ಪ್ರಕಾಶ್ ರಾಜ್, ಟಿ.ಸಿ.ರಮಾರನ್ನು ಚುನಾಯಿಸುವಂತೆ ಎಸ್.ಆರ್.ಹಿರೇಮಠ್ ಮನವಿ

Update: 2019-04-16 15:14 GMT

ಬೆಂಗಳೂರು, ಎ.16: ಜಾತಿ ಮತ್ತು ಧರ್ಮ ರಾಜಕೀಯವನ್ನು ವಿರೋಧಿಸಿ, ಜನ ಧ್ವನಿಯನ್ನು ಸಂಸತ್ತಿನಲ್ಲಿ ಮೊಳಗಿಸಲು ಜನಪರ ನಾಯಕರಾದ ಪ್ರಕಾಶ್ ರಾಜ್ ಹಾಗೂ ಟಿ.ಸಿ.ರಮಾರನ್ನು ಗೆಲ್ಲಿಸಿ ಎಂದು ಸಿಟಿಜನ್ ಫಾರ್ ಡೆಮಾಕ್ರಸಿ ರಾಷ್ಟ್ರೀಯ ಅಧ್ಯಕ್ಷ ಎಸ್.ಆರ್.ಹಿರೇಮಠ್ ಮನವಿ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ದಕ್ಷಿಣ ಭಾಗದಲ್ಲಿ ಸಂಸದರನ್ನು ಚುನಾಯಿಸುವ ದಿನ ಹತ್ತಿರ ಬಂದಿದ್ದು, ಜನರ ಆಶೋತ್ತರಗಳಿಗೆ ಸ್ಪಂದಿಸುವ, ತಮ್ಮ ಕ್ಷೇತ್ರಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ನೀಡುವ, ಸಂಸತ್ತಿನಲ್ಲಿ ಜನಪರ ನೀತಿಗಳಿಗಾಗಿ ಧ್ವನಿ ಎತ್ತುವ, ಜನವಿರೋಧಿ ನೀತಿಗಳ ವಿರುದ್ಧ ಹೋರಾಡುವ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಪ್ರಕಾಶ್ ರಾಜ್ ಹಾಗೂ ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಟಿ.ಸಿ.ರಮಾರನ್ನು ಗೆಲ್ಲಿಸಿ ಎಂದು ಹೇಳಿದರು.

ಬಂಡವಾಳಶಾಹಿ ವ್ಯವಸ್ಥೆ ಅಧಃಪತನಗೊಂಡು ಕೊಳೆತು ಹೋಗಿರುವುದರಿಂದ ಬಂಡವಾಳಶಾಹಿ ಆಳ್ವಿಕೆ ಜನರನ್ನು ದ್ವಿ‘ಪಕ್ಷ’ ಅಥವಾ ದ್ವಿ ‘ಒಕ್ಕೂಟದ’ ಬಲೆಗೆ ಸಿಕ್ಕಿಸಿ ತಮಗೆ ಬೇಕಾದ ಪಕ್ಷದ ಸುತ್ತಲೂ ಓಟಿನ ಧ್ರುವೀಕರಣ ಮಾಡುವ ತಂತ್ರಗಳನ್ನು ರೂಪಿಸಿ, ಎಲ್ಲ ಪ್ರಜಾತಾಂತ್ರಿಕ ರೂಢಿಗಳನ್ನು ಗಾಳಿಗೆ ತೂರುತ್ತಿದ್ದಾರೆ. ಇದಕ್ಕೆ ತಕ್ಕಂತೆ ರಾಜಕೀಯ ಪಕ್ಷಗಳು ಹಣದ ಆಮಿಷ ತೋರಿಸುವ ಮೂಲಕ ಮಾಧ್ಯಮ, ತೋಳ್ಬಲ ಹಾಗೂ ಜಾತಿಯನ್ನು ಬಳಸಿಕೊಳ್ಳುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್ ಹಾಗೂ ಇತ್ತೀಚಿಗೆ ಅಧಿಕಾರ ವಹಿಸಿಕೊಂಡ ಬಿಜೆಪಿ ಎರಡೂ ಪಕ್ಷಗಳ ಬಗ್ಗೆ ಜನರಲ್ಲಿ ತಿರಸ್ಕಾರ ಮೂಡಿದೆ. ಪ್ರಾದೇಶಿಕ ಪಕ್ಷವಾದ ಜೆಡಿ(ಎಸ್), ಟಿಡಿಪಿ, ಎಸ್‌ಪಿ ಹಾಗೂ ಬಿಎಸ್‌ಪಿ ಮುಂತಾದ ಪ್ರಾದೇಶಿಕ ಪಕ್ಷಗಳ ಬಗ್ಗೆಯೂ ಜನರು ವಿಶ್ವಾಸವನ್ನು ಕಳೆದುಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರಾಜಕೀಯವೆಂದರೆ ಹತಾಶೆಗೊಂಡು ದೂರ ಹೋಗುವುದು ಸರಿಯಲ್ಲ. ಬದಲಿಗೆ ಹಿಂದಿನ ಅನುಭವಗಳಿಂದ ಪಾಠ ಕಲಿತು ಪ್ರಜ್ಞಾ ಪೂರ್ವಕ ಪಾತ್ರವನ್ನು ವಹಿಸಬೇಕಾಗಿದೆ ಎಂದು ಸಲಹೆ ನೀಡಿದರು.

ಒಂದು ಸ್ಪಷ್ಟ ಕೃಷಿನೀತಿ, ಶಿಕ್ಷಣನೀತಿ, ಆರೋಗ್ಯನೀತಿ, ಮಹಿಳಾನೀತಿ, ಒಂದು ಸಮಗ್ರ ಉದ್ಯೋಗ ನೀತಿ, ಕಾರ್ಮಿಕಪರ ನೀತಿಗಳನ್ನು ಹೊಂದಿದ ಹಾಗೂ ವಸತಿ, ಆಹಾರ, ಉತ್ತಮ ಒಳಚರಂಡಿ ವ್ಯವಸ್ಥೆ, ಸಾರಿಗೆ ಮುಂತಾದ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಧ್ಯೇಯಗಳನ್ನು ಹೊಂದಿರುವ ಕೆಲವು ಸಂಸದರನ್ನಾದರೂ ಆಯ್ಕೆ ಮಾಡಿ ಎಂದರು.

ಇಡೀ ಚುನಾವಣಾ ಪ್ರಕ್ರಿಯೆಯಲ್ಲಿ ಒಂದು ಹೊಸ ಅಧ್ಯಾಯವನ್ನು ತೆರೆಯುವ ದಿಟ್ಟ ನಿಲುವನ್ನು ಇಂದು ಕೈಗೊಳ್ಳಬೇಕಾಗಿದೆ. ಆದ್ದರಿಂದ ಇಂದಿನ ನಮ್ಮ ಕಳಕಳಿಯ ಕರೆ- ಸ್ವಾರ್ಥ, ಭ್ರಷ್ಟ, ಅಧಿಕಾರದ ದುರಾಸೆಯ ಹಾಗೂ ತತ್ವಹೀನ ಪಕ್ಷಗಳನ್ನು ಕೈಬಿಡೋಣ.

-ಎಸ್.ಆರ್.ಹಿರೇಮಠ್, ಸಿಟಿಜನ್ ಫಾರ್ ಡೆಮಾಕ್ರಸಿ ರಾಷ್ಟ್ರೀಯ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News