ಸಮುದಾಯವನ್ನು ಎತ್ತಿ ಕಟ್ಟುವ ಸುಳ್ಳು ಸುದ್ದಿ ಪ್ರಕಟ ಆರೋಪ: ದಿನಪತ್ರಿಕೆ ವಿರುದ್ಧ ಚು.ಆಯೋಗಕ್ಕೆ ದೂರು ಸಲ್ಲಿಕೆ

Update: 2019-04-16 14:14 GMT

ಬೆಂಗಳೂರು, ಎ.16: ರಾಜ್ಯದ ಪ್ರಮುಖ ದಿನಪತ್ರಿಕೆಯೊಂದು ಇಂದು ತನ್ನ ಒಂದು ಇಡೀ ಪುಟದ ಬಹುವರ್ಣ ಮುದ್ರಣದಲ್ಲಿ ಗೃಹ ಸಚಿವ ಎಂ.ಬಿ.ಪಾಟೀಲ್‌ರ ತೇಜೋವಧೆ ಹಾಗೂ ಒಂದು ಸಮುದಾಯವನ್ನು ಎತ್ತಿಕಟ್ಟುವಂತಹ ಸುಳ್ಳು ಸುದ್ದಿ ಪ್ರಕಟಿಸಿದೆ ಎಂದು ಮುಖ್ಯ ಚುನಾವಣಾಧಿಕಾರಿಗೆ ಸಾಮಾಜಿಕ ಕಾರ್ಯಕರ್ತೆ ಎಚ್.ವಿ.ಭವ್ಯಾ ಅನು ಎಂಬವರು ದೂರು ನೀಡಿದ್ದಾರೆ.

ಜೊತೆಗೆ ಒಂದು ಬಾಕ್ಸ್ ಐಟಂನಲ್ಲಿ ‘ಧರ್ಮ ಸಂಘರ್ಷಕ್ಕೆ ಪ್ರಭಾವಿಗಳಿಂದಲೇ ಪಿತೂರಿ, ವೀಕ್ಷಿಸಿ ಬೆಳಗ್ಗೆ 6.57 ರಿಂದ ಇಡೀ ದಿನ ಎಂದು ಸುದ್ದಿವಾಹಿನಿಯ ಹೆಸರು ಹಾಗೂ ಮೊಬೈಲ್ ಸಂಖ್ಯೆಗಳನ್ನು’ ಎದ್ದು ಕಾಣುವಂತೆ ಪ್ರಕಟಿಸಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಈ ವರದಿಯಲ್ಲಿ ‘ಸೋನಿಯಾಗಾಂಧಿಗೆ ಪತ್ರ ಬರೆದಿದ್ದ ಎಂ.ಬಿ.ಪಾಟೀಲ್?-ಧರ್ಮ ಒಡೆದರೆ ಲಾಭಕರ’ ಎಂದು ಗೃಹ ಸಚಿವ ಎಂ.ಬಿ.ಪಾಟೀಲರ ಚಿತ್ರ ಸಹಿತ ವರದಿ ಪ್ರಕಟಿಸಿದೆ. ಬಿಜೆಪಿ ಮತ್ತು ಅದರ ರಾಜ್ಯಾಧ್ಯಕ್ಷ ಯಡಿಯೂರಪ್ಪ ಪ್ರಸ್ತುತ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಜನರನ್ನು ಧಾರ್ಮಿಕ ವಿಚಾರದಲ್ಲಿ ಧ್ರುವೀಕರಣ ಮಾಡುವ ಹುನ್ನಾರದಿಂದ ನಕಲಿ, ಸೃಷ್ಟಿತ, ಫೋರ್ಜರಿ ಸಹಿ ಮಾಡಿದ ಪತ್ರದ ಈ ವರದಿಯನ್ನು ಬಿಜೆಪಿ ಪಕ್ಷ ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಮತ್ತು ಯಡಿಯೂರಪ್ಪ ಮಾಧ್ಯಮ ಪ್ರಕಟಣೆಯ ಮೂಲಕ ವ್ಯಾಪಕವಾಗಿ ಹಂಚಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಪತ್ರಿಕಾ ವರದಿಯಲ್ಲಿ ಇಂಗ್ಲಿಷ್‌ನಲ್ಲಿ ಹಾಗೂ ಕನ್ನಡ ಅನುವಾದಿತ ಸದರಿ ನಕಲಿ ಪತ್ರವನ್ನು ಅರ್ಧಪುಟ ಪ್ರಕಟ ಮಾಡಿದ್ದು, ಸುಳ್ಳು ವರದಿಯನ್ನು ಶಾಸಕ ಸಿ.ಟಿ.ರವಿ, ಬಿಜೆಪಿ ಟ್ವಿಟರ್ ಖಾತೆಯಲ್ಲಿ ವಾದ ಸಮರ್ಥನೆಗಾಗಿ ಮತ್ತು ಮತದಾರರನ್ನು ಪ್ರಚೋದಿಸಲು ಬಳಕೆ ಮಾಡಲಾಗಿದೆ ಎಂದು ಭವ್ಯಾ ಅನು ದೂರಿದ್ದಾರೆ.

ಈ ವರದಿಯ ಹಿಂದೆ ಬಿಜೆಪಿ ಅಭ್ಯರ್ಥಿಗಳಾದ ಪ್ರತಾಪ್ ಸಿಂಹ, ತೇಜಸ್ವಿ ಸೂರ್ಯ ಮತ್ತು ಬಿಜೆಪಿ ಕರ್ನಾಟಕ ಹಣ ನೀಡಿರುವ ಸಂಶಯವಿದೆ. ಒಂದು ಇಡೀ ಪುಟವನ್ನು ಹಣ ಪಡೆದು, ಒಂದು ಪಕ್ಷದ ಪರವಾಗಿ ಮತ ಧೃವೀಕರಣಕ್ಕೆ ಸಹಾಯ ಮಾಡುವಂತಹ ಮತ್ತು ಗೃಹ ಸಚಿವರ ತೇಜೋವಧೆ ಮಾಡಿರುವ ಪತ್ರಿಕೆ ಮತ್ತು ಸುದ್ದಿವಾಹಿನಿ ಮತ್ತು ಈ ವರದಿ ಪ್ರಕಟಿಸಲು ಬಿಜೆಪಿಯಿಂದ ಹಣ ಪಡೆದು, ಜಾಹೀರಾತು ಎಂದು ಉಲ್ಲೇಖ ಹಾಕದ ವಾಹಿನಿಯ ಮಾಲಕರು, ಸಂಪಾದಕರು, ವರದಿಗಾರನ ವಿರುದ್ಧ ಸೂಕ್ತ ಕಾನೂನು ಕ್ರಮೈಗೊಳ್ಳಬೇಕೆಂದು ಅವರು ದೂರಿನಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News