ಸದಾನಂದಗೌಡ ಜನರೊಂದಿಗೆ ಬೆರೆತು ಕೆಲಸ ಮಾಡಿಲ್ಲ: ಕೃಷ್ಣ ಭೈರೇಗೌಡ

Update: 2019-04-16 18:13 GMT

ಬೆಂಗಳೂರು, ಎ.16: ಈ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ. ಈ ನಂಬಿಕೆಗೆ ಇಲ್ಲಿನ ಮತದಾರರು ನಮ್ಮ ಮೇಲಿಟ್ಟಿರುವ ಪ್ರೀತಿ, ವಿಶ್ವಾಸಗಳೇ ಕಾರಣ ಎಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಕೃಷ್ಣಭೈರೇಗೌಡ ಹೇಳಿದರು.

ಮಂಗಳವಾರ ಹೆಬ್ಬಾಳ ಹಾಗೂ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ರೋಡ್ ಶೋ ನಡೆಸುವ ಮೂಲಕ ಅಂತಿಮ ಹಂತದ ಬಹಿರಂಗ ಪ್ರಚಾರವನ್ನು ಕೈಗೊಂಡ ಸಂದರ್ಭದಲ್ಲಿ ಅವರು ಮಾತನಾಡಿದರು.

ಇಲ್ಲಿಂದ ಸಂಸದರಾಗಿ ಆಯ್ಕೆ ಆಗಿ ಹೋದ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ಇಲ್ಲಿನ ಜನರೊಂದಿಗೆ ಬೆರೆತು ಕೆಲಸ ಮಾಡಲಿಲ್ಲ. ಜತೆಗೆ ಕೇಂದ್ರದ ಬಿಜೆಪಿ ಸರಕಾರದಿಂದ ಇಲ್ಲಿನ ಜನರಿಗೆ, ಬೆಂಗಳೂರಿಗೆ ಮಹತ್ವದ ಯೋಜನೆಗಳೇನು ಸಿಕ್ಕಿಲ್ಲ ಎಂದು ಅವರು ಹೇಳಿದರು. ನಾನು ಸ್ಥಳೀಯನಾಗಿ ಇಲ್ಲಿನ ಜನರೊಂದಿಗೆ ಬೆರೆತು ಕೆಲಸ ಮಾಡಿದ್ದೇನೆ. ಜನರ ಕಷ್ಟ ಸುಖಗಳಲ್ಲಿ ಭಾಗಿಯಾಗಿದ್ದೇನೆ. ಇವೆಲ್ಲವೂ ನನ್ನ ಗೆಲುವಿಗೆ ಕಾರಣವಾಗಲಿವೆ ಎಂದು ಕೃಷ್ಣ ಭೈರೇಗೌಡ ವಿಶ್ವಾಸ ವ್ಯಕ್ತಪಡಿಸಿದರು.

ಬಹಿರಂಗ ಪ್ರಚಾರಕ್ಕೆ ಮುನ್ನ ಮಲ್ಲೇಶ್ವರಂ ಹಾಗೂ ಸಹಕಾರ ನಗರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ಸಭೆ ನಡೆಸಿದ ಕೃಷ್ಣಭೈರೇಗೌಡ, ಎರಡೂ ಪಕ್ಷಗಳ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಒಟ್ಟಿಗೆ ಕೆಲಸ ಮಾಡಬೇಕಾಗಿದೆ. ಹೀಗಾಗಿ ಎರಡೂ ಪಕ್ಷಗಳ ಕಾರ್ಯಕರ್ತರು ಮನೆ ಮನೆಗೆ ತೆರಳಿ ಮತ ನೀಡುವಂತೆ ಜನರಲ್ಲಿ ಮನವಿ ಮಾಡಿ ಎಂದು ಕರೆ ನೀಡಿದರು.

ಬಹಿರಂಗ ಪ್ರಚಾರ ಅಂತ್ಯ: ಬೆಳಗ್ಗೆ ಆರೂವರೆಗೆ ಚುನಾವಣಾ ಪ್ರಚಾರ ಆರಂಭಿಸಿದ ಕೃಷ್ಣಭೈರೇಗೌಡ, ಹೆಬ್ಬಾಳದ ಪಶುವೈದ್ಯಕೀಯ ಕಾಲೇಜು ಆವರಣಕ್ಕೆ ತೆರಳಿ ಅಲ್ಲಿ ವಾಯು ವಿಹಾರಕ್ಕೆ ಬಂದಿದ್ದ ನಾಗರಿಕರನ್ನು ಭೇಟಿಯಾಗಿ ಮತ ನೀಡುವಂತೆ ಮನವಿ ಮಾಡಿದರು.

ಬಳಿಕ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ರಾಮಮೂರ್ತಿ ನಗರಕ್ಕೆ ತೆರಳಿ, ತೆರೆದ ವಾಹನದಲ್ಲಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮತ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು. ಈ ವೇಳೆ ಕೆ.ಆರ್.ಪುರ ಶಾಸಕ ಭೈರತಿ ಬಸವರಾಜು ಹಾಗೂ ಕಾಂಗ್ರೆಸ್-ಜೆಡಿಎಸ್ ಪಕ್ಷದ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

ಕೆ.ಆರ್.ಪುರದಲ್ಲಿ ಚುನಾವಣಾ ಪ್ರಚಾರ ಮುಗಿಸಿದ ಬಳಿಕ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಹೆಬ್ಬಾಳ ಹಾಗೂ ನಾಗೇನಹಳ್ಳಿಗಳಲ್ಲಿ ರೋಡ್ ಶೋ ನಡೆಸುವ ಮೂಲಕ ಮತಯಾಚನೆ ಮಾಡಿದರು. ಈ ವೇಳೆ ಶಾಸಕ ಭೈರತಿ ಸುರೇಶ್ ಹಾಗೂ ಮೈತ್ರಿ ಪಕ್ಷದ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News