ಕಾಂಗ್ರೆಸ್‌ನವರ ಅಪಪ್ರಚಾರಕ್ಕೆ ಕಿವಿಗೊಡಬೇಡಿ: ಡಿ.ವಿ.ಸದಾನಂದಗೌಡ

Update: 2019-04-16 17:18 GMT

ಬೆಂಗಳೂರು, ಎ.16: ನಾನು ಕ್ಷೇತ್ರದಿಂದ ಕಾಣೆಯಾಗಿದ್ದೇನೆ. ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಭೈರೇಗೌಡ ಸುಳ್ಳು ಆರೋಪ ಮಾಡುತ್ತಿದ್ದಾರೆ. ನನ್ನ ಕೆಲ ಪ್ರಶ್ನೆಗಳಿಗೆ ಅವರು ಉತ್ತರಿಸಲಿ ಎಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದಗೌಡ ಸವಾಲು ಹಾಕಿದ್ದಾರೆ.

ಮಂಗಳವಾರ ಸಂಜೆ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬಾಗಲೂರು ಸರ್ಕಲ್ ನಲ್ಲಿ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನಾನು ಕಾಣೆಯಾಗಿದ್ದೇನೆ ಎಂಬ ಕಾಂಗ್ರೆಸ್‌ನವರ ಅಪಪ್ರಚಾರಕ್ಕೆ ಕಿವಿಗೊಡಬೇಡಿ ಎಂದರು.

ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೇ ಅಪಪ್ರಚಾರ ಮಾಡುತ್ತಿದ್ದಾರೆ. ಇದನ್ನು ಬಿಟ್ಟು ಅವರಿಗೆ ಬೇರೆ ವಿಷಯಗಳೇ ಇಲ್ಲ. ರಕ್ಷಣಾ ಇಲಾಖೆಗೆ ಸೇರಿದ ಜಾಗವನ್ನು ರಾಜ್ಯ ಸರಕಾರ, ಬಿಡಿಎ, ಬಿಬಿಎಂಪಿಗೆ ಬಿಡಿಸಿಕೊಡಲು ಕೇಂದ್ರ ರಕ್ಷಣಾ ಸಚಿವರಾಗಿದ್ದ ಮನೋಹರ್ ಪರಿಕ್ಕರ್ ಅವರನ್ನೇ ಬೆಂಗಳೂರಿಗೆ ಕರೆಸಿ ಸಭೆ ನಡೆಸಿ ಸಮಸ್ಯೆಗಳನ್ನು ಇತ್ಯರ್ಥ ಮಾಡಲು ಶ್ರಮಿಸಿದ್ದೇನೆ. ಇದನ್ನು ಕೃಷ್ಣಭೈರೇಗೌಡ ಮರೆತಿರುವಂತಿದೆ ಎಂದು ಅವರು ಹೇಳಿದರು.

ಕರ್ನಾಟಕಕ್ಕೆ ಹೆಚ್ಚು ಅನುದಾನ ಕೊಡಿಸಲು ಕೇಂದ್ರದ ಮೇಲೆ ಒತ್ತಡ ಹೇರಲು ರಾಜ್ಯದ ಲೋಕಸಭಾ, ರಾಜ್ಯಸಭಾ ಸದಸ್ಯರ ಸಭೆಯನ್ನು ನಿಮ್ಮ ಮನೆಯಲ್ಲೇ ಕರೆಯಿರಿ ಎಂದು ಕೃಷ್ಣಭೈರೇಗೌಡ ಕೇಳಿಕೊಂಡರು. ಅದರಂತೆ ನಾನು ನಮ್ಮ ಮನೆಯಲ್ಲೇ ಸಭೆ ಕರೆದೆ. ಈ ಸಭೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕೇಂದ್ರದ ಮಾಜಿ ಸಚಿವರಾದ ಮಲ್ಲಿಕಾರ್ಜುನ ಖರ್ಗೆ, ವೀರಪ್ಪಮೊಯ್ಲಿ, ಕೆ.ಎಚ್.ಮುನಿಯಪ್ಪಮತ್ತಿತರ ಗಣ್ಯರು ಆಗಮಿಸಿದ್ದರು ಎಂದು ಅವರು ತಿಳಿಸಿದರು.

