ, ಸಂಪನ್ಮೂಲ ಕ್ರೋಡೀಕರಣದ ಬಗ್ಗೆ ಸರಿಯಾದ ವಿವರವಿಲ್ಲ ಎಂದು ಗುಡುಗಿದರು.

ದೇಶಕ್ಕೆ ಪ್ರಬುದ್ಧ ನಾಯಕತ್ವ ಅಗತ್ಯವಿದೆ. ಎಐಸಿಸಿ ಅಧ್ಯಕ್ಷರಿಗೆ ಪ್ರಬುದ್ಧತೆಯೇ ಇಲ್ಲವಾಗಿದ್ದು, ಅವರು ಅಪ್ರಬುದ್ಧ ನಾಯಕರಾಗಿದ್ದಾರೆ. ಸುಪ್ರೀಂಕೋರ್ಟ್ ಕೆಂಗಣ್ಣಿಗೆ ಗುರಿಯಾಗಿ ನ್ಯಾಯಾಲಯದ ಮುಂದೆ ಕಟಕಟೆಯಲ್ಲಿ ನಿಲ್ಲಬೇಕಾಗಿ ಬಂದ ಇಂತವರು ದೇಶವನ್ನು ಮುನ್ನಡೆಸಲು ಅರ್ಹರಲ್ಲ. ರಾಹುಲ್‌ ಗಾಂಧಿ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುವಲ್ಲಿ ವಿಫಲರಾಗುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ಅನೇಕ ಹಿರಿಯ ನಾಯಕರು ಇದ್ದರೂ ಇವರಿಗೆ ಯಾವ ಕಾರಣಕ್ಕಾಗಿ ಆ ಹುದ್ದೆಯನ್ನು ನೀಡಿದರು ಎಂಬುದು ಗೊತ್ತಿಲ್ಲ ಎಂದರು.

ದೇಶದಲ್ಲಿ ಈ ಬಾರಿ ಜನತೆ ಮೋದಿ ಮತ್ತು ಬಿಜೆಪಿಯನ್ನು ಅಧಿಕಾರಕ್ಕೆ ತರುವುದರಲ್ಲಿ ಯಾವುದೇ ಸಂಶಯವಿಲ್ಲ ಎಂಬುದು ಎಲ್ಲರಿಗೂ ತಿಳಿದಿದೆ. ಹಾಗಾಗಿ ಯಾರು ಏನೇ ಆರೋಪ ಮಾಡಿದರೂ ಮೋದಿ ಮತ್ತೆ ಪ್ರಧಾನಿಯಾಗುವುದು ಖಚಿತ ಎಂದ ಅವರು, ಮೋದಿಯನ್ನು ಮತ್ತೆ ನಾನು ಪ್ರಧಾನಿಯಾಗಲು ಬಿಡುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹೇಳಿರುವುದಕ್ಕೆ ಪ್ರತಿಕ್ರಿಯಿಸುತ್ತಾ, ಅವರು ಅಡ್ಡಿಪಡಿಸುತ್ತಾರೆ ಎಂಬುದು ನನಗೆ ಗೊತ್ತು. ತಮ್ಮ ಭುಜಬಲದ ಪರಾಕ್ರಮದಿಂದಲೇ ಅಡ್ಡಿಪಡಿಸಬಹುದೆಂಬ ನಿರೀಕ್ಷೆಯಲ್ಲಿದ್ದಾರೆ ಎಂದರು.

2014ರಲ್ಲೂ ದೇವೇಗೌಡರು ಇದೇ ಮಾತನ್ನು ಹೇಳಿದ್ದರು. ಈಗ ಮತ್ತೆ ಇದೇ ಮಾತನ್ನು ಪುನರಾವರ್ತನೆ ಮಾಡುತ್ತಿದ್ದಾರೆ. ಇದು ಹುಡುಗಾಟಿಕೆಯ ಮಾತೇ ಹೊರತು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದು ಕುಟುಕಿದರು.

ಕಣ್ಣೀರು ಅಭ್ಯಾಸವಾಗಿಬಿಟ್ಟಿದೆ: ನಾನು ಕಣ್ಣೀರು ಹಾಕಿ ಪ್ರಚಾರ ನಡೆಸಲು ಅನೇಕ ಬಾರಿ ಪ್ರಯತ್ನಿಸಿದ್ದೇನೆ. ಆದರೂ ನನಗೆ ಕಣ್ಣೀರು ಬರುವುದಿಲ್ಲ. ಕೆಲವರಿಗೆ ಕಣ್ಣೀರು ಹಾಕುವುದು ಅಭ್ಯಾಸವಾಗಿಬಿಟ್ಟಿದೆ. ಕಣ್ಣೀರು ಹಾಕಿ ಮತದಾರರನ್ನ ಭಾವನಾತ್ಮಕವಾಗಿ ಸೆಳೆದು ಗೆಲ್ಲಬಹುದೆಂಬ ಲೆಕ್ಕಾಚಾರದಲ್ಲಿದ್ದಾರೆ. ಮತದಾರರು ಈಗ ಪ್ರಬುದ್ಧರಾಗಿದ್ದು, ಯಾರನ್ನು ಆಯ್ಕೆ ಮಾಡಬೇಕು ಎಂಬುದು ಅವರಿಗೂ ಗೊತ್ತಿದೆ ಎಂದರು.

ಮಂಡ್ಯ, ಹಾಸನ ಹಾಗೂ ತುಮಕೂರಿನಲ್ಲಿ ತನ್ನ ಸಂಸಾರದವರನ್ನು ಗೆಲ್ಲಿಸಲು ನಾನಾ ಸರ್ಕಸ್ ನಡೆಸುತ್ತಿದ್ದಾರೆ. ಅದಕ್ಕಾಗಿ ಬೇರೊಬ್ಬರ ಮೇಲೂ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್, ಶಾಸಕರ ಅರವಿಂದ ಲಿಂಬಾವಳಿ, ಮಾಜಿ ಶಾಸಕ ನೆ.ಲ.ನರೇಂದ್ರಬಾಬು, ವಿಧಾನಪರಿಷತ್ ಸದಸ್ಯ ಲೇಹರ್‌ಸಿಂಗ್, ಪಕ್ಷದ ಸಹ ವಕ್ತಾರರಾದ ಪ್ರಕಾಶ್, ಎ.ಎಚ್.ಆನಂದ್ ಉಪಸ್ಥಿತರಿದ್ದರು.

ಇತ್ತೀಚೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಹತಾಶರಾಗಿ ಮನಬಂದಂತೆ ಮಾತನಾಡುತ್ತಿದ್ದಾರೆ. ತಾವು ಏನು ಮಾತನಾಡಬೇಕು, ಏನು ಮಾತನಾಡಬಾರದು ಎಂಬ ಪರಿಜ್ಞಾನವೇ ಇಲ್ಲ. ಸೋಲಿನ ಹತಾಶೆ ಅವರಿಗೆ ಫಲಿತಾಂಶಕ್ಕೂ ಮೊದಲೇ ತಿಳಿದಿದೆ.

-ಎಸ್.ಎಂ.ಕೃಷ್ಣ, ಮಾಜಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News