ಭಾರತದಲ್ಲಿ 2 ಕೋಟಿ ಮಕ್ಕಳು ಪ್ರಾಥಮಿಕ ಪೂರ್ವ ಶಿಕ್ಷಣದಿಂದ ವಂಚಿತ: ಯುನಿಸೆಫ್

Update: 2019-04-16 16:50 GMT

ಹೊಸದಿಲ್ಲಿ, ಎ.16:  ಜಗತ್ತಿನಾದ್ಯಂತದ ಒಟ್ಟು ಪ್ರಾಥಮಿಕ ಪೂರ್ವ ಶಾಲಾ ವಯಸ್ಸಿನ ಮಕ್ಕಳ ಅರ್ಧಾಂಶದಷ್ಟು ಮಂದಿ, ಅದರೆ 17.50 ಕೋಟಿ ಮಕ್ಕಳು ಪ್ರಾಥಮಿಕ ಪೂರ್ವ ಶಿಕ್ಷಣದಿಂದ ವಂಚಿತರಾಗಿದ್ದಾರೆ  ಎಂದು ವಿಶ್ವಸಂಸ್ಥೆಯ ಮಕ್ಕಳ ಶಿಕ್ಷಣ ಸಂಸ್ಥೆ (ಯುನಿಸೆಫ್) ಮಂಗಳವಾರ ವರದಿ ಮಾಡಿದೆ. 

ಭಾರತದಲ್ಲಿ ಅಂದಾಜು ೨  ಕೋಟಿ ಮಕ್ಕಳು ಈಗಲೂ ಪ್ರಾಥಮಿಕ ಪೂರ್ವ ಶಾಲೆ (ಅಂಗನವಾಡಿ, ಎಲ್‌ಕೆಜಿ, ಯುಕೆಜಿ ) ಗಳಿಗೆ ಸೇರ್ಪಡೆಗೊಳ್ಳುತ್ತಿಲ್ಲವೆಂದು ಅದು ಹೇಳಿದೆ ಹಾಗೂ ಗುಣಮಟ್ಟದ ಶಿಕ್ಷಣದ ಲಭ್ಯತೆಯ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದೆ.

‘‘ಪ್ರಾಥಮಿಕ ಪೂರ್ವ ಶಿಕ್ಷಣವು ನಮ್ಮ ಮಕ್ಕಳ ಶಿಕ್ಷಣದ ತಳಹದಿಯಾಗಿದೆ. ಆನಂತರ ದೊರೆಯುವ ಶಿಕ್ಷಣದ ಪ್ರತಿಯೊಂದು ಹಂತವೂ ಪ್ರಾಥಮಿಕ ಪೂರ್ವ ಶಿಕ್ಷಣದ ಯಶಸ್ಸನ್ನು ಅವಲಂಭಿಸಿದೆ ’’ ಎಂದು ಯುನಿಸೆಫ್‌ನ ಕಾರ್ಯಕಾರಿ ನಿರ್ದೇಶಕ ಹೆನ್ರಿಯೆಟಾ ಫೋರ್ ತಿಳಿಸಿದ್ದಾರೆ. ‘‘ ಆದಾಗ್ಯೂ, ಜಗತ್ತಿನಾದ್ಯಂತ ಹಲವಾರು ಮಕ್ಕಳಿಗೆ ಈ ಅವಕಾಶವು ನಿರಾಕರಿಸಲ್ಪಟ್ಟಿದೆ. ಪ್ರಾಥಮಿಕ ಪೂರ್ವ ಶಿಕ್ಷಣದ ಅಲಭ್ಯತೆಯಿಂದಾಗಿ ಶಾಲೆಗೆ ನೇರ ಪ್ರವೇಶ ಪಡೆಯುವ ಮಕ್ಕಳು  ಅನುತ್ತೀರ್ಣಗೊಳ್ಳುವ ಅಥವಾ  ಶಾಲೆಯಿಂದ ಹೊರಬೀಳುವ ಅಪಾಯವಿರುತ್ತದೆ ’’ ಎಂದು ಯುನಿಸೆಫ್ ಆತಂಕ ವ್ಯಕ್ತಪಡಿಸಿದೆ.

‘ ವರ್ಲ್ಡ್ ರೆಡಿ ಟು ಲರ್ನ್’ (ಕಲಿಕೆಗೆ ಸಿದ್ಧವಿರುವ ಜಗತ್ತು), ಎಂಬ ಹೆಸರಿನ ಈ ವರದಿಯು, ಶಿಶು ಶಿಕ್ಷಣಕ್ಕೆ ಆದ್ಯತೆ ನೀಡಬೇಕೆಂದು ಶಿಫಾರಸು ಮಾಡಿದೆ.  ಕನಿಷ್ಠ ಪಕ್ಷ ಒಂದು ವರ್ಷವಾದರೂ ಪ್ರಾಥಮಿಕ ಪೂರ್ವ ಶಿಕ್ಷಣಕ್ಕೆ ನೋಂದಣಿಗೊಳ್ಳುವುದರಿಂದ  ಶಾಲಾ ಶಿಕ್ಷಣದಲ್ಲಿ ಯಶಸ್ಸು ಪಡೆಯಲು ಅಗತ್ಯವಿರುವ ನೈಪುಣ್ಯತೆಗಳನ್ನು ಅಭಿವೃದ್ಧಿಪಡಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ ಅವರು ಯೌವನಕ್ಕೆ ಕಾಲಿಟ್ಟಾಗ ಅವರು ಶಾಂತಿಯುತ ಹಾಗೂ ಸಮೃದ್ಧಿಯುತ ಸಮಾಜಗಳಿಗೆ ಹಾಗೂ ಆರ್ಥಿಕತೆಗಳಿಗೆ ಕೊಡುಗೆಯನ್ನು ನೀಡಲು ಹೆಚ್ಚು ಸಮರ್ಥರಾಗಿರುತ್ತಾರೆ ಎಂದು ವರದಿ ಪ್ರತಿಪಾದಿಸಿದೆ.

ಪ್ರಾಥಮಿಕ ಪೂರ್ವ ಶಿಕ್ಷಣ ಪಡೆಯುವ ಮಕ್ಕಳು, ಆರಂಭಿಕ  ಹಂತದಲ್ಲೇ ಸಾಕ್ಷರತೆ  ಹಾಗೂ ಗಣಿತದಲ್ಲಿ ನೈಪುಣ್ಯತೆಗಳನ್ನು ಪಡೆಯುವ ಸಾಧ್ಯತೆ,  ಪ್ರಾಥಮಿಕ ಪೂರ್ವ ಶಿಕ್ಷಣದಿಂದ ವಂಚಿತರಾದ ಮಕ್ಕಳಿಗಿಂತ ಅಧಿಕವಾಗಿರುತ್ತದೆ ಎಂದು ಯುನೆಸ್ಕೊ ವರದಿ ತಿಳಿಸಿದೆ.

2004ರಲ್ಲಿ 3ರಿಂದ 6 ವರ್ಷದೊಳಗಿನ 70 ಶೇಕಡಕ್ಕೂ ಅಧಿಕ ಮಂದಿ ಮಕ್ಕಳು ಪ್ರಾಥಮಿಕ ಪೂರ್ವ ಶಿಕ್ಷಣದಲ್ಲಿ ಪಾಲ್ಗೊಂಡಿದ್ದರು. ಆದಾಗ್ಯೂ ಪ್ರಾಥಮಿಕ ಫೂರ್ವ ಶಿಕ್ಷಣದ ಗುಣಮಟ್ಟವು ಭಾರತದಲ್ಲಿ ತೀವ್ರ ಕಳವಳಕಾರಿಯಾಗಿದೆಯೆಂದು ಯುನೆಸ್ಕೊ ಹೇಳಿದೆ. ಆದಾಗ್ಯೂ ಭಾರತದ 2 ಕೋಟಿಗೂ ಅಧಿಕ ಮಂದಿ ಮಕ್ಕಳು ಪ್ರಾಥಮಿಕ  ಪೂರ್ವ  ಶಾಲಾ ಶಿಕ್ಷಣದಲ್ಲಿ ಪಾಲ್ಗೊಂಡಿಲ್ಲ ಹಾಗೂ ಅವರಲ್ಲಿ ಮೂರನೆ ಒಂದಂಶಕ್ಕಿಂತಲೂ ಅಧಿಕ ಮಂದಿ (ಶೇ.35) ಕಡುಬಡತನದ ಕುಟುಂಬಗಳಿಗೆ ಸೇರದವರಾಗಿದ್ದಾರೆಂದು ಎಂದು ವರದಿ ತಿಳಿಸಿದೆ.

ಸರಕಾರವು ನಡೆಸುವ ಅಂಗನವಾಡಿ ಕೇಂದ್ರಗಳು ಹಾಗೂ ಖಾಸಗಿ ನಿರ್ವಹಣೆಯ ಪ್ರಾಥಮಿಕ ಪೂರ್ವ ಶಾಲೆಗಳು (ಎಲ್‌ಕೆಜಿ,.ಯುಕೆಜಿ) ಭಾರತದಲ್ಲಿ ಲಭ್ಯವಿರುವ ಎರಡು ಪ್ರಮುಖ, ಶಿಶು ಶಿಕ್ಷಣದ ಎರಡು ಪ್ರಮುಖ ಮಾದರಿಗಳಾಗಿವೆ. ಈ ಎರಡು ಪ್ರಾಥಮಿಕ ಪೂರ್ವ ಶಿಕ್ಷಣದ ಮಾದರಿಗಳ ಗುಣಮಟ್ಟವು  ವಿಭಿನ್ನವಾಗಿರುವುದು ಕಳವಳಕಾರಿಯಾದ ವಿಷಯವೆಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News