ಧಾರ್ಮಿಕ ಬಾವುಟ ತೆರವುಗೊಳಿಸಿ, ಭಾರತ್ ಮಾತಾಕಿ ಜೈ ಘೋಷಣೆ ಕೂಗಿದ ಬಿಜೆಪಿ ಕಾರ್ಪೊರೇಟರ್

Update: 2019-04-16 16:41 GMT

ಬೆಂಗಳೂರು,ಎ.15: ಬಿಜೆಪಿ ಚುನಾವಣಾ ಪ್ರಚಾರದ ವೇಳೆ ಮನೆಯೊಂದರ ಮೇಲೆ ಹಾರಾಡುತ್ತಿದ್ದ ಹಸಿರು ಬಾವುಟವನ್ನು ಬಿಜೆಪಿ ಕಾರ್ಪೊರೇಟರ್ ಖುದ್ದು ತೆರವುಗೊಳಿಸಿ, ಭಾರತ್ ಮಾತಾಕಿ ಜೈ ಘೋಷಣೆ ಕೂಗಿದ ಘಟನೆ ಇಂದು ಬೊಮ್ಮನಹಳ್ಳಿ ವಾರ್ಡಿನಲ್ಲಿ ನಡೆದಿದೆ. 

ಬೆಳಗ್ಗೆ ವಾರ್ಡ್ ಸಂಖ್ಯೆ 175ರ ವಿರಾಟ್ ನಗರ ಪ್ರೆಸಿಡೆನ್ಸಿ ಬಡಾವಣೆಯ ಮನೆ ನಂ.9 ಶಹಜಹಾನ್ ಬೇಗಂ ಎಂಬವರ ಮನೆಯಲ್ಲಿ ಹಸಿರು ಧ್ವಜವನ್ನು ಹಾರಿಸಿದ್ದರು. ಇದೇ ಬೀದಿಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರಕ್ಕೆ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಪರ ಮತಪ್ರಚಾರಕ್ಕೆ ಬಂದ ಬಿಬಿಎಂಪಿ ಸದಸ್ಯ ಮೋಹನ್ ರಾಜ್ ಮತ್ತವರ ಬೆಂಬಲಿಗರು ಹಸಿರು ಧ್ವಜವನ್ನು ಕಂಡು ಪಾಕಿಸ್ತಾನದ ಧ್ವಜ ಹಾರಿಸಿದ್ದಾರೆಂದು ಆರೋಪಿಸಿ, ಧ್ವಜವನ್ನು ತೆರವುಗೊಳಿಸಿದ್ದಾರೆ ಎನ್ನಲಾಗಿದೆ. ಧ್ವಜ ತೆರವುಗೊಳಿಸುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಘಟನೆ ಬಗ್ಗೆ ಮಾಹಿತಿ ತಿಳಿದ ಬೊಮ್ಮನಹಳ್ಳಿ ಪೊಲೀಸ್ ಅಧಿಕಾರಿಗಳು ಬಿಜೆಪಿ ಕಾರ್ಪೊರೇಟರ್ ಹಾಗು ಮುಸ್ಲಿಂ ಮುಖಂಡರನ್ನು ಠಾಣೆಗೆ ಕರೆಸಿ ಮುಚ್ಚಳಿಕೆ ಬರೆಸಿ ವಿಷಯವನ್ನು ಮುಕ್ತಾಯಗೊಳಿಸಿದ್ದಾರೆ. ಧ್ವಜ ತೆರವುಗೊಳಿಸುವ ಸಂದರ್ಭ ಭಾರತ್ ಮಾತಾಕಿ ಜೈ ಘೋಷಣೆಗಳು ಮೊಳಗಿದ್ದು, ಮನೆಯವರು ಭಯಭೀತರಾಗಿದ್ದರು ಎನ್ನಲಾಗಿದೆ. ಈ ಸಂಬಂದ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದು, ವಾದ ಪ್ರತಿವಾದಗಳಿಗೆ ವೇದಿಕೆ ಒದಗಿಸಿಕೊಟ್ಟಿದೆ.

ಪ್ರಕರಣದ ಬಗ್ಗೆ ಮನೆಯ ಸಯ್ಯದ್ ಷರೀಫ್ ಪ್ರತಿಕ್ರಿಯಿಸಿದ್ದು, ಕಾರ್ಪೊರೇಟರ್ ಮೋಹನ್ ರಾಜ್ ನಮ್ಮ ಮನೆಯಲ್ಲಿದ್ದ ಹಸಿರು ಬಾವುಟವನ್ನು ಬೀದಿಯಲ್ಲಿ ತುಳಿದು ಅಪಚಾರ ಮಾಡಿದ್ದಾರೆ. ಬಳಿಕ, ನಾನು ಮನೆಯಲ್ಲಿ ಇರದ ಸಂದರ್ಭದಲ್ಲಿ ನನ್ನ ತಾಯಿಯನ್ನು ಬಿಜೆಪಿಯ ಕೆಲ ಕಾರ್ಯಕರ್ತರು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಖಾಲಿ ಪೇಪರ್ ಗೆ ಸಹಿ ಹಾಕಿಸಿಕೊಂಡಿದ್ದಾರೆ. ಇದಾದ ನಂತರ ಪೊಲೀಸ್ ಕಾನ್ಸ್ ಸ್ಟೇಬಲ್ ಒಬ್ಬರು ನನ್ನ ಮನೆಗೆ ಬಂದು, ಬಾಂಡ್ ಪೇಪರ್ ಗೆ ಸಹಿ ಹಾಕಿ ಎಂದು ಕೇಳಿದರು. ಆದರೆ ನಾವು ನಿರಾಕರಿಸಿದ್ದರಿಂದ ಹೊರಟು ಹೋದರು. ಮೋಹನ್ ರಾಜ್ ಬಾವುಟವನ್ನು ತುಳಿದು ಅಪಚಾರ ಮಾಡಿದ್ದು, ಅವರೇ ಬಂದು ನಮ್ಮ ಸಮುದಾಯದ ಮುಖಂಡರ ಬಳಿ ಮಾತನಾಡಲಿ ಎಂದು ಹೇಳಿದರು. ಅಲ್ಲದೇ, ಹಸಿರು ಧ್ವಜ ಕಟ್ಟಿದ್ದರಿಂದ ಸ್ಥಳೀಯವಾಗಿ ದೇಶದ್ರೋಹಿಯಂತೆ ನಮ್ಮನ್ನು ನೋಡುತ್ತಿದ್ದಾರೆಂದು ಆತಂಕ ವ್ಯಕ್ತಪಡಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News