ಮತಗಟ್ಟೆ ಅಧಿಕಾರಿಗಳ ಮೊಬೈಲ್ ಸಂಪರ್ಕದಲ್ಲಿರಲಿ: ಚುನಾವಣಾಧಿಕಾರಿಗಳ ಸೂಚನೆ

Update: 2019-04-16 13:04 GMT

ಬೆಂಗಳೂರು, ಎ.16: ಮತಗಟ್ಟೆಯಲ್ಲಿ ಕಾರ್ಯನಿರ್ವಹಿಸುವಾಗ ಮೊಬೈಲ್ ಸ್ವಿಚ್ ಆಫ್ ಆಗದಂತೆ ಎಚ್ಚರವಹಿಸಿ. ವಿವಿ ಪ್ಯಾಟ್ ಬಿಸಿಲಿಗೆ ಇಡಬಾರದು. ಮತಗಟ್ಟೆ ಹಾಗೂ ಮತ ಯಂತ್ರವನ್ನು ಸರಿಯಾದ ಕ್ರಮದಲ್ಲಿ ಜೋಡಣೆ ಮಾಡಬೇಕು ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಮತಗಟ್ಟೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮತಗಟ್ಟೆ ಅಧಿಕಾರಿಗಳು ಸಣ್ಣಪುಟ್ಟ ಸಂಗತಿಗಳನ್ನು ನಿರ್ಲಕ್ಷ್ಯ ಮಾಡಬಾರದು. ಸಣ್ಣ ವಿಚಾರಗಳೇ ಹೆಚ್ಚು ಸಮಸ್ಯೆ ಉಂಟುಮಾಡುತ್ತವೆ. ಹೀಗಾಗಿ ಎಲ್ಲ ಸೂಕ್ಷ್ಮ ವಿಚಾರಗಳ ಬಗ್ಗೆ ಗಮನಹರಿಸಬೇಕೆಂದು ಮತಗಟ್ಟೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಮತಗಟ್ಟೆಯಲ್ಲಿ ಕಾರ್ಯನಿರ್ವಹಿಸುವವರನ್ನು ಹಿರಿಯ ಅಧಿಕಾರಿಗಳು ಆಗಾಗ ಸಂಪರ್ಕಿಸುತ್ತಿರುತ್ತಾರೆ. ಈ ಹಿಂದಿನ ಚುನಾವಣೆಗಳಲ್ಲಿ ಮತಗಟ್ಟೆ ಅಧಿಕಾರಿಗಳು ತಮ್ಮ ಮೊಬೈಲ್ ಬ್ಯಾಟರಿ ಡೆಡ್ ಆಗಿದೆ, ಚಾರ್ಜರ್ ಇರಲಿಲ್ಲ ಎಂದು ನೆಪವನ್ನೊಡ್ಡಿದ್ದರು. ಈ ಬಾರಿ ಅಧಿಕಾರಿಗಳು ಯಾವುದೇ ನೆಪಗಳನ್ನು ಹೇಳಬಾರದು. ಸಾಧ್ಯವಾದರೆ ಎಲ್ಲರೂ ಪವರ್ ಬ್ಯಾಂಕ್ ಇಟ್ಟುಕೊಳ್ಳಬೇಕು. ಮೊಬೈಲ್ ಸಂಪರ್ಕಕ್ಕೆ ಸಿಗುವಂತಿರಬೇಕು ಎಂದು ಸೂಚನೆಗಳನ್ನು ರವಾನಿಸಿದ್ದಾರೆ.

ವರದಿ ಸಲ್ಲಿಸಲು ಅಧಿಕಾರಿಗಳ ನೇಮಕ: ಮತದಾನದ ದಿನ ಬೆಳಗ್ಗೆ 9 ಗಂಟೆವರೆಗಿನ ವಿವರವನ್ನು 9.15 ರೊಳಗೆ ನೀಡಬೇಕು ಎಂದು ಚುನಾವಣಾ ಆಯೋಗ ಸೂಚಿಸಿದೆ. ಕೆಲಸದ ನಡುವೆ ಇಷ್ಟೊಂದು ವೇಗವಾಗಿ ಮಾಹಿತಿ ನೀಡುವುದು ಅಸಾಧ್ಯ ಎಂದು ಮತಗಟ್ಟೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಆದರೂ, ಲಭ್ಯವುಳ್ಳ ಸಂವಹನದ ಮೂಲಕ ಮಾಹಿತಿಯನ್ನು ರವಾನೆ ಮಾಡಬೇಕು ಎಂದು ಸೂಚನೆ ನೀಡಿದ್ದು, ವರದಿ ನೀಡಲು ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ. ಅವರು ಮತಗಟ್ಟೆಗೆ ಬಂದ ಕೂಡಲೇ ಅಧಿಕಾರಿ ಮಾಹಿತಿ ನೀಡಬೇಕು ಎಂದು ಹೇಳಲಾಗಿದೆ.

ಬಿಸಿಲಿಗೆ ಇಡಬಾರದು: ವಿವಿ ಪ್ಯಾಟ್‌ಗಳನ್ನು ಮತಗಟ್ಟೆಗೆ ಒಯ್ಯುವಾಗ ಎಚ್ಚರ ವಹಿಸಬೇಕು. ವಿವಿ ಪ್ಯಾಟ್ ಬಿಸಿಲಿನಲ್ಲಿ ಬಹಳ ಹೊತ್ತು ಇಟ್ಟರೆ ತಾಂತ್ರಿಕ ದೋಷ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಸದಾ ನೆರಳಿನಲ್ಲಿ ಇಡಬೇಕು. ಮಸ್ಟರಿಂಗ್ ಕೇಂದ್ರಗಳಲ್ಲಿ ಏನಾದರೂ ಸಮಸ್ಯೆಗಳಾದರೆ ತಾವೇ ಅದನ್ನು ಪರಿಹರಿಸಲು ಮುಂದಾಗುವ ಮೊದಲು ಹಿರಿಯ ಅಧಿಕಾರಿಗಳ ಸಲಹೆ ಪಡೆಯಬೇಕು. ಮತಗಟ್ಟೆಗೆ ಹೋದ ದಿನದಂದೇ ಕೇಂದ್ರದ ಮುಂದೆ ಸೂಚನಾ ಪತ್ರ ಅಂಟಿಸುವುದು, ಟೇಬಲ್ ಹಾಗೂ ಕುರ್ಚಿಗಳನ್ನು ಇಡುವುದು ಮೊದಲಾದ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಲಾಗಿದೆ.

ಜಿಪಿಎಸ್ ಅಳವಡಿಕೆ: ಎ.17 ರಂದು ಮತಯಂತ್ರಗಳನ್ನು ಮಸ್ಟರಿಂಗ್ ಕೇಂದ್ರಗಳಿಂದ ಮತಗಟ್ಟೆಗಳಿಗೆ ರವಾನಿಸಲಾಗುತ್ತದೆ. ಮತಯಂತ್ರಗಳನ್ನು ಸಾಗಿಸುವ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗುತ್ತದೆ. ಇದರಿಂದ ವಾಹನ ಸಾಗಿದ ದಾರಿ, ತಲುಪಿದ ಮತಗಟ್ಟೆಯನ್ನು ಕಂಡುಹಿಡಿಯಬಹುದು. ಜಿಪಿಎಸ್ ಉಪಕರಣಗಳನ್ನು ಅಳವಡಿಸಿದ ಬಳಿಕ ಅದು ಕಾರ್ಯನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News