ಈ ಹಿಂದೆ ಕಾಂಗ್ರೆಸ್ ಆಡಳಿತವಿದ್ದಾಗ ರಾಜ್ಯಕ್ಕೆ ನೀಡಿದ್ದ ಅನುದಾನಕ್ಕಿಂತ ಪ್ರಧಾನಿ ನರೇಂದ್ರ ಮೋದಿ ಮೂರು ಪಟ್ಟು ಹೆಚ್ಚು ಅನುದಾನವನ್ನು ರಾಜ್ಯಕ್ಕೆ ನೀಡಿದ್ದಾರೆ. ಇದು ಸುಳ್ಳೇ. ಕೇಂದ್ರ ಸರಕಾರದಿಂದ ಹೆಚ್ಚು ಅನುದಾನ ಕೊಡಿಸಿದ್ದಕ್ಕಾಗಿ ಕೃಷ್ಣಭೈರೇಗೌಡರೇ ನನಗೆ ಕೃತಜ್ಞತೆ ಸಲ್ಲಿಸಿ ಇದೇ ಜನವರಿಯಲ್ಲಿ ಪತ್ರ ಬರೆದಿದ್ದಾರೆ. ಇಷ್ಟು ಬೇಗ ಮರೆತು ಹೋಯಿತೇ ಅಥವಾ ಜಾಣ ಮರೆವೇ ಎಂದು ಸದಾನಂದಗೌಡ ವ್ಯಂಗ್ಯವಾಡಿದರು.

ಕೇಂದ್ರೀಯ ವಿದ್ಯಾಲಯವನ್ನು ರಾಜ್ಯಕ್ಕೆ ತಂದಿಲ್ಲ ಎಂದು ಹೇಳುತ್ತಿದ್ದಾರೆ. ಯಶವಂತಪುರದಲ್ಲಿ ಕೇಂದ್ರೀಯ ವಿದ್ಯಾಲಯ ಮಂಜೂರಾಗಿರುವುದು ಅವರಿಗೆ ಗೊತ್ತಿಲ್ಲವೇ. ಜಾಲಹಳ್ಳಿಯಲ್ಲಿ ಪಾಸ್‌ಪೋರ್ಟ್ ಕಚೇರಿ ಸ್ಥಾಪಿಸಿದ್ದು ಇದರ ಉದ್ಘಾಟನೆಗೆ ಕರೆದರೆ ಕೃಷ್ಣಭೈರೇಗೌಡ ಆಗಮಿಸಲಿಲ್ಲ. ಇಂತಹವರನ್ನು ಪಾಸ್‌ಪೋರ್ಟ್, ವೀಸಾ ಕೊಟ್ಟು ಹೊರಗೆ ಕಳುಹಿಸಬೇಕೇ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಸಂಸದರ ಆದರ್ಶ ಗ್ರಾಮದಡಿ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿ ಮಾಡಲಾಗಿದೆ. ಇದು ಅವರಿಗೆ ಗೊತ್ತಿಲ್ಲವೇ? ಬ್ಯಾಟರಾಯನಪುರವೇನೂ ಪಾಕಿಸ್ತಾನದಲ್ಲಿದೆಯೇ ಎಂದು ಸದಾನಂದಗೌಡ ವಾಗ್ದಾಳಿ ನಡೆಸಿದರು.

ಕಳೆದ ಐದು ವರ್ಷದಲ್ಲಿ ಸಂಸದನಾಗಿ, ಕೇಂದ್ರ ಸಚಿವನಾಗಿ ಪ್ರಾಮಾಣಿಕವಾಗಿ ದುಡಿದಿದ್ದೇನೆ. ಯಾವುದೇ ಭ್ರಷ್ಟಾಚಾರ ನಡೆಸಿಲ್ಲ. ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ನನ್ನ ಸಾಧನೆಯನ್ನು ಅವಲೋಕಿಸಿ ಮತ ನೀಡಿ ಎಂದು ಅವರು ಮತದಾರರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಘಟಕದ ಅಧ್ಯಕ್ಷ ಪಿ.ಕೆ.ರಾಜಗೋಪಾಲ್, ಮುಖಂಡರಾದ ಬಾಗಲೂರು ಜಗನ್ನಾಥ್, ದೊಡ್ಡ ಬಸವರಾಜು ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